ಜ್ಞಾನ ಇದ್ದವರು ಜಗತ್ತು ಆಳುತ್ತಾರೆ: ಸಾಹಿತಿ ಡಾ ವಿ ಎಸ್ ಮಾಳಿ
ಮಾಂಜರಿ 28: ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಅವಕಾಶ ಕೊಟ್ಟರೆ ಅವರು ಯಾವುದೇ ಮಕ್ಕಳ ಜತೆ ಪೈಪೋಟಿ ಮಾಡುತ್ತಾರೆ. 21ನೇ ಶತಮಾನ ಜ್ಞಾನದ ಶತಮಾನ. ಜ್ಞಾನ ಇದ್ದವರು ಜಗತ್ತನ್ನು ಆಳುತ್ತಾರೆ ಎಂದು ಸಾಹಿತಿ ಡಾ ವಿ ಎಸ್ ಮಾಳಿ ಹೇಳಿದರು.
ಅವರು ಸೋಮವಾರರಂದು ಚೀಕೋಡಿ ತಾಲೂಕಿನ ಅಂಕಲಿ ಗ್ರಾಮದ ಗೋಮ್ಮಟೇಶ್ ಶಿಕ್ಷಣ ಸಂಸ್ಥೆಯ ಡಾ ಎನ್ ಈ ಮಗದುಮ್ ಸಿ ಬಿ ಎಸ್ ಸಿ ಪಬ್ಲಿಕ್ ಸ್ಕೂಲ್ ವಾರ್ಷಿಕ ಸಮಾರಂಭ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಒಂದು ಕಾಲದಲ್ಲಿ ಯಾರ ಬಳಿ ಭೂಮಿ ಇತ್ತೋ ಅವರು ಜಗತ್ತು ಆಳುತ್ತಿದ್ದರು. ಈಗ ಯಾರ ಬಳಿ ಜ್ಞಾನ ಇದೆಯೋ ಅವರು ಜಗತ್ತನ್ನು ಆಳುತ್ತಾರೆ. ಜ್ಞಾನದಿಂದ ವಿಜ್ಞಾನ ಬರುತ್ತದೆ. ವಿಜ್ಞಾನದಿಂದ ತಂತ್ರಜ್ಞಾನ ಬರುತ್ತದೆ. ಹೀಗೆ ಮಕ್ಕಳು ಬೆಳೆಯುತ್ತಾರೆ. ಹುಟ್ಟಿನಿಂದ ಯಾರೂ ಪ್ರತಿಭಾವಂತರಿರುವುದಿಲ್ಲ. ನಾವು ಯಾವ ರೀತಿಯ ಶಿಕ್ಷಣ ನೀಡುತ್ತೇವೆ. ಶಿಕ್ಷಣಸಂಸ್ಥೆಯಲ್ಲಿ ನಾವು ಹೇಗೆ ಗುಣಮಟ್ಟ ಉಳಿಸಿಕೊಳ್ಳುತ್ತೇವೆಯೋ ಹಾಗೇ ಮಕ್ಕಳು ಬೆಳೆಯುತ್ತಾರೆ ಎಂದರು.
ನಮ್ಮ ದೇಶಕ್ಕೆ ನಮ್ಮಷ್ಟಕ್ಕೆ ನಾವು ಗಣರಾಜ್ಯ ಎಂದು ಒಪ್ಪಿಕೊಂಡು 76 ವರ್ಷ ಆಗಿದೆ. ದೇಶ ಬಹಳಷ್ಟು ಪ್ರಗತಿ ಕಂಡಿದೆಪ್ರಜಾಪ್ರಭುತ್ವದ ಬೇರು ಗಟ್ಟಿಯಾಗಿವೆ. ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಎಲ್ಲವನ್ನೂ ಸಂವಿಧಾನದಿಂದ ಕಾಪಾಡಿಕೊಂಡು ಬಂದಿದ್ದೇವೆ ಎಂದು ಅವರು ಹೇಳಿದರು. ಸಂಸ್ಥೆಯ ಅಧ್ಯಕ್ಷ ಡಾ. ಎನ ಎ ಮುಗದುಮ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ನಮ್ಮ ಸಂಸ್ಥೆ ಬದ್ಧವಾಗಿದ್ದು ಮುಂದಿನ ದಿನಮಾನಗಳಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಅಳವಡಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುವುದೆಂದು ಅವರು ಹೇಳಿದರು.
ಸಮಾರಂಭದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಲಲಿತಾ ಮಗದುಮ, ಸುರೇಶ್ ಚೌಗುಲಾ, ವೈಶಾಲಿ ಚೌಗುಲಾ, ಸುಶೀಲಾ ಚೌಗುಲಾ, ಹರ್ಷವರ್ಧನ್ ಮಗದುಮ, ಪೂರ್ವ ಜಾದವ್ ಹಾಗೂ ಇನ್ನಿತರರು ಹಾಜರಿದ್ದರು. ಪ್ರಾಚಾರ್ಯ ಎನ್‌ಎಸ್ ನಿಡುಗುಂದೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಶಿಕ್ಷಕ ಮಾನೆ ನಿರೂಪಿಸಿ ವಂದಿಸಿದರು.