ಪ್ರಚಲಿತ ಸಾಮಾಜಿಕ ಸಮಸ್ಯೆಗಳಿಗೆ ‘ಅಪರಿಗ್ರಹ’ ಪರಿಪಾಲಯೇ ಪರಿಹಾರ
ಗದಗ 10: ನೈತಿಕ ಶಿಕ್ಷಣದ ಕೊರತೆಯಿಂದ ಇಂದು ಇಡೀ ವಿಶ್ವದ ಮಾನವಕುಲವು ಅಶಾಂತಿ, ಅನ್ಯಾಯ, ಅಸಹನೆ, ಅಸಮಾನತೆ, ಆಕ್ರಮಣಶೀಲತೆ, ಅಸೂಹೆ, ಅತ್ಯಾಚಾರ, ಅಹಂಕಾರ, ಅಶಿಸ್ತಿನ ವರ್ತನೆ, ಅಗೌರವ, ಕಲಹ, ಕೋಮು ಸಂಘರ್ಷ, ಕೊಲೆ, ಜಾತಿಯತೆ, ದಬ್ಬಾಳಿಕೆ, ಧರ್ಮ ಸಂಘರ್ಷ, ದುರಾಸೆ, ದ್ವೇಷ, ದೌರ್ಜನ್ಯ, ನಿಂದನೆ, ಭ್ರಷ್ಟಾಚಾರ, ಮತ್ಸರ, ಮೋಸ, ಮೌಢ್ಯತೆ, ವಂಚನೆ, ವಿಶ್ವಾಸದ್ರೋಹ, ವೈರತ್ವ, ವ್ಯಭಿಚಾರ, ಶೋಷಣೆ, ಸ್ವಾರ್ಥ, ಸುಲಿಗೆ, ಸಂಕುಚಿತ ಯೋಚನೆ, ಸಂಶಯ ಪ್ರವೃತ್ತಿ, ಹಿಂಸಾಚಾರ ಮುಂತಾದ ದುರ್ಗುಣಗಳ ಮನಸ್ಥಿತಿಗೆ ಬಲಿಯಾಗುತ್ತಿದೆ.
ಇದರಿಂದ ಪರಸ್ಪರರು ಯುದ್ಧಕ್ಕೆ ಸಿದ್ಧರಾಗಿ ಸರ್ವನಾಶದ ಹಂತಕ್ಕೆ ಬಂದು ನಿಂತಿದ್ದಾರೆ. ಅಧಿಕಾರ, ಅಂತಸ್ತು, ಶ್ರೀಮಂತಿಕೆಯ ದರಿ್ದಂದ ಎಲ್ಲೆಡೆ ಶಾಂತಿ, ಸಮಾಧಾನದ ಕೊರತೆ ಎದ್ದುಕಾಣುತ್ತಿದೆ. ಇಂಥ ಮನಸ್ಥಿತಿಯಿಂದ ತಲ್ಲಣಗೊಂಡಿರುವ ಮಾನವಕುಲಕ್ಕೆ ‘ಅಪರಿಗ್ರಹ’ ಜೀವನ ಮೌಲ್ಯವು ದಿವ್ಯ ಓಷಧವಾಗಿದ್ದು, ಇದನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ವಿಶ್ವವು ಶಾಂತಿಮಯ ಹೂದೋಟವಾಗುವುದರಲ್ಲಿ ಸಂದೇಹವಿಲ್ಲ ಎಂದು ಸಮಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ. ಬುಳ್ಳಪ್ಪ ಹೇಳಿದರು.
ಅವರು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕವು ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಪ್ರಚಲಿತ ಸಾಮಾಜಿಕ ಸಮಸ್ಯೆಗಳು ಮತ್ತು ಪರಿಹಾರ’ ಕುರಿತು ಮಾತನಾಡುತ್ತ, ಶಾಲಾ-ಕಾಲೇಜುಗಳ ಪಠ್ಯಕ್ರಮಗಳಲ್ಲಿ ‘ಸಾರ್ವಕಾಲಿಕ ಆದರ್ಶಗಳು', ‘ಜೀವನ ಮೌಲ್ಯಗಳು', ‘ಮಾನವೀಯ ಚಿಂತನೆಗಳು' ಶೀರ್ಷಿಕೆಗಳಲ್ಲಿ ಅಧ್ಯಾಯಗಳನ್ನು ಸೇರಿ್ಡಸಿ ಮಕ್ಕಳ ಹೃದಯಗಳಲ್ಲಿ ಭ್ರಾತೃತ್ವ, ಮಾನವೀಯತೆ, ಭಾವೈಕ್ಯತೆ, ಸಾಮರಸ್ಯ, ಸಮಾನತೆ, ನೈತಿಕತೆ, ಪರೋಪಕಾರ, ತ್ಯಾಗ, ಸಹಬಾಳ್ವೆಯ ಚಿಂತನೆಯಂಥ ಆದರ್ಶಗಳನ್ನು ಬಿತ್ತುವ ಮೂಲಕ ಭವಿಷ್ಯತ್ತಿನ ಶಾಂತಿಮಯ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ತಜ್ಞರು ಮುಂದಾಗುವುದು ಅವಶ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಕ್ಯುಎಸಿ ಸಹ ಸಂಯೋಜಕ ಡಾ. ಮಂಜುನಾಥ ತ್ಯಾಲಗಡಿ ಅವರು ನಮ್ಮ ಪೂರ್ವಜರ ಆದರ್ಶಗಳು ಮತ್ತು ಮಾನವೀಯ ಚಿಂತನೆಗಳು ಇಂದು ಯಾವುದಾವುದೋ ಕಾರಣಗಳಿಂದ ವಿನಾಶಕ್ಕೆ ಗುರಿಯಾಗಿ ಅನೇಕ ಸಮಸ್ಯೆಗಳು ಉಂಟಾಗುತ್ತಿದ್ದು, ‘ನೀನೂ ಬದುಕು-ಇತರರಿಗೂ ಬದುಕಲು ಬಿಡು', ‘ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು' ಎಂಬ ತತ್ವಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಸಾಧ್ಯವೆಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರೊ. ಪರಶುರಾಮ ಕಟ್ಟಿಮನಿ, ಪ್ರೊ. ಸಂತೋಷ ಲಮಾಣಿ, ಪ್ರೊ. ಜಯಲಕ್ಷ್ಮೀ ಎಚ್.ಎಫ್. ಸ್ವಯಂ ಸೇವಕರಿಗೆ ಸಿಹಿ ಹಂಚಿದರು. ಎನ್.ಎಸ್.ಎಸ್. ಸಂಯೋಜಕ ಡಾ. ಅಪ್ಪಣ್ಣ ಹಂಜೆ ಅತಿಥಿ ಮಹನೀಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತ, ‘ಅಪರಿಗ್ರಹ’ ಸಮತೆಯ ಮೌಲ್ಯವಾಗಿದ್ದು, ಕೆಲವೇ ಕೆಲವರಲ್ಲಿ ಅಪಾರ ಸಂಪತ್ತಿನ ಸಂಗ್ರಹದಿಂದ ಸಮಾಜದಲ್ಲಿ ಅಸಮಾನತೆವುಂಟಾಗಿ ನಾನಾ ಬಗೆಯ ಸಮಸ್ಯೆಗಳು ಉಲ್ಭಣವಾಗುತ್ತಿವೆ. ಸಂಪತ್ತಿನ ಮೋಹ ಕಡಿಮೆಯಾದರೆ ಮಾತ್ರ ಪ್ರಚಲಿತ ಸಮಸ್ಯೆಗಳಿಗೆ ಪರಿಹಾರ ಸಾಧ್ಯವೆಂದು ಹೇಳಿದರು. ಸ್ವಯಂ ಸೇವಕರು ಕಾರ್ಯಕ್ರಮ ನಡೆಸಿಕೊಟ್ಟರು.