ಯೋಗ ಋಷಿಮುನಿಗಳು ನೀಡಿದ ಅತ್ಯಮೂಲ್ಯ ಕೊಡುಗೆ: ಸುಣದೋಳಿ
ಬೆಳಗಾವಿ 11: ಯೋಗವು ಪ್ರಾಚೀನ ಕಾಲದಿಂದಲೂ ಋಷಿಮುನಿಗಳು ನೀಡಿದ ಅತ್ಯಮೂಲ್ಯ ಕೊಡುಗೆ ಆಗಿದೆ. ಹಾಗೂ ಅವರ ಧೀರ್ಘಾಯುಷ್ಯದ ಗುಟ್ಟು ಅಂದರೆ ಯೋಗ, ಯೋಗದ ಉಪಯೋಗವು ಅನೇಕ ಸಂಶೋಧನೆಗಳಿಂದ ದೃಢೀಕರಣಗೊಂಡಿದೆ. ಯೋಗವು ಮನುಷ್ಯರನ್ನು ಮಾನಸಿಕವಾಗಿ, ದೈಹಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಸದೃಢಗೊಳಿಸುತ್ತಿದೆ. ಒಟ್ಟಿನಲ್ಲಿ ಯೋಗವು ಸರ್ವ ರೋಗಕ್ಕೂ ರಾಮಬಾಣವಿದ್ದಂತೆ ಎಂದು ಜಿಲ್ಲಾ ಆಯುಷ್ಯ ಆರೋಗ್ಯಾಧಿಕಾರಿ ಶ್ರೀಕಾಂತ ಸುಣದೋಳಿ ಹೇಳಿದರು.
ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ದಿ. 10ರಂದು ಕಾರಾಗೃಹ ಅಧಿಕಾರಿ, ಸಿಬ್ಬಂದಿಗಳಿಗೆ ಹಾಗೂ ನಿವಾಸಿಗಳಿಗೆ ಜಿಲ್ಲಾ ಆಯುಷ್ಯ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೇಂದ್ರ ಕಾರಾಗೃಹ ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ಏರಿ್ಡಸಲಾಗಿದ್ದ ಯೋಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರತಿಯೊಬ್ಬರೂ ಯೋಗ, ಧ್ಯಾನ ಹಾಗೂ ಪ್ರಾಣಾಯಾಮ ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ನಿವಾಸಿಗಳಾದ ತಾವು ಬಿಡುಗಡೆ ನಂತರ ಸಮಾಜದಲ್ಲಿ ಇತರರಿಗೆ ಹಾಗೂ ಕುಟುಂಬ ವರ್ಗದವರಿಗೆ ಯೋಗದ ಮಹತ್ವ ತಿಳಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾರಾಗೃಹದ ಅಧೀಕ್ಷಕ ವಿ. ಕೃಷ್ಣಮೂರ್ತಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ಒತ್ತಡದಿಂದ ಬಳಲುತ್ತಿದ್ದು ಅನೇಕ ಆರೋಗ್ಯ ಸಮಸ್ಯಗಳನ್ನು ಎದುರಿಸುತ್ತಿದ್ದಾರೆ. ಕಾರಣ ನಾವೆಲ್ಲ ಯೋಗದ ಮೊರೆ ಹೋಗಬೇಕು. ನಾವೆಲ್ಲ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ದೇಶದ ಸಂಸ್ಕೃತಿ ಇಡೀ ಜಗತ್ತಿನಲ್ಲಿ ಅತ್ಯುನ್ನತ ಸಂಸ್ಕೃತಿ ಆಗಿದೆ ಕಾರಣ ಪಾಶ್ಚಿಮಾತ್ಯರು ನಮ್ಮ ಸಂಸ್ಕೃತಿಗೆ ಆಕರ್ಷಿತರಾಗಿ ಯೋಗ, ಧ್ಯಾನ, ಪ್ರಾಣಾಯಾಮವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಕಾರಣ ನಿವಾಸಿಗಳು ಹಾಗೂ ಸಿಬ್ಬಂದಿಯವರು ಈ ಯೋಗ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಯೋಗ ಉಪನ್ಯಾಸಕ ಹಾಗೂ ಚಿಕಿತ್ಸಕರು ಆರತಿ ಪಡಸಲಗಿ ಮಾತನಾಡಿ ದೇಹದ ಎಲ್ಲ ಅವಯವಗಳಿಗೆ ಉತ್ತೇಜನ ನೀಡುವ ಶಕ್ತಿ ಯೋಗಕ್ಕಿದೆ ಎಂದು ಹೇಳಿದರು ಹಾಗೂ ಓಂಕಾರ ಮಂತ್ರದ ಪಠಣೆಯನ್ನು ಪ್ರಾಯೋಗಿಕವಾಗಿ ಮಾಡಿ ಎಲ್ಲರಿಗೂ ಯೋಗದ ಕುರಿತು ಮಾಹಿತಿ ನೀಡಿದರು.
ಕಾರಾಗೃಹದ ಮನೋವೈದ್ಯೆ ಡಾ. ಸರಸ್ವತಿ ತೆನಗಿ ಅತಿಥಿಗಳ ಪರಿಚಯ ಮಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರಾಗೃಹದ ಶಿಕ್ಷಕ ಶಶಿಕಾಂತ ಯಾದಗುಡೆ ನಿರೂಪಿಸಿ ವಂದಿಸಿದರು. ವೇದಿಕೆಯಲ್ಲಿ ಜೈಲರಗಳಾದ ರಾಜೇಶ ಧರ್ಮಟ್ಟಿ, ಎಫ್.ಟಿ.ದಂಡಯ್ಯನ್ನವರ, ಕಾರಾಗೃಹದ ಸಹಾಯಕ ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣುರ, ಆರ್.ಬಿ.ಕಾಂಬಳೆ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.