ಪ್ರತಿ 4 ವರ್ಷಗಳಿಗೊಮ್ಮೆ ನಡೆಯುವ ಗ್ರಾಮ ದೇವಿಯ ಪಲ್ಲಕ್ಕಿ ಹೊತ್ತು ಜಾತ್ರಾ ಮಹೋತ್ಸವ
ಹಾನಗಲ್ 16: ಪ್ರತಿ 4 ವರ್ಷಗಳಿಗೊಮ್ಮೆ ನಡೆಯುವ ಗ್ರಾಮದೇವಿ ಜಾತ್ರೆಗೆ ದಿನಗಣನೆ ಆರಂಭವಾಗಿದ್ದು, ಶುಕ್ರವಾರ ನಾನಾ ಪೂಜಾ ಕೈಂಕರ್ಯಗಳು, ಧ್ವಜಾರೋಹಣ, ಅಂಕಿ ಹಾಕುವ ಕಾರ್ಯಗಳು ನಡೆದವು. ಶಾಸಕ ಶ್ರೀನಿವಾಸ ಮಾನೆ ದೇವಿಯ ಪಲ್ಲಕ್ಕಿ ಹೊತ್ತು ಜಾತ್ರಾ ಮಹೋತ್ಸವ ಸುಸೂತ್ರವಾಗಿ ನಡೆಯಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವಿ ಪಾದಗಟ್ಟಿ ದೇವಸ್ಥಾನದಲ್ಲಿ ಧರ್ಮ ಧ್ಜಜಾರೋಹಣ ನಡೆಯಿತು. ಹುಬ್ಬಳ್ಳಿಯ ಮೂರುಸಾವಿರಮಠದ ಡಾ.ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯನಿಗೆ ದೈವಶ್ರದ್ಧೆ ಬೇಕು. ದೈವ ಕೃಪೆಯೂ ಬೇಕು. ನಮ್ಮದು ಧರ್ಮಾಧಾರಿತ ದೇಶ. ದೈವಶಕ್ತಿ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಅಂತಹ ಗ್ರಾಮದೇವಿ ಜಾತ್ರೆಯು ಅತ್ಯಂತ ಶಾಸ್ತ್ರೋಕ್ತವಾಗಿ ನಡೆಯಲಿ. ಇದು ಧಾರ್ಮಿಕ ಸಾಂಸ್ಕೃತಿಕ ವೈಭವವಾಗಲಿ ಎಂದರು. ಪಲ್ಲಕ್ಕಿ ಹೊತ್ತು ಮುನ್ನಡೆದ ಶಾಸಕ ಶ್ರೀನಿವಾಸ ಮಾನೆ, ಮಾತನಾಡಿ ನಮ್ಮ ಐತಿಹಾಸಿಕ ಸಂಸ್ಕೃತಿಯ ಆಚರಣೆಯಾದ ಗ್ರಾಮದೇವಿ ಜಾತ್ರೆ 4 ವರ್ಷಕ್ಕೊಮ್ಮೆ ಹಾನಗಲ್ಲಿನಲ್ಲಿ ನಡೆಯುತ್ತಿದ್ದು ಅದಕ್ಕಾಗಿ ತಾಲೂಕು ಆಡಳಿತ, ಪುರಸಭೆಯಿಂದ ಬೇಕಾಗುವ ಎಲ್ಲ ಅನುಕೂಲಗಳನ್ನು ಕಲ್ಪಿಸಲಾಗಿದೆ. ಲಕ್ಷಾಂತರ ಜನ ಸೇರುವ ಈ ಜಾತ್ರೆಗೆ ಜಾತ್ರಾ ಸಮಿತಿ ಹಾಗೂ ತಾಲೂಕು ಆಡಳಿತ ಒಟ್ಟಾಗಿ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸುತ್ತಿದ್ದಾರೆ. ಸುಗಮ ಹಬ್ಬಕ್ಕೆ ವಾಹನಗಳ ಮಾರ್ಗ ಬದಲಾವಣೆ, ಕುಡಿಯುವ ನೀರಿನ ವ್ಯವಸ್ಥೆ, ಸಿಸಿ ಕ್ಯಾಮೆರಾ ಸೇರಿದಂತೆ ಎಲ್ಲ ರಕ್ಷಣಾ ವ್ಯವಸ್ಥೆಯನ್ನು ಕಲ್ಪಸಲಾಗಿದೆ. ಹಬ್ಬ ಸೌಹಾರ್ದಯುತವಾಗಿ ಸಾಂಸ್ಕೃತಿಕ ಹಿರಿಮೆಯನ್ನು ಬಿತ್ತರಿಸಲಿ ಎಂದರು.ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು, ನೂರಾರು ಭಕ್ತರು ಉಪಸ್ಥಿತರಿದ್ದರು.