ಕೃಷಿಯೊಂದಿಗೆ ಉಪ ಕಸುಬುಗಳೂ ಇರಲಿ: ಸಚಿವ ನಾಡಗೌಡ ಸಲಹೆ

ಬೆಂಗಳೂರು 7: ರೈತರು ಕೃಷಿಯೊಂದಿಗೆ ಇತರ ಉಪ ಕಸುಬುಗಳನ್ನು ಅಳವಡಿಸಿಕೊಂಡರೆ ಲಾಭ ಖಚಿತವಾಗಿದ್ದು, ಅವರಿಗೆ ಆತ್ಮಹತ್ಯೆಯಂತಹ ಸನ್ನಿವೇಶ ಎದುರಾಗುವುದಿಲ್ಲ. ಇದನ್ನು ಯುವಕರು ಮನಗಂಡು ಕೃಷಿಯತ್ತ ಒಲವು ತೋರಿಸಬೇಕು ಎಂದು ಮೀನುಗಾರಿಕೆ ಹಾಗೂ ಪಶುಸಂಗೋಪನಾ ಸಚಿವ ವೆಂಕಟರಾಂ ನಾಡಗೌಡ ತಿಳಿಸಿದರು. 

   ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ, ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ, ದಕ್ಷಿಣ ಭಾರತೀಯ ಪ್ರಾಂತೀಯ ಪರಿಷತ್ತಿನ ರಾಜ್ಯದ 8 ಶಾಖೆಗಳ ಸಂಯುಕ್ತಾಶ್ರಯದಲ್ಲಿ  ನಡೆದ 16ನೇ ರಾಜ್ಯಮಟ್ಟದ ಸಮರ್ಥ ಲೆಕ್ಕಪರಿಶೋಧಕರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಜಿಎಸ್ ಟಿಯಿಂದ ಕಾಗದ ಮುಕ್ತ ವ್ಯವಹಾರ ನಡೆಯಬೇಕೆಂಬ ಆದೇಶ ರವಾನೆಯಾಗಿದ್ದು, ಇದರಿಂದ ರೈತರಿಗೆ ಆಗುವ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ಚರ್ಚೆ  ನಡೆಯಬೇಕಿದೆ ಎಂದು ಅವರು ಹೇಳಿದರು. ದೇಶ ವೇಗವಾಗಿ ಬದಲಾವಣೆಯತ್ತ ಸಾಗುತ್ತಿದ್ದು, ಕೃಷಿ ಕ್ಷೇತ್ರವನ್ನು ಕಡೆಗಣಿಸಲಾಗುತ್ತಿದೆ. ಮುಂದೆ ಉದ್ಯಮಿಗಳು ಕೃಷಿಯತ್ತ ಮುಖಮಾಡುವ ಪರಿಸ್ಥಿತಿ ನಿರ್ಮಾಣ ವಾದರೆ ಅತಿಶಯೋಕ್ತಿ ಯಲ್ಲ. ವಿದ್ಯಾರ್ಥಿ ಗಳು  ಹಾಗೂ ಪೋಷಕರು ಇಂಜಿನಿಯರಿಂಗ್  ಅಥವಾ ವ್ಯದ್ಯಕೀಯ ಶಿಕ್ಷಣ ಪಡೆಯಲು ಬಯಸುತ್ತಾರೆಯೇ ವಿನಹ ಕಷ್ಟ ಎಂದು ಯಾರೂ ಸಿಎ ಮಾಡಲು ಮುಂದಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಪಿಯುಸಿ ಹಂತದಲ್ಲೇ ವಿದ್ಯಾರ್ಥಿ ಗಳಿಗೆ  ಸಿಎ ಕೋರ್ಸ  ಕುರಿತು ಅರಿವು ಮೂಡಿಸಲಾಗುವುದು ಎಂದು ಅವರು ಭರವಸೆ ನೀಡಿದರು. 

 ಸರಕಾರ  ಈಗಾಗಲೇ ರಾಜ್ಯಾದ್ಯಂತ 9 ಜಿಲ್ಲೆಗಳಲ್ಲಿ ವಿವಿಧ ಕೈಗಾರಿಕೆಯನ್ನು ಆರಂಭಿಸಿದ್ದು, ಲೆಕ್ಕಪರಿಶೋಧಕರು ಇದಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಅವರು ತಿಳಿಸಿದರು.   ಸಂಸ್ಥೆಯ ಎಸ್ ಐ ಆರ್ ಸಿ ಅಧ್ಯಕ್ಷ ಜೋಮನ್ ಕೆ ಜಾರ್ಜ್ ಮಾತನಾಡಿ, ವಿದೇಶಗಳಲ್ಲಿ 5ಲಕ್ಷ ಲೆಕ್ಕಪರಿಶೋಧಕರಿಗೆ  ಬೇಡಿಕೆಯಿದ್ದು, ಕಷ್ಟಪಟ್ಟು ಸಿಎ ಅಧ್ಯಯನ ಮಾಡಿದರೆ ಪ್ರಾರಂಭದಲ್ಲೇ 70 ಸಾವಿರದಿಂದ 1 ಲಕ್ಷದ ವರೆಗೆ ದುಡಿಯಬಹುದಾಗಿದೆ. ಈ ಕೋರ್ಸ ಮಾಡಲು ಯಾವುದೇ ಜಾತಿ, ಮೀಸಲಾತಿಗಳ ಭೇದವಿಲ್ಲ. ಯುವಜನತೆಯಲ್ಲಿ ಸಿಎ ಕುರಿತು ಹೆಚ್ಚಿನ ಅರಿವು ಮೂಡಿಸಬೇಕಾಗಿದೆ. ಈ ಕುರಿತಂತೆ ಆ್ಯಪ್ ಬಿಡುಗಡೆ ಮಾಡಿದ್ದು, ವಿದ್ಯಾರ್ಥಿ ಗಳು ಈ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಅವರು ವಿವರಿಸಿದರು. ಕಾರ್ಯಕ್ರಮದಲ್ಲಿ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಬೆಂ. ವಿಭಾಗದ ಅಧ್ಯಕ್ಷ ಶಿವರಾಮ ಭಟ್ಟ, ಲೆಕ್ಕ ಪರಿಶೋಧಕ ಕ್ಷೇತ್ರದ ತಜ್ಞರಾದ ಸಿಎ ಅಬ್ದುಲ್ ಮಜೀದ್ ಜೆ, ದಯಾನಿವಾಸ್ ಶರ್ಮ ,ವಿ.ರಘುರಾಮನ್ ಭಾಗವಹಿಸಿದ್ದರು. 

*****************