ಆಂಗ್ಲರ ಆಳ್ವಿಕೆಯ ಕಾಲದಲ್ಲಿಯೇ, ಅಕ್ಷರವನ್ನು ಬಿತ್ತಿದ ಮಹನೀಯರ ಸೇವೆ ಅವಿಸ್ಮರಣೀಯ- ಮಹೇಶ ಚನ್ನಂಗಿ

ಆಂಗ್ಲರ ಆಳ್ವಿಕೆಯ ಕಾಲದಲ್ಲಿಯೇ, ಅಕ್ಷರವನ್ನು ಬಿತ್ತಿದ ಮಹನೀಯರ ಸೇವೆ ಅವಿಸ್ಮರಣೀಯ- ಮಹೇಶ ಚನ್ನಂಗಿ The service of the nobles who sowed the alphabet during the British rule is unforgettable - Mahesh

ಆಂಗ್ಲರ ಆಳ್ವಿಕೆಯ ಕಾಲದಲ್ಲಿಯೇ, ಅಕ್ಷರವನ್ನು ಬಿತ್ತಿದ ಮಹನೀಯರ ಸೇವೆ ಅವಿಸ್ಮರಣೀಯ- ಮಹೇಶ ಚನ್ನಂಗಿ 

ಬೆಳಗಾವಿ 16: ಬ್ರಿಟಿಷ್ ಸಾಮ್ರಾಜ್ಯಶಾಹಿ ಆಳ್ವಿಕೆಯ ಕೊನೆಯ ದಶಕದಲ್ಲಿ ಕರ್ನಾಟಕದಲ್ಲಿ ಶೈಕ್ಷಣಿಕವಾಗಿ ಗಮನಾರ್ಹವಾದ ಬೆಳವಣಿಗೆ ನಡೆಯಿತು.ಇಂದಿನ ಕಿತ್ತೂರು ಕರ್ನಾಟಕ ಭಾಗವು ಅಂದಿನ ಬಾಂಬೆ ಪ್ರೆಸಿಡೆನ್ಸಿ ಗೆ ಸೇರಿತ್ತು.ಉತ್ತರ ಕರ್ನಾಟಕವು ಆರ್ಥಿಕವಾಗಿ ಅಭಿವೃದ್ಧಿಯಾಗ ಬೇಕಾದರೆ ಮೊದಲು ಶೈಕ್ಷಣಿಕವಾಗಿ ಪ್ರಗತಿ ಹೊಂದಲೇ ಬೇಕೆಂದು ಈ ಭಾಗದ ಕೆಲ ಶಿಕ್ಷಣ ಪ್ರೇಮಿಗಳು ಬ್ರಿಟಿಷ್ ಆಡಳಿತಗಾರಿಗೆ ಮನವರಿಕೆ ಮಾಡಿಕೊಡುವ ಮೂಲಕ 19ನೇ ಶತಮಾನದ ಕೊನೆಯ ದಶಕದಲ್ಲಿ ಡೆಪ್ಯುಟಿ ಚನ್ನಬಸಪ್ಪನವರು  ಉತ್ತರಕರ್ನಾಟಕದ ವಿದ್ಯಾಕಾಶಿಯಾದ ಧಾರವಾಡದಲ್ಲಿ ಗಂಡುಮಕ್ಕಳ ಶಿಕ್ಷಕರ ತರಬೇತಿ ಶಾಲೆಯೆಂಬ ಮೊದಲ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಸರ್ ಸಿದ್ದಪ್ಪ ಕಂಬಳಿ, ರಾಜಾ ಲಕಮನಗೌಡ ದೇಸಾಯಿ, ಅರಟಾಳ ರುದ್ರಗೌಡರು ,ಶಿರಸಂಗಿ ಲಿಂಗರಾಜರು, ರೊದ್ದ ಶ್ರೀನಿವಾಸರಾಯರು. ರಾ.ಹ ದೇಶಪಾಂಡೆಯವರು ಮುಂತಾದ ಮಹನೀಯರು ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದರು. ಇದರೊಂದಿಗೆ  ಕನ್ನಡವನ್ನು ಕಟ್ಟಿದ ಪ್ರಮುಖ ಐತಿಹಾಸಿಕ ವ್ಯಕ್ತಿಗಳ ಜೀವನದ ಘಟನಾವಳಿಗಳನ್ನು ದರ್ಶನ ಮಾಡಿಸಿದರ ಫಲವಾಗಿ  ಬ್ರಿಟಿಷ್ ಅಧಿಕಾರಿಗಳಾದ ರೆಸ್ಸೆಲ್ ಮತ್ತು ಈಲಿಯಟ್ ರವರು ಕನ್ನಡ ಕಟ್ಟುವ ಬಗೆಗೆ ಕಾಳಜಿ ವಹಿಸಿದರು ಎಂದು ಮಹೇಶ ನೀಲಕಂಠ ಚನ್ನಂಗಿ ಅಭಿಪ್ರಾಯ ಪಟ್ಟರು. 

ಅವರು ಕೆ.ಇ.ಎಸ್‌. ಉಪ-ಪ್ರಾಂಶುಪಾಲರು, ಎಸ್‌.ಬಿ.ಎಮ್‌. ಸರಕಾರಿ ಬಾಲಕಿಯರ ಪ್ರೌಢಶಾಲೆ, ಚನ್ನಮ್ಮನ ಕಿತ್ತೂರು ಇವರು ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಕ್ರಾಂತಿ ಇತಿಹಾಸ;  ಶೈಕ್ಷಣಿಕ  ಪ್ರಗತಿ ಮತ್ತು  ಸುಸ್ಥಿರ ಅಭಿವೃದ್ಧಿಗೆ ಸಾಹಿತ್ಯದ ಕೊಡುಗೆ ಎಂಬ ವಿಷಯ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು. 

     ಉತ್ತರ ಕರ್ನಾಟಕದ ಶೈಕ್ಷಣಿಕ ಕ್ರಾಂತಿಯ ಕುರಿತಾಗಿ ಮಾತನಾಡುತ್ತ ಡೆಪ್ಯುಟಿ ಚೆನ್ನಬಸಪ್ಪನವರು ಕಟ್ಟಿದ  ಕನ್ನಡ ಗಂಡು ಮಕ್ಕಳ ತರಬೇತಿ ಶಾಲೆ, ಮಠ ಪತ್ರಿಕೆ ಬೆಳಗಾವಿಯಲ್ಲಿ ಅವರು ಸ್ಥಾಪಿಸಿದ ಉಚಿತ ವಿದ್ಯಾರ್ಥಿನಿಲಯಗಳು ನಾಡಿನ ಜನರ ಎದೆಗೆ ಅಕ್ಷರವನ್ನು ಬಿತ್ತುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ. ಮರಾಠಿ ಪ್ರಭಾವದಿಂದ ಕನ್ನಡದ ಮಗ್ಗಲಿಗೆ  ಹೂರಳಲು ಇವುಗಳು ಪ್ರಭಾವಿಯಾಗಿ ಕಾರ್ಯವನ್ನು ನಿರ್ವಹಿಸಿರುವುದನ್ನು  ನಾವು ಮರೆಯುವಂತಿಲ್ಲ. ಉತ್ತರ ಕರ್ನಾಟಕದ ಸುಸ್ಥಿರ ಅಭಿವೃದ್ಧಿಗೆ ಈ ಶಿಕ್ಷಣ ಪ್ರೇಮಿಗಳ  ಕೊಡುಗೆ ಅಪಾರವಾದುದು ಎಂದು ಶಿಕ್ಷಣ ಕ್ರಾಂತಿಯ ಸಮಗ್ರ ಇತಿಹಾಸವನ್ನು ವಿವರಿಸಿದರು.  

     ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ, ಬೆಳಗಾವಿ  ಹಾಗೂ ಬೆಳಗಾವಿಯ ಕೆ.ಎಲ್‌. ಇ. ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಕನ್ನಡ ವಿಭಾಗ , (ಸ್ವಾಯತ್ತ) ಬೆಳಗಾವಿ ಇವರ ಸಹಯೋಗದಲ್ಲಿ ಚಕೋರ ವೇದಿಕೆವಿಶೇಷ ಉಪನ್ಯಾಸ  ಮಾಲಿಕೆ -11 ಕಾರ್ಯಕ್ರಮಸೋಮವಾರ, ದಿ. 15ರಂದು ಮಧ್ಯಾಹ್ನ  ಲಿಂಗರಾಜ ಮಹಾವಿದ್ಯಾಲಯದ ಕೇಂದ್ರ ಸಭಾಭವನ, ಬೆಳಗಾವಿಯಲ್ಲಿ ಯಶಸ್ವಿಯಾಗಿ  ಜರುಗಿತು. 

   ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ  ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಆಶಯ ನುಡಿಗಳನ್ನಾಡುತ್ತ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ವೇದಿಕೆಯ ಉದ್ದೇಶಗಳು ಸದ್ಯ ನಾಡಿನಾದ್ಯಂತ ಈಡೇರುತ್ತಿವೆ.ಇಂತಹ ಪ್ರಮುಖ ಉಪನ್ಯಾಸಗಳನ್ನು    ಆಯೋಜನೆ ಮಾಡುವ  ಮೂಲಕ ನಾಡು ನುಡಿ ಕಟ್ಟಿದ ಮಹನೀಯರ ಜೀವನ ಚರಿತ್ರೆ ಅವರ ನಿಸ್ವಾರ್ಥ ಸೇವೆಯನ್ನು ಅರ್ಥ ಮಾಡಿಕೊಂಡು ಇಂದಿನ ಪಿಳಿಗೆಯ ಯುವ ಜನಾಂಗದ ನಾವು ಕೂಡಾ ನಾಡು ನುಡಿ ಕಟ್ಟುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. 

    ಡಾ.ಮೈತ್ರೇಯಿಣಿಯವರು ಮುಂದುವರೆದು ಆಶಯನುಡಿಗಳನ್ನಾಡುತ್ತ, ಉ.ಕ ಅಭಿವೃದ್ಧಿಗೆ ತನು ಮನ ಧನದಿಂದ ಸೇವೆ ಸಲ್ಲಿಸಿದ ಕೆ.ಎಲ್‌.ಇ ಸಂಸ್ಥೆಯ ಸಂಸ್ಥಾಪಕ ಸಪ್ತರ್ಷಿಗಳ ಸೇವೆ ಚಿರಸ್ಮರಣೀಯವಾಗಿದೆ.ಗಡಿನಾಡು ಬೆಳಗಾವಿಯಲ್ಲಿ ಉಚಿತ ಬೋಡಿಂರ್ಗ್ ವ್ಯವಸ್ಥೆ ಕಲ್ಪಿಸಿದ ನಾಗನೂರು ರುದ್ರಾಕ್ಷಿ ಮಠದ ಸೇವೆ ಅಪಾರವಾದುದು.ಇದೆ ಸಂಸ್ಥೆಯಲ್ಲಿ ಓದಿದ ಡಾ  ಚಂದ್ರಶೇಖರ ಕಂಬಾರರು ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದಿದ್ದು  ಹೆಮ್ಮೆ ಸಂಗತಿ.ಶಿವಬಸವ ಸ್ವಾಮಿಜೀಯವರು ಶಿಕ್ಷಣ ಪ್ರೇಮಿಗಳು ಹಾಗೂ ನಾಡು ನುಡಿಯ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದರು. ಗಡಿಭಾಗದಲ್ಲಿ ಕನ್ನಡ ನಾಡು ನುಡಿ ಕಟ್ಟಿದ ನಾಗನೂರು ರುದ್ರಾಕ್ಷಿ ಮಠದ ಸೇವೆ ಅನುಪಮವಾಗಿದೆ. 

      ಉ.ಕ ಭಾಗದ ಸಾಹಿತಿಗಳ ನಾಡು ನುಡಿ ಪ್ರೇಮವೂ ಅವಿಸ್ಮರಣೀಯ. ಹುಯಿಲಗೋಳ ನಾರಾಯಣರಾವ್ ಅವರ ಉದಯವಾಯಿತು ನಮ್ಮ ಚಲುವ ಕನ್ನಡ ನಾಡು ಗೀತೆ,ಡಾ. ಡಿ .ಎಸ್ .ಕರ್ಕಿಯವರ ಹಚ್ಚೆವು ಕನ್ನಡದ ದೀಪ ಗೀತೆಗಳು ಇಂದಿಗೂ ಕನ್ನಡದ ಅಸ್ಮಿತೆಯ ಪ್ರತಿಕವಾಗಿವೆ.ರಾ.ಹ ದೇಶಪಾಂಡೆಯವ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಉದ್ಗೋಷವು ನಾಡಿನ ಹೆಮ್ಮೆಯ ಪ್ರತೀಕವಾಗಿದೆ.ಆಲೂರು ವೆಂಕಟರಾಯರು ಎಸ್‌.ಡಿ ಇಂಚಲ .ಆರ್ ಸಿ ಹಿರೇಮಠ, ಡಿ.ಸಿ ಪಾವಟೆಯವರಂತಹ ಮಹನೀಯರು ಉ.ಕ ಶಿಕ್ಷಣ ಮತ್ತು ಸಾಹಿತ್ಯ  ಅಭಿವೃದ್ಧಿಗೆ ಅಪಾರ ಕೊಡುಗೆಯನ್ನು ಸಲ್ಲಿಸಿದ್ದಾರೆ.ಎಸ್ ಜಿ ಬಾಳೆಕುಂದ್ರಿ ಹಾಗೂ ಸುಧಾ ಮೂರ್ತಿಯವರಂತಹ ಸುಪ್ರಸಿದ್ಧ  ಇಂಜಿನಿಯರ್ ಗಳನ್ನು ದೇಶಕ್ಕೆ ಕೊಟ್ಟ ಕೀರ್ತಿ ಉತ್ತರ ಕರ್ನಾಟಕಕ್ಕಿದೆ.  

ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ವಿಶ್ವವಿದ್ಯಾಲಯ .ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ .ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಧಾರವಾಡ ಕೃಷಿ ವಿಶ್ವವಿದ್ಯಾಲಯಗಳು ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿವೆ.ಇಂತಹ ಇತಿಹಾಸವನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕಾರ್ಯಕ್ರಮದ ಉದ್ದೇಶ ಕುರಿತಾಗಿ  ಆಶಯನುಡಿಗಳನ್ನಾಡಿದರು. 

    ಲಿಂಗರಾಜ ಮಹಾವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಪ್ರೊಎಚ್‌. ಎಮ್‌. ಚನ್ನಪ್ಪಗೋಳ ಪ್ರಾಸ್ತಾವಿಕ ನುಡಿಗಳನ್ನಾಡುತ್ತ, ಇಂದು ಉ.ಕ ಸಮಗ್ರವಾಗಿ ಪ್ರಗತಿ ಹೊಂದಲು ಅಂದಿನ ಶಿಕ್ಷಣ ಪ್ರೇಮಿಗಳ ನಿಸ್ವಾರ್ಥ ಸೇವೆಯೇ ಕಾರಣವಾಗಿದೆ.ಕೆ.ಎಲ್‌.ಇ ಸಂಸ್ಥೆ ಇಂದು ದೇಶದಾದ್ಯಂತ ತನ್ನ ಛಾಪು ಮೂಡಿಸಿದೆ.ಈ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಅನೇಕ ಮಹನೀಯರು ಇಂದು ಜಗತ್ಪ್ರಸಿದ್ಧ ವ್ಯಕ್ತಿಗಳಾಗಿದ್ದಾರೆ.20 ನೇ ಶತಮಾನದಲ್ಲಿ ಉ. ಕ ಭಾಗವು ಶೈಕ್ಷಣಿಕವಾಗಿ ಪ್ರಗತಿಯಾಗಲು ಶ್ರಮಿಸಿದ ಮಹಾನ್ ವ್ಯಕ್ತಿಗಳ ಜೀವನ ನಮಗೆ ಸದಾ ಪ್ರೇರಣೆಯಾಗಿದೆ ಎಂದರು. 

    ಲಿಂಗರಾಜ ಮಹಾವಿದ್ಯಾಲಯದ ಪ್ರಾಚಾರ್ಯರಾದ  ಡಾ. ಎಚ್‌.ಎಸ್‌. ಮೇಲಿನಮನಿಯವರು ಅಧ್ಯಕ್ಷೀಯ ನುಡಿಗಳನ್ನಾಡುತ್ತ, ಕರ್ನಾಟಕ ಸಾಹಿತ್ಯ ಅಕಾಡೆಮಿಯು ಚಕೋರ ಸಾಹಿತ್ಯ ವಿಚಾರ ವೇದಿಕೆಯ ಮೂಲಕ ನಾಡಿನಾದ್ಯಂತ ಸಾಹಿತ್ಯಿಕವಾಗಿ ಸಂಚಲನ ಮೂಡಿಸಿದೆ.ಆಯಾ ಮಾಸಕ್ಕೆ ಸಂಬಂಧಿಸಿದಂತೆ ಪ್ರಮುಖ ವಿಷಯದಲ್ಲಿ  ಮಹತ್ವಪೂರ್ಣ ಉಪನ್ಯಾಸಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯವಾಗಿದ್ದು, ಈ ಮೂಲಕ ಸಾಹಿತ್ಯ ಅಕಾಡೆಮಿಗೆ ಅಭಿನಂದನೆಗಳನ್ನು ಸಲ್ಲಿಸುವುದು ನಮ್ಮ ಕರ್ತವ್ಯ ಎಂದರು.ಉತ್ತರ ಕರ್ನಾಟಕದ ಜನಸಾಮಾನ್ಯರ ಕೊಡುಗೆ ಅಪಾರ. ಶಿಕ್ಷಣಪ್ರೇಮಿಗಳ ನಿಸ್ವಾರ್ಥ ದಾನ - ದೇಣಿಗೆಗಳಿಂದ ಶೈಕ್ಷಣಿಕವಾಗಿ ಬದುಕನ್ನು ಕಟ್ಟಿಕೊಂಡ ಮಹನೀಯರು, ಸಾಮಾಜಿಕ ಮತ್ತು  ರಾಜಕೀಯವಾಗಿ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಉ.ಕ ಭಾಗದ ಸುಸ್ಥಿರ ಅಭಿವೃದ್ಧಿಗೆ  ನಿರಂತರವಾಗಿ ಪ್ರಯತ್ನ ಮಾಡುತ್ತಿರುವ ನಾಯಕರ ಹಾಗೂ ಮಹಾನ್ ಸಾಧಕರ ಬದುಕು ನಮಗೆ ಸದಾ ಸ್ಪೂರ್ತಿದಾಯಕವಾಗಿದೆ ಎಂದು ನುಡಿದರು. 

      ಚಕೋರ ಸಾಹಿತ್ಯ ವಿಚಾರ ವೇದಿಕೆ, ಬೆಳಗಾವಿ ಜಿಲ್ಲಾ ಸಂಚಾಲಕ ಶಿವರಾಜ ಅರಳಿ ವಂದಿಸಿದರು.  ಅಕ್ಷಯ ಪಾಟೀಲ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಬಾಗೇವಾಡಿ ಸ್ವಾಗತಿಸಿದರು, ದರ್ಶನ ರಾಜನ್ನವರ ನಿರೂಪಿಸಿದರು. ಕನ್ನಡ ವಿಭಾಗದ ಅಧ್ಯಾಪಕ ಡಾ ಶಶಿಕಾಂತ ತಾರದಾಳೆ. ಡಾ ಪಾಂಡು ಗಾಣಿಗೇರ ಉಪಸ್ಥಿತರಿದ್ದರು.