ಮುಂಡಗೋಡ: ತಾಲೂಕಿನ ಕೆಂದಲಗೇರಿ ಗ್ರಾಮದಲ್ಲಿ ಮಂಗಳವಾರ ಮನೆಯೊಂದರ ಮೇಲೆ ದಾಳಿ ನಡೆಸಲು ಹೋದ ಅರಣ್ಯ ಇಲಾಖೆಯ ಜೀಪನ್ನು ಗ್ರಾಮಸ್ಥರು ತಡೆದು ಘೇರಾವ್ ಹಾಕಿ ಸಿಬ್ಬಂದಿಯ ಮೇಲೆ ರೇಗಾಡಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.
ಕೆಂದಲಗೇರಿ ಗ್ರಾಮದ ಹುಸೇನಸಾಬ ಫತ್ತೇಸಾಬ ಹುಲಕೊಪ್ಪ ಎಂಬುವರು ಮನೆ ಕಟ್ಟಲು ಸಾಗವಾನಿ ಕಟ್ಟಿಗೆಯನ್ನು ಸಂಗ್ರಹಿಸಿದ್ದಾರೆಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಇಲಾಖೆಯ ಬೀಟ್ನ ಉಪವಲಯ ಅರಣ್ಯಾಧಿಕಾರಿ ಬಸವರಾಜ ಪೂಜಾರ ಹಾಗೂ ಸಿಬ್ಬಂದಿ ಪರಿಶೀಲನೆಗೆ ಹೋದಾಗ ಹುಸೇನಸಾಬ ಮನೆಯಲ್ಲಿ ಸಾಗವಾನಿ ಕಟ್ಟಿಗೆಯ ಎಳೆಗಳ ದಾಸ್ತಾನು ಮಾಡಲಾಗಿತ್ತು ಎನ್ನಲಾಗಿದೆ. ಈ ವೇಳೆ ಗ್ರಾಮದ ಸಿದ್ದಿ ಸಮುದಾಯದವರು, ಮನೆ ಕಟ್ಟಲೆಂದು ಸಂಗ್ರಹಿಸಿಟ್ಟಿದ್ದ ಕಟ್ಟಿಗೆಯನ್ನು ಶೋಧ ಮಾಡಲು ಮತ್ತು ಪ್ರಕರಣ ದಾಖಲಿಸಲು ಬಂದಿದ್ದೀರಾ? ನಿಮಗೆ ಯಾರು ಮಾಹಿತಿ ನೀಡಿದರು ಅವರ ಹೆಸರು ಹೇಳಿ ಎಂದು ಅಧಿಕಾರಿಗಳಿಗೆ ಘೇರಾವ್ ಹಾಕಿದರು ಮತ್ತು ಜೀಪ್ನ ಚಕ್ರದ ಕೆಳಗೆ ಕಲ್ಲು ಮತ್ತು ಕಟ್ಟಿಗೆಯ ಎಳೆಗಳನ್ನು ಇಟ್ಟು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು. ವಿಷಯ ತಿಳಿದ ವಲಯ ಅರಣ್ಯಾಧಿಕಾರಿ ಸುರೇಶ ಕುಳ್ಳೊಳ್ಳಿ ಮತ್ತು ಸಿಪಿಐ ಶಿವಾನಂದ ಚಲವಾದಿ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರಿಗೆ ತಿಳಿ ಹೇಳಿ ಮನವೊಲಿಸಿ ಈ ಬಗ್ಗೆ ನೀವು ಮೇಲಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ತಿಳಿಸಿದರು. ನಂತರ ಗ್ರಾಮಸ್ಥರು ರಸ್ತೆಯನ್ನು ತೆರವುಗೊಳಿಸಿದರು