13ನೇ ಒಣ ಮೆಣಸಿನಕಾಯಿ ಮೇಳಕ್ಕೆ ಚಾಲನೆ ಬೆಳಗಾರರಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪನೆ-ಅಬ್ಬಯ್ಯ ಪ್ರಸಾದ್
ಹುಬ್ಬಳ್ಳಿ 31: ಬೆಳೆಗಾರರು ಬೆಳೆ ಉಳುಮೆಯಿಂದ ಹಿಡಿದು ಮಾರಾಟ ಮಾಡುವವರಿಗೆ ತರಬೇತಿ ನೀಡಲು ತರಬೇತಿ ಕೇಂದ್ರದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಬೆಳಗಾರರಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕರ್ನಾಟಕ ಕೊಳಚೆ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾದ ಅಬ್ಬಯ್ಯ ಪ್ರಸಾದ ಹೇಳಿದರು.
ಇಂದು ಅಮರಗೋಳದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವಿವಿಧೋದ್ದೇಶ ವಸ್ತು ಪ್ರದರ್ಶನ ಆವರಣದಲ್ಲಿ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ತೋಟಗಾರಿಕೆ ಇಲಾಖೆ (ಜಿಲ್ಲಾ ಪಂಚಾಯತ) ಧಾರವಾಡ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹುಬ್ಬಳ್ಳಿ, ಅಮರಶಿವ ರೈತ ಉತ್ಪಾದಕ ಸಂಸ್ಥೆ ಸಂಶಿ (ಕುಂದಗೋಳ) ಹಾಗೂ ಉಳವಾಯೋಗಿ ರೈತ ಉತ್ಪಾದಕರ ಸಂಸ್ಥೆ ಹುಬ್ಬಳ್ಳಿ ಇವುಗಳ ಸಹಯೋಗದಲ್ಲಿ ಆಯೋಜಿಸಿದ್ದ 13ನೇ ಒಣ ಮೆಣಸಿನಕಾಯಿ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಳಗಾರರಿಗೆ ತರಬೇತಿ ನೀಡುವ ಕೇಂದ್ರ ಕೊಚ್ಚಿನ್‌ನಲ್ಲಿದೆ. ತರಬೇತಿ ಕೇಂದ್ರ ತೆರೆಯಲು ಅಧಿಕಾರಿಗಳು ಮನವಿ ಮಾಡಿದರೆ, ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು. ಅಲ್ಲದೇ ಎಪಿಎಂಸಿ ಹತ್ತಿರದಲ್ಲಿ ರೈಲ್ ಪಾಯಿಂಟ್ ತೆರೆಯಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಒಪ್ಪಿಗೆಯನ್ನು ನೀಡಿವೆ. ಇದರಿಂದ ಸರಕು ಸಾಗಾಟಕ್ಕೆ ಅನುಕೂಲವಾಗಲಿದೆ. ಏಷ್ಯಾದ ಎರಡನೇ ಅತಿ ದೊಡ್ಡ ಎಪಿಎಂಸಿ ಮಾರುಕಟ್ಟೆ ಇದಾಗಿದೆ. ಯಾವುದೇ ಕಾರಣಕ್ಕೂ ಎಪಿಎಂಸಿ ಮುಚ್ಚುವಂತಿಲ್ಲ. ಎಪಿಎಂಸಿಯಲ್ಲಿ ರೈತ ಭವನ, ಕುಡಿಯುವ ನೀರು, ವಿದ್ಯುತ್ ಪೂರೈಕೆ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಒಣ ಮೆಣಸಿನಕಾಯಿ ಮೇಳದಲ್ಲಿ 100 ಮಳಿಗೆಗಳನ್ನು ತೆರೆಯಲಾಗಿದೆ. ಕಳೆದ ಬಾರಿ 447 ಕ್ವಿಂಟಲ್ ಮಾರಾಟದಿಂದ ರೂ. 1.37 ಕೋಟಿ ವಹಿವಾಟು ಆಗಿತ್ತು. ಕಳೆದ ಬಾರಿಗಿಂತ ಈ ವರ್ಷ ಹೆಚ್ಚು ವಹಿವಾಟು ನಡೆಯುವ ನೀರೀಕ್ಷೆಯಿದೆ. 1.50 ಲಕ್ಷ ವಿಸ್ತೀರ್ಣದಲ್ಲಿ 1.71 ಲಕ್ಷ ಮೆಟ್ರಿಕ್ ಟನ್ ಉತ್ಪನ್ನ ಬರಲಿದೆ. ಮೇಳದಿಂದ ಗ್ರಾಹಕರು ಮತ್ತು ವ್ಯಾಪಾರಸ್ಥರನ್ನು ಒಂದೇ ವೇದಿಕೆಯಡಿ ಸೇರಿಸಲಾಗುತ್ತದೆ. ಇದರಿಂದ ದಲ್ಲಾಳಿಗಳು ಪ್ರವೇಶ ಮಾಡುವುದಿಲ್ಲ. ನೇರವಾಗಿ ಗ್ರಾಹಕರು ಒಣಮೆಣಸಿನಕಾಯಿ ಖರೀದಿ ಮಾಡಬಹುದು. ಅಲ್ಲದೆ ವಿವಿಧ ತಳಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಬ್ಯಾಡಗಿ ಮೆಣಸಿನಕಾಯಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯನ್ನು ಹೊಂದಿದೆ. ಗದಗ, ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಮೆಣಸಿನಕಾಯಿ ಬೆಳೆಯಲಾಗುತ್ತದೆ. ರೈತರು ದೇಶದ ಬೆನ್ನೆಲುಬು, ಅವರಿಗೆ ಶಕ್ತಿ ತುಂಬಲು ಮೇಳವನ್ನು ಆಯೋಜನೆ ಮಾಡಲಾಗಿದೆ. ರೈತರ ಪರಿಸ್ಥಿತಿ ಸುಧಾರಿಸಬೇಕಿದೆ. ರೈತರು ಹೆಚ್ಚಾಗಿ ಮೇಳದಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾದ ಎಸ್.ಪಿ. ಸಂಶಿಮಠ, ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಆರ್.ಗೀರೀಶ್, ಹೆಚ್.ಆರ್.ನಾಯ್ಕ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಕಾಶಿನಾಥ ಭದ್ರನ್ನವರ, ಯೋಗೇಶ ಕಿಲಾರಿ, ಆನಂದ ಸೇರಿದಂತೆ ಅಧಿಕಾರಿಗಳು, ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.