ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಸಂಭ್ರಮ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸ್ರಹಸ್ರಾರು ಮಾಲಾಧಾರಿಗಳು

Thousands of garland garlanders arriving at Anjanadri Hill for a special celebration of Hanuman gar

 ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಸಂಭ್ರಮ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸ್ರಹಸ್ರಾರು ಮಾಲಾಧಾರಿಗಳು 

ಕೊಪ್ಪಳ  12: ಆಂಜನೇಯ ಸ್ವಾಮಿ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದಲ್ಲಿ ಗುರುವಾರ ಸ್ರಹಸ್ರಾರು ಸಂಖ್ಯೆಯ ಹನುಮ ಮಾಲಾಧಾರಿಗಳು ಆಗಮಿಸುತ್ತಿರುವುದರಿಂದ ಅಂಜನಾದ್ರಿಯಲ್ಲಿ ವಿಶೇಷ ಸಂಭ್ರಮ ಕಂಡುಬಂದಿತು. 

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ (ಚಿಕ್ಕರಾಂಪುರ) ಗ್ರಾಮದಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಪ್ರತಿವರ್ಷದಂತೆ ಈ ವರ್ಷ ನಡೆಯುತ್ತಿರುವ ಹನುಮಮಾಲ ನಿಸರ್ಜನೆ ಕಾರ್ಯಕ್ರಮಕ್ಕೆ ಕರ್ನಾಟಕದ ಸೇರಿದಂತೆ ಬೇರೆ ಬೇರೆ ಕಡೆಯಿಂದಲೂ ಹನುಮ ಮಾಲಾಧಾರಿಗಳು, ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳು, ಬಸ್ ಹಾಗೂ ಕಾಲ್ನಡಿಗೆ ಮೂಲಕ ಅಂಜನಾದ್ರಿಗೆ ಆಗಮಿಸುತ್ತಿದ್ದಾರೆ. ಮಾಲಾಧಾರಿಗಳಿಗಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವತಿಯಿಂದ ಅಂಜನಾದ್ರಿಯಲ್ಲಿ ಭಕ್ತರಿಗೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದ್ದು, ಎಲ್ಲಾ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿವೆ. 

ಅಂಜನಾದ್ರಿಯ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪಾದಗಟ್ಟೆಯ ಪ್ರದೇಶದಲ್ಲಿ ವಿಶೇಷ ರೀತಿಯಲ್ಲಿ ಶೃಂಗರಿಸಲಾಗಿದ್ದು, ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಬೆಟ್ಟದ ಮೇಲೆ ಹಾಗೂ ಬೆಟ್ಟ ಹತ್ತುವ ಮಾರ್ಗದಲ್ಲಿಯೂ ಸಹ ಹೂಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಅಂಜನಾದ್ರಿಯತ್ತ ಹನುಮ ಭಕ್ತರು ತಂಡೊಪ ತಂಡವಾಗಿ ಆಗಮಿಸುತ್ತಿರುವುದು ರಸ್ತೆಗಳಲ್ಲಿ ಕಂಡುಬರುತ್ತಿದೆ. ಭಕ್ತರು ಜೈ ಶ್ರೀರಾಮ್, ಜೈ ಹನುಮಾನ ಎಂಬ ಘೋಷಣೆಗಳನ್ನು ಕೂಗುತ್ತಾ ಗುಡಿಯತ್ತ ಸಾಗುತ್ತಿದ್ದಾರೆ.  

ಭಕ್ತಾಧಿಗಳ ಆರೋಗ್ಯದ ಹಿತದೃಷ್ಟಿಯಿಂದ ವೈದ್ಯರ ತಂಡಗಳು ಕಾರ್ಯನಿರ್ವಹಿಸುತ್ತಿವೆ ಹಾಗೂ ಅಗತ್ಯ ಓಷಧಿಗಳು, ಎರಡು ಅಂಬುಲೆನ್ಸ್‌ ತುರ್ತು ಸೇವೆಗಾಗಿ ಕಾಯ್ದಿರಿಸಲಾಗಿದೆ. ಪೊಲೀಸ್ ಭದ್ರತೆಗಾಗಿ ಹೊರ ಪೊಲೀಸ್ ಠಾಣೆ ಹಾಗೂ ಸಹಾಯವಾಣಿ ಕೇಂದ್ರಗಳನ್ನು ಸಹ ತೆರೆಯಲಾಗಿದೆ. 

ಶಾಸಕರಿಂದ ಪರೀಶೀಲನೆ: ಹನುಮಾಲೆ ಧರಿಸಿ ಅಂಜನಾದ್ರಿಗೆ ಆಗಮಿಸಿದ ಗಂಗಾವತಿ ಶಾಸಕರಾದ ಜಿ.ಜನಾರ್ಧನರೆಡ್ಡಿ ಅವರು ಕಾರ್ಯಕ್ರಮದ ವ್ಯವಸ್ಥೆಯನ್ನು ಪರೀಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿಯ ಹನುಮಮಾಲ ವಿಸರ್ಜನೆಗಾಗಿ ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಾಲಾಧಾರಿಗಳು ಆಗಮಿಸುತ್ತಿದ್ದಾರೆ. ಭಕ್ತಾಧಿಗಳಿಗಾಗಿ ಕುಡಿಯುವ ನೀರಿನ ವ್ಯವಸ್ಥೆ, ಸ್ನಾನದ ವ್ಯವಸ್ಥೆ, ಪ್ರಸಾದ, ದೇವಸ್ಥಾನದಲ್ಲಿ ದರ್ಶನಕ್ಕೆ ವ್ಯವಸ್ಥೆ, ಪೊಲೀಸ್ ಭದ್ರತೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಜಿಲ್ಲಾಡಳಿತದಿಂದ ವ್ಯವಸ್ಥಿತವಾಗಿ ಮಾಡಲಾಗಿರುತ್ತದೆ. ಇದರ ಜೊತೆಗೆ ಗಂಗಾವತಿ ನಗರದಲ್ಲಿ ನಡೆಯುವ ಸಂಕೀರ್ತನಾ ಯಾತ್ರೆಗೂ ಸಹ ಅಗತ್ಯ ಸಹಕಾರ ನೀಡಲಾಗಿದೆ ಎಂದರು.  

ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಹೆಚ್‌. ಪ್ರಕಾಶರಾವ್ ಅವರು ಮಾತನಾಡಿ, ಹನುಮಮಾಲಾ ವಿಸರ್ಜನ ಕಾರ್ಯಕ್ರಮ ಗುರುವಾರ ಮತ್ತು ಶುಕ್ರವಾರ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಿದ್ದಾರೆ. ಕೊಪ್ಪಳ ಜಿಲ್ಲಾಡಳಿತ, ಗಂಗಾವತಿ ತಾಲ್ಲೂಕು ಆಡಳಿತ ಮತ್ತು ಧಾರ್ಮಿಕ ದತ್ತಿ ಇಲಾಖೆಯಿಂದ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹಂತ ಹಂತವಾಗಿ ಸಭೆಗಳನ್ನು ಕೈಗೊಂಡು ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಬೆಟ್ಟದ ಮೇಲ್ಭಾಗದಲ್ಲಿ ದರ್ಶನದ ವ್ಯವಸ್ಥೆಯು ಅತ್ಯಂತ ಸೂಕ್ತ ರೀತಿಯಲ್ಲಾಗಬೇಕೆಂಬ ಜಿಲ್ಲಾಡಳಿತ ಉದ್ದೇಶದಂತೆ ಈ ವರ್ಷ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಭಕ್ತಾಧಿಗಳಿಗಾಗಿ ಊಟದ ವ್ಯವಸ್ಥೆ, ಸ್ನಾನದ ವ್ಯವಸ್ಥೆ, ಪಾರ್ಕಿಂಗ್ ಹಾಗೂ ಇತರ ವ್ಯವಸ್ಥೆಗಳನ್ನು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮಾಡಲಾಗಿದೆ. ಎಲ್ಲಾ ಕಡೆ ಸ್ವಚ್ಛತೆ, ನೈರ್ಮಲಿಕರಣಕ್ಕೂ ಕ್ರಮ ವಹಿಸಲಾಗಿದೆ. 70 ಸಾವಿರದಿಂದ 1 ಲಕ್ಷಕ್ಕೂ ಮೇಲ್ಪಟ್ಟು ಭಕ್ತಾಧಿಗಳು ಈ ಕಾರ್ಯಕ್ರಮಕ್ಕೆ ಬರುವ ನೀರೀಕ್ಷೆಯಿದೆ. ಪ್ರಸಾದವಾಗಿ ಭಕ್ತಾಧಿಗಳಿಗೆ ಲಡ್ಡು, ದಾರ, ಸಿಂಧೂರ ಮತ್ತು ತೀರ್ಥ ಬಾಟಲಿ ನೀರು ನೀಡುವ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದರು.  

ಈ ಸಂದರ್ಭದಲ್ಲಿ ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಲಗಿತ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಗಂಗಾವತಿ ತಹಶೀಲ್ದಾರ ಯು.ನಾಗರಾಜ, ಕನಕಗಿರಿ ತಹಶೀಲ್ದಾರ ವಿಶ್ವನಾಥ ಮುರಡಿ, ಗಂಗಾವತಿ ನಗರಸಭೆ ಪೌರಾಯುಕ್ತ ಆರ್‌.ವಿರುಪಾಕ್ಷಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.