ರಂಗ ಸಂಗೀತೋಪಾಸಕ ವಿರೂಪಾಕ್ಷಪ್ಪ ಇಟಗಿ ಪುಸ್ತಕ ಬಿಡುಗಡೆ

Theater musician Virupakshappa Itagi book release


ರಂಗ ಸಂಗೀತೋಪಾಸಕ ವಿರೂಪಾಕ್ಷಪ್ಪ ಇಟಗಿ  ಪುಸ್ತಕ ಬಿಡುಗಡೆ  

ಹಂಪಿ 17: ಸಂಗೀತಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಸಣ್ಣವರು, ದೊಡ್ಡವರು ಎಂಬ ತಾರತಮ್ಯವಿಲ್ಲ ಎಂದು ಬಳ್ಳಾರಿಯ ಹಿಂದೂಸ್ತಾನಿ ಸಂಗೀತಗಾರರಾದ ದೊಡ್ಡಯ್ಯ ಗವಾಯಿಗಳು ವಿದ್ಯಾರ್ಥಿಗಳನ್ನುದ್ದೇಶಿಸಿ ನುಡಿದರು.ಕನ್ನಡ ವಿಶ್ವವಿದ್ಯಾಲಯ ಸಂಗೀತ ಮತ್ತು ನೃತ್ಯ ವಿಭಾಗ ಹಾಗೂ ಪಂಡಿತ್ ವಿರೂಪಾಕ್ಷಪ್ಪ ಇಟಗಿ ಶಿಷ್ಯ ಬಳಗ ಇವರ ಸಹಯೋಗದಲ್ಲಿ ಮಂಟಪ ಸಭಾಂಗಣದಲ್ಲಿ ದಿನಾಂಕ 17.12.2024ರಂದು ರಂಗ ಸಂಗೀತೋಪಾಸಕ ವಿರೂಪಾಕ್ಷಪ್ಪ ಇಟಗಿ ಪುಸ್ತಕ ಬಿಡುಗಡೆ ಹಾಗೂ ಸಂಗೀತ ಮತ್ತು ನೃತ್ಯ ವಿಭಾಗದ ಹಳೆಯ ವಿದ್ಯಾರ್ಥಿಗಳ ಹಾಗೂ ಪಾಲಕರ ಸಮಾವೇಶವನ್ನು ತಂಬೂರಿ ಮೀಟಿ ಉದ್ಘಾಟಿಸುತ್ತ ಮಾತನಾಡಿದರು. 

ರಂಗ ಸಂಗೀತೋಪಾಸಕ ವಿರೂಪಾಕ್ಷಪ್ಪ ಇಟಗಿ ಪುಸ್ತಕವನ್ನು ಬಿಡುಗಡೆ ಮಾಡಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಯನಾಂಗದ ನಿರ್ದೇಶಕರಾದ ಡಾ. ಅಮರೇಶ ಯತಗಲ್ ಮಾತನಾಡುತ್ತ, ಈ ಪುಸ್ತಕವು ಮುಂದಿನ ತಲೆಮಾರಿಗೆ ದಾರೀದೀಪವಾಗಿದೆ. ವಿರೂಪಾಕ್ಷಪ್ಪ ಇಟಗಿಯವರು ಶಾಲೆಗೇ ಹೋಗದ ಸಾಧಕ ಏಕಲವ್ಯನಂತೆ ಸಂಗೀತೋಪಾಸನೆ ಮಾಡಿದ್ದಾರೆ. ನಾದವನ್ನು ನಾದಬೇಕು ಎಂದು ಕಂಬಾರರು ಹೇಳಿದಂತೆ ಸಂಗೀತ ವಿಭಾಗದಲ್ಲಿ ಸಂಗೀತ ಕಲಿಕೆ ನಡೆಯುತ್ತಿದೆ. ಸಂಗೀತ ಮತ್ತು ನೃತ್ಯ ವಿಭಾಗವು ಹೊಸ ಹೊಸ ಪ್ರಯೋಗಗಳನ್ನು ಮಾಡಿಕೊಂಡು ಬರುತ್ತಿದೆ. ಸಮಾಜಕ್ಕೂ ಮತ್ತು ಕನ್ನಡ ವಿಶ್ವವಿದ್ಯಾಲಯಕ್ಕೂ ಸೇತುವೆ ಕಟ್ಟುವ ಕೆಲಸವನ್ನು ಪಾಲಕರ ಸಮಾವೇಶದ ಮೂಲಕ ಮಾಡುತ್ತಿದೆ ಎಂದು ತಿಳಿಸಿದರು. 

ವಿರೂಪಾಕ್ಷಪ್ಪ ಇಟಗಿಯವರನ್ನು ಹಾಗೂ ದೊಡ್ಡಯ್ಯ ಗವಾಯಿಗಳನ್ನು ಗೌರವಿಸಿ, ನಂತರ ಅಧ್ಯಕ್ಷೀಯ ಮಾತುಗಳನ್ನಾಡಿದ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಪ್ರೀತಿಯ ಹೃದಯಗಳಿಂದ ಸನ್ಮಾನಕ್ಕೆ ಒಳಗಾದ ವಿರೂಪಾಕ್ಷಪ್ಪ ಇಟಗಿಯವರು ನಮ್ಮಲ್ಲೆ ಇರುವ ಅಮೂಲ್ಯ ರತ್ನ. ಇಂದಿನ ಕಾಲ ಪ್ರಚಾರ ಕಾಲವಾಗಿದೆ. ಎಷ್ಟೋ ಉತ್ತಮ ಕಲಾವಿದರು ನೇಪಥ್ಯಕ್ಕೆ ಸರಿದುಹೋಗುತ್ತಾರೆ. ಇಪ್ಪತ್ತು ವರ್ಷಗಳಿಂದ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ವಿರೂಪಾಕ್ಷಪ್ಪ ಅವರು ಕನ್ನಡ ವಿಶ್ವವಿದ್ಯಾಲಯಕ್ಕೆ ವರದಾನವಾಗಿದ್ದಾರೆ. ವಿದ್ಯೆ ಕಲಿಸಿದ ಗುರುವಿಗೆ ನಮ್ಮ ಆವರಣದಲ್ಲಿ ವಿದ್ಯಾರ್ಥಿಗಳು ಸನ್ಮಾನ ಮಾಡಿರುವುದು ಅತ್ಯುತ್ತಮ ಕೆಲಸ. ಕಲೆ ಎಲ್ಲರಿಗೂ ಸುಲಭವಾಗಿ ಒಲಿಯುವುದಿಲ್ಲ. ಎಲ್ಲರೂ ಸಂಗೀತಗಾರರಾಗಬಹುದು. ಆದರೆ ಎಲ್ಲರೂ ಸಾಧಕರಾಗಲೂ ಸಾಧ್ಯವಿಲ್ಲ. ನೀವೆಲ್ಲ ಸಾಧಕರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಕರೆ ನೀಡಿದರು.  

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥರಾದ ಡಾ.ವೀರೇಶ ಬಡಿಗೇರ ಅವರು ವಿರೂಪಾಕ್ಷಪ್ಪ ಇಟಗಿಯವರು ದೊಡ್ಡ ವಿದ್ವಾಂಸರು. ವೃತ್ತಿ ರಂಗಭೂಮಿಯಲ್ಲಿ ಪುಟ್ಟರಾಜ ಗವಾಯಿಗಳೊಂದಿಗೆ ಅವರ ನಾಟಕ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ. ಸ್ವಾಭಿಮಾನಿಯಾದ ಇವರು ಶ್ರಮಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದಾರೆ. ಪಾಲಕರು ತಮ್ಮ ಮಕ್ಕಳು ಹಾಡುವುದನ್ನು ನೋಡಲಿ, ತಮ್ಮ ಮಕ್ಕಳ ಬಗ್ಗೆ ಪಾಲಕರಿಗೂ ಆತ್ಮವಿಶ್ವಾಸ ಬರಲಿ ಎಂದು ಸಮಾವೇಶದ ಉದ್ದೇಶವನ್ನು ತಿಳಿಸಿದರು.  

ನಿವೃತ್ತ ಎ.ಎಸ್‌.ಐ. ಶಾಂತಪ್ಪ ಬೆಲ್ಲದ ಹಾಗೂ ಮಾರುತಿರಾವ್ ಅವರು ಅನಿಸಿಕೆಗಳನ್ನು ಹಂಚಿಕೊಂಡರು. ವಿದ್ಯಾರ್ಥಿ ರವಿವರ್ಮ ಹಾಗೂ ವೀರೇಶ ದಳವಾಯಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯಕ್ರಮದ ಸಂಚಾಲಕರಾದ ವಿದ್ಯಾರ್ಥಿ ಗುಂಡಿ ಭರತ್ ಸ್ವಾಗತಿಸಿದರು. ಮತ್ತೋರ್ವ ವಿದ್ಯಾರ್ಥಿ ಹರೀಶ್ ಭಂಡಾರಿ ವಂದಿಸಿದರು. ವಿಭಾಗದ ವಿದ್ಯಾರ್ಥಿಗಳು ಅಂಧರ ಬಾಳಿನ ಸುಂದರ ಚೆಂದಿರ ಗದುಗಿನ ಗವಾಯಿ ಗಿರಿಶಿಖರ ಎಂದು ಭಾವಪೂರ್ಣವಾಗಿ ಹಾಡಿದರು. 

ಕಾರ್ಯಕ್ರಮಕ್ಕೆ ಮೊದಲು ನಿಧನರಾದ ತಬಲ ಮಾಂತ್ರಿಕ ಉಸ್ತಾದ್ ಝಾಕೀರ್ ಹುಸೇನ್ ಹಾಗೂ ವೃಕ್ಷ ಮಾತೆ ತುಳಸಿಗೌಡ ಅವರಿಗೆ ಸಭೆಯು ಮೌನಾಚರಣೆಯ ಮೂಲಕ ಸಂತಾಪ ಸೂಚಿಸಿತು. ಮಧ್ಯಾಹ್ನದ ನಂತರ ಶ್ರೀ ದೊಡ್ಡಯ್ಯ ಗವಾಯಿಗಳು, ಸಂಗೀತ ಮತ್ತು ನೃತ್ಯ ವಿಭಾಗದ ಅತಿಥಿ ಉಪನ್ಯಾಸಕರಾದ ಪಂಡಿತ ವಿರೂಪಾಕ್ಷಪ್ಪ ಇಟಗಿ ಹಾಗೂ ಇತರರಿಂದ ಗಾಯನ ಸೇವೆ ನಡೆಯಿತು.  

ಕಾರ್ಯಕ್ರಮದಲ್ಲಿ ಭಾಷಾ ನಿಕಾಯದ ಡೀನರಾದ ಡಾ.ಎಫ್‌.ಟಿ.ಹಳ್ಳಿಕೇರಿ ಹಾಗೂ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಅಧಿಕಾರಿಗಳು, ಸಿಬ್ಬಂದಿಗಳು, ಸಂಶೋಧನಾ ವಿದ್ಯಾರ್ಥಿಗಳು ಅಲ್ಲದೇ ಪಾಲಕರು ಉಪಸ್ಥಿತರಿದ್ದರು.