ಗೊಂದಲದ ಗೂಡಾಗಿರುವ ಅತೃಪ್ತ ಶಾಸಕರ ಭವಿಷ್ಯ

ಬೆಂಗಳೂರು 5:  ಎರಡು ಕಣ ನಂಬಿ ಕುರುಡು ದಾಸಯ್ಯ ಕೆಟ್ಟ ಎಂಬಂತೆ ಕಾಂಗ್ರೆಸ್ -ಜೆಡಿಎಸ್ನ ಅತೃಪ್ತ ಶಾಸಕರ ಸ್ಥಿತಿಯಾಗಿದೆ. ಸಮ್ಮಿಶ್ರ ಸರಕಾರವನ್ನು ಪತನಗೊಳಿಸಲು ಬಿಜೆಪಿ ತೆರೆಮರೆಯಲ್ಲಿ ನಡೆಸಿರುವ ಭರ್ಜರಿ ಆಪರೇಷನ್ ಕಮಲ  ಇನ್ನೇನು ಯಶಸ್ವಿಯಾಗೇಬಿಡ್ತು, ಸರಕಾರ ಹೋಯ್ತು, ಹೊಸ ಸರಕಾರ ರಚನೆ ಆಯ್ತು, ಸಚಿವರಾಗೇ ಬಿಡ್ತೀವಿ ಎಂದು ಹಗಲು ಕನಸು ಕಂಡವರಿಗೆ ಅನಗತ್ಯ ವಿಳಂಬ ನುಂಗಲಾರದ ತುತ್ತಾಗಿದೆ.

  ಈ ಮೊದಲು ಯಾವುದಾದರೂ ಅತೃಪ್ತ ಶಾಸಕರು ರಾಜೀನಾಮೆ ನೀಡುತ್ತಾರೆ ಎಂದು ಸುದ್ದಿಯಾದರೆ ಹಿರಿಯ ನಾಯಕರು ಅವರಿಗೆ ಫೋನ್ ಮಾಡಿ ಮಾತುಕತೆ ನಡೆಸಿ ಸಮಾಧಾನ ಪಡಿಸುತ್ತಿದ್ದರು.

  ಹಿರಿಯ ನಾಯಕರಿಂದ ಫೋನ್ ಬರಲಿದೆ ಎಂದು ಗೊತ್ತಾಗುತ್ತಿದ್ದಂತೆ ಬಹಳಷ್ಟು ಕಾಂಗ್ರೆಸ್ ನಾಯಕರು ಇದನ್ನೇ ಒಂದು ಚಾಳಿ ಮಾಡಿಕೊಂಡು ತಮ್ಮ ಹಿಂಬಾಲಕರ ಮೂಲಕ ರಾಜೀನಾಮೆಯ ವದಂತಿಗಳನ್ನು ಹರಿಬಿಡಲಾರಂಭಿಸಿದ್ದರು.

  ಅದು ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಕಾಂಗ್ರೆಸ್ನ 78 ಮಂದಿ ಶಾಸಕರ ಪೈಕಿ ಸುಮಾರು 30 ಮಂದಿ ಶಾಸಕರು ರಾಜೀನಾಮೆ ನೀಡುವವರ ಪಟ್ಟಿಯಲ್ಲಿದ್ದಾರೆ.

   ಆರಂಭದಲ್ಲಿ ಈ ರೀತಿ ಸುದ್ದಿಯಾದವರಿಗೆ ದೂರವಾಣಿ  ಕರೆ ಮಾಡುತ್ತಿದ್ದ  ನಾಯಕರು ಕ್ರಮೇಣ ಎಲ್ಲವೂ ಬ್ಲಾಕ್ಮೇಲ್ ರಾಜಕಾರಣ ಎನ್ನುವುದು ಅರ್ಥವಾಗುತ್ತಿದ್ದಂತೆ ಅತೃಪ್ತರನ್ನು ವಿಚಾರಿಸಿಕೊಳ್ಳುವ ಗೋಜಿನಿಂದ ದೂರ ಉಳಿದಿದ್ದಾರೆ.

   ಪರಿಸ್ಥಿತಿ ವಿಕೋಪಕ್ಕೆ ತೆರಳಿ ಅಸಮಾಧಾನದ ಮಟ್ಟ ಯಾವ ಮಟ್ಟಕ್ಕೆ ಕುದಿಯುತ್ತಿದೆ ಎಂದರೆ, ಹಿರಿಯ ನಾಯಕರು ಕ್ಯಾರೆ ಎನ್ನುತ್ತಿಲ್ಲ ಎಂಬ ಕಾರಣಕ್ಕಾಗಿಯೇ ಇಬ್ಬರು ಶಾಸಕರು ರಾಜೀನಾಮೆಯನ್ನೂ ನೀಡಿದ್ದಾರೆ.ಅದರಲ್ಲಿ ಆನಂದ್ಸಿಂಗ್ ನೇರವಾಗಿ ಸ್ಪೀಕರ್ಗೆ ರಾಜೀನಾಮೆ ಕೊಟ್ಟರೆ, ರಮೇಶ್ಜಾರಕಿಹೊಳಿ ಫ್ಯಾಕ್ಸ್ ಮೂಲಕ ರಾಜೀನಾಮೆ ಪತ್ರ ಕಳುಹಿಸಿ ಅದನ್ನು ವಾಟ್ಸ್ಅಪ್ಗೆ ಹರಿಬಿಟ್ಟಿದ್ದಾರೆ. ಇಷ್ಟಾದರೂ ಕಾಂಗ್ರೆಸ್ನ ಯಾವ ನಾಯಕರೂ  ಇವರಿಬ್ಬರನ್ನು ಮಾತನಾಡಿಸುವ ಗೋಜಿಗೆ ಹೋಗಿಲ್ಲ. 

   ಇತ್ತ ಬಿಜೆಪಿ ಪಾಳಯದಲ್ಲಿ ಅತೃಪ್ತ ಶಾಸಕರನ್ನು ಕರೆದು ಔತಣ ಕೊಡುವ ಸಂಪ್ರದಾಯ  ನಿಲ್ಲಿಸಿದೆ. ಆರಂಭದಲ್ಲಿ ರಾಜಾತಿಥ್ಯ ಅನುಭವಿಸಿದವರು ಈಗಿನ ಅನಾಧಾರ ಕಂಡು  ಸಿಡಿಮಿಡಿಗೊಳ್ಳಲಾರಂಭಿಸಿದ್ದಾರೆ.

  ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ  ಪತನವಾದರೆ ಹೊಸ ಸರಕಾರ ರಚಿಸಲು ಬಿಜೆಪಿ ತುದಿಗಾಲಲ್ಲಿ ನಿಂತಿದೆ. ಆದರೆ, ಅತೃಪ್ತಿಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವವರಿಗೆ  ಸ್ಪಷ್ಟ ಭರವಸೆಗಳನ್ನು ನೀಡುವ ನಾಯಕರಿಲ್ಲದಂತಾಗಿದೆ.

   ರಾಜೀನಾಮೆ ನೀಡಿದ ಬಳಿಕ ನಡೆಯುವ ಉಪ ಚುನಾವಣೆಯ ಜವಾಬ್ದಾರಿ ಹೊತ್ತಿಕೊಳ್ಳಬೇಕು. ಹೊಸ ಸಕರ್ಾರದಲ್ಲಿ ಸಚಿವ ಸ್ಥಾನ ನೀಡಬೇಕು. ತಾತ್ಕಾಲಿಕವಾಗಿರುವ ಕೆಲವು ಬೇಡಿಕೆಗಳಿಗೆ ಸ್ಪಂದಿಸಬೇಕು ಎಂಬ ಷರತ್ತುಗಳನ್ನು ಅತೃಪ್ತ ಶಾಸಕರು ಮುಂದಿಡುತ್ತಿದ್ದಾರೆ.

   ಉಪಚುನಾವಣೆಯ ಜವಾಬ್ದಾರಿ ನಿಭಾಯಿಸಲು ಬಿಜೆಪಿ ನಾಯಕರು ಸಿದ್ದರಿದ್ದಾರೆ.ಆದರೆ, ಹೊಸ ಸಕರ್ಾರದಲ್ಲಿ ಸಚಿವ ಸ್ಥಾನ ಅಥವಾ ಇನ್ನಿತರೆ ಅಧಿಕಾರಕ್ಕೆ ಸಂಬಂಧಪಟ್ಟಂತೆ ಸ್ಪಷ್ಟ ಭರವಸೆ ನೀಡಲು ಯಾರಿಗೂ ಸಾಧ್ಯವಾಗುತ್ತಿಲ್ಲ.

  ಕೆಲವು ಅತೃಪ್ತ ಶಾಸಕರು ದೆಹಲಿಗೆ ತೆರಳಿ ಬಿಜೆಪಿ ಹೈಕಮಾಂಡರನ್ನು ಭೇಟಿ ಮಾಡಲು ಪ್ರಯತ್ನಿಸಿದಾರೂ ಅದು ನಿರೀಕ್ಷಿತ ಫಲ ನೀಡಲಿಲ್ಲ. ರಾಜ್ಯದ ಮಟ್ಟದ ನಾಯಕರಿಗೆ  ಈ ವಿಷಯವಾಗಿ ಭರವಸೆ ನೀಡಲು ಹೆಚ್ಚಿನ ಅಧಿಕಾರ ಇಲ್ಲದೇ ಇರುವುದರಿಂದ ಎಲ್ಲವೂ ಅಯೋಮಯ ಸ್ಥಿತಿಯಲ್ಲಿದೆ.  

  ಈ ಮೊದಲು ಬಿಜೆಪಿ ನಾಯಕರ ಜತೆಗಿನ ಮಾತುಕತೆಯ ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಭರವಸೆ ನೀಡಿದ್ದ ಅತೃಪ್ತರು ಇತ್ತ ಕಾಂಗ್ರೆಸ್ ನಾಯಕರನ್ನೂ ಎದುರು ಹಾಕಿಕೊಂಡಿದ್ದಾರೆ. ಹಾಗಾಗಿ ಇತ್ತ ಕಾಂಗ್ರೆಸ್ನಲ್ಲೂ ಇಲ್ಲ, ಬಿಜೆಪಿಯಲ್ಲೂ ಕೇಳುತ್ತಿಲ್ಲ .ಒಟ್ಟಾರೆ ಅತೃಪ್ತ ಶಾಸಕರ ಭವಿಷ್ಯ ಗೊಂದಲದ ಗೂಡಾಗಿದೆ.