ಧಾರವಾಡ 27: ಸಾಹಿತ್ಯಗಳಲ್ಲಿಯೇ ಶ್ರೇಷ್ಠ ಸಾಹಿತ್ಯ ಮತ್ತು ಅಪೂರ್ವ ಸಾಹಿತ್ಯ ಎಂದರೆ ಅದು ವಚನ ಸಾಹಿತ್ಯ. ವಚನಗಳು ಗದ್ಯವೂ ಹೌದು, ಪದ್ಯವೂ ಹೌದು. ವಚನಗಳನ್ನು ಹಾಡಬಹುದು, ವಾಚಿಸಬಹುದು. ಆದ್ದರಿಂದ ಇದು ಅಪೂರ್ವ ಸಾಹಿತ್ಯ. ವಚನ ಸಾಹಿತ್ಯ ಎಂದರೆ ಕಥೆಯೂ ಅಲ್ಲ, ನಾಟಕವೂ ಅಲ್ಲ, ಅದು ಅನುಭಾವ ತಿಳಿಸುವಲ್ಲಿ ವಿಶಿಷ್ಟ ಛಾಪು ಮೂಡಿಸುತ್ತದೆಂದು ಹುಬ್ಬಳ್ಳಿಯ ಎಸ್.ಜೆ.ಎಂ.ವಿ.ಎಸ್. ಮಹಿಳಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಸುಪ್ರಿಯಾ ಮಲಶೆಟ್ಟಿ ಹೇಳಿದರು.
ಕನರ್ಾಟಕ ವಿದ್ಯಾವರ್ಧಕ ಸಂಘವು ಶಕುಂತಲಾ ಎಸ್. ಅಯ್ಯನಗೌಡರ ಮತ್ತು ಡಾ. ಎಸ್.ವ್ಹಿ. ಅಯ್ಯನಗೌಡರ ದತ್ತಿ ಕಾರ್ಯಕ್ರಮ ಅಂಗವಾಗಿ ಆಯೋಜಿಸಿದ್ದ 'ವಚನಗಳಲ್ಲಿ ಜೀವನ ದರ್ಶನ' ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
12 ನೇ ಶತಮಾನದ ಅನೇಕ ವಚನಕಾರರು ನಡೆದಂತೆ ನುಡಿದರು. ಸತ್ಯ, ಶುದ್ಧ, ಕಾಯಕದಿಂದ ನಡೆದು ಜೀವನವನ್ನು ಹೇಗೆ ಸಾರ್ಥಕಗೊಳಿಸಿಕೊಂಡರೋ, ಅದೇ ರೀತಿ ನಾವೂ ಸಹ ವಚನಗಳನ್ನು ಅರ್ಥೈ ಸಿಕೊಂಡು ಉತ್ಸಾಹ, ಅತ್ಮಶಕ್ತಿಯಿಂದ ಜೀವನದಲ್ಲಿ ಮುನ್ನುಗ್ಗಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದರು.
ಸರಕಾರದ ನಿವೃತ್ತ ಅಧೀನ ಕಾರ್ಯದರ್ಶಿ ಎಂ.ಜಿ. ಮುಳಕೂರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, 'ವ' ಎಂದರೆ ವಚಿಸುವುದು (ಓದುವುದು), 'ಚ' ಎಂದರೆ ಚಲಿಸುವುದು(ನಡೆಯುವುದು), 'ನ' ಎಂದರೆ ನರತ್ವ ನೀಗಿಸುವುದು (ಮೋಕ್ಷ) ಎಂದು ವಚನದ ಅರ್ಥ ತಿಳಿಸುತ್ತಾ, ವಚನಗಳನ್ನು ಎಲ್ಲರೂ ಓದಿ, ಅರ್ಥಮಾಡಿಕೊಂಡು ಅದರಂತೆ ಜೀವನದಲ್ಲಿ ಅಳವಡಿಸಿಕೊಂಡು ಶ್ರೇಷ್ಠ ಜೀವನ ನಡೆಸಿ ಮೋಕ್ಷವನ್ನು ಹೊಂದಬಹುದೆಂದು ಅನೇಕ ವಚನಗಳ ಮೂಲಕ ಉದಾಹರಣೆಯೊಂದಿಗೆ ತಿಳಿಸಿದರು.
ವೇದಿಕೆ ಮೇಲೆ ಶಕುಂತಲಾ ಅಯ್ಯನಗೌಡರ ಮತ್ತು ಡಾ. ಎಸ್.ವ್ಹಿ. ಅಯ್ಯನಗೌಡರ ಉಪಸ್ಥಿತರಿದ್ದರು.
ಕಾರ್ಯಕಾರಿ ಸಮಿತಿ ಸದಸ್ಯ ಪ್ರಫುಲ್ಲಾ ನಾಯಕ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು. ಉಪನ್ಯಾಸಕಿ ಸವಿತಾ ಕುಸಗಲ್ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವೀಣಾ ಸಂಕನಗೌಡರ, ಪ್ರೇಮಾ ನಡಕಟ್ಟಿ, ಎಂ.ಬಿ. ಹೆಗ್ಗೇರಿ, ಕಲ್ಮಠ ಸೇರಿದಂತೆ ಅಯ್ಯನಗೌಡರ ಕುಟುಂಬದವರು ಭಾಗವಹಿಸಿದ್ದರು.