ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ
ನವದೆಹಲಿ 12: ‘ನಾನು ಅಂತರರಾಷ್ಟ್ರೀಯ ಸಮಾವೇಶಗಳಿಗೆ ಹೋದಾಗ, ರಸ್ತೆ ಅಪಘಾತಗಳ ಬಗ್ಗೆ ಚರ್ಚೆಗಳು ಇದ್ದಾಗ ನನ್ನ ಮುಖ ಮುಚ್ಚಿಕೊಳ್ಳಲು ಯತ್ನಿಸುತ್ತೇನೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆಯನ್ನು ಮೊದಲ ಬಾರಿಗೆ ವಹಿಸಿಕೊಂಡಾಗ ತಾವು ರಸ್ತೆ ಅಪಘಾತಗಳ ಪ್ರಮಾಣವನ್ನು ಶೇಕಡ 50ರಷ್ಟು ತಗ್ಗಿಸುವ ಗುರಿಯನ್ನು ಹೊಂದಿದ್ದುದಾಗಿ ಅವರು ಗುರುವಾರ ಹೇಳಿದರು.
ರಸ್ತೆ ಅಪಘಾತಗಳ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗಿಯಾದ ಗಡ್ಕರಿ, ‘ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವುದು ಅತ್ತ ಇರಲಿ, ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ನನಗೆ ಯಾವ ಅಳುಕೂ ಇಲ್ಲ’ ಎಂದರು. ಪ್ರಶ್ನೋತ್ತರ ವೇಳೆಯಲ್ಲಿ ಗಡ್ಕರಿ ಅವರು ಪೂರಕ ಪ್ರಶ್ನೆಯೊಂದಕ್ಕೆ ಉತ್ತರಿಸುವ ಸಂದರ್ಭದಲ್ಲಿ ಹೀಗೆ ಹೇಳಿದರು.
ಪರಿಸ್ಥಿತಿ ಸುಧಾರಿಸಬೇಕು ಎಂದಾದರೆ ದೇಶದಲ್ಲಿ ನಾಗರಿಕರ ವರ್ತನೆಯಲ್ಲಿ ಬದಲಾವಣೆ ಬೇಕು, ಸಮಾಜವು ಬದಲಾಗಬೇಕು ಮತ್ತು ಕಾನೂನಿಗೆ ಗೌರವ ನೀಡಬೇಕು ಎಂದರು. ‘ನಾನು ಮತ್ತು ನನ್ನ ಕುಟುಂಬದ ಸದಸ್ಯರು ಅಪಘಾತಕ್ಕೆ ಒಮ್ಮೆ ತುತ್ತಾಗಿದ್ದರೂ, ದೇವರ ದಯೆಯಿಂದಾಗಿ ಉಳಿದೆವು. ಆದರೆ, ನಾನು ಬಹಳ ದೀರ್ಘಾವಧಿ ಆಸ್ಪತ್ರೆಗೆ ದಾಖಲಾಗಬೇಕಾಗಿ ಬಂದಿತು. ನನಗೆ ಅಪಘಾತದ ವಿಚಾರವಾಗಿ ಸ್ವಾನುಭವ ಇದೆ’ ಎಂದು ವಿವರಿಸಿದರು.
ರಸ್ತೆಗಳಲ್ಲಿ ಟ್ರಕ್ಕುಗಳನ್ನು ನಿಲುಗಡೆ ಮಾಡುವುದು ಅಪಘಾತಗಳಿಗೆ ಬಹಳ ದೊಡ್ಡ ಕಾರಣವಾಗುತ್ತಿದೆ. ಟ್ರಕ್ಕುಗಳಲ್ಲಿ ಹೆಚ್ಚಿನವು ಹೆದ್ದಾರಿಗಳಲ್ಲಿ ನಿಗದಿ ಮಾಡಿರುವ ಪಥದಲ್ಲಿ ಸಾಗುವುದಿಲ್ಲ. ಅಲ್ಲದೆ ಲೇನ್ ನಿಯಮಗಳನ್ನು ಅನೇಕರು ಪಾಲಿಸುವುದಿಲ್ಲ. ಇದೂ ಅಪಘಾತಕ್ಕೆ ಎಡೆಮಾಡಿಕೊಡುತ್ತಿದೆ ಎಂದು ಗಡ್ಕರಿ ಹೇಳಿದರು.
ಭಾರತದಲ್ಲಿ ಬಸ್ಗಳಿಗೆ ಕವಚ ನಿರ್ಮಿಸುವ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಾನದಂಡದ ಪಾಲನೆ ಆಗಬೇಕು ಎಂದು ಆದೇಶಿಸಲಾಗಿದೆ. ಬಸ್ನ ಕಿಟಕಿಗಳ ಬಳಿ ಸುತ್ತಿಗೆ ಇರಬೇಕು. ಆಗ, ಅಪಘಾತದ ಸಂದರ್ಭದಲ್ಲಿ ಕಿಟಕಿಯನ್ನು ಸುಲಭವಾಗಿ ಒಡೆಯಬಹುದು ಎಂದು ಅವರು ಮಾಹಿತಿ ನೀಡಿದರು.
ದೇಶದಲ್ಲಿ ಪ್ರತಿ ವರ್ಷ 1.78 ಲಕ್ಷ ಮಂದಿ ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಹೀಗೆ ಸಾಯುವವರಲ್ಲಿ ಶೇಕಡ 60ರಷ್ಟು ಮಂದಿ 18ರಿಂದ 34 ವರ್ಷ ವಯಸ್ಸಿನ ನಡುವಿನವರು ಎಂದರು.
ನಗರಗಳ ಪೈಕಿ, ರಸ್ತೆ ಅಪಘಾತಗಳಲ್ಲಿ ಅತಿ ಹೆಚ್ಚು ಸಾವುಗಳು ವರದಿಯಾಗುವುದು ದೆಹಲಿಯಲ್ಲಿ (ವರ್ಷಕ್ಕೆ 1,400). ಎರಡನೆಯ ಸ್ಥಾನದಲ್ಲಿ ಬೆಂಗಳೂರು (ವರ್ಷಕ್ಕೆ 915 ಪ್ರಾಣಹಾನಿ) ಇದೆ ಎಂದರು.