ಬೆಂಗಳೂರು20: ಜೆಡಿಎಸ್ ಕಾರ್ಯಕರ್ತರ ಮೇಲೆ ವಿನಾಕಾರಣ ಹಲ್ಲೆ ಮಾಡಿರುವ ಬಸವೇಶ್ವರ ನಗರ ಸಿಪಿಐ ಸೋಮಶೇಖರ್ ಅವರನ್ನು ವರ್ಗಾವಣೆ ಮಾಡುವಂತೆ ಜೆಡಿಎಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಮಹಾಲಕ್ಷ್ಮೀ ಲೇಔಟ್ ಬಿಜೆಪಿ ಅಭ್ಯರ್ಥಿ ಅನರ್ಹ ಶಾಸಕ ಗೋಪಾಲಯ್ಯ ಅವರು ಜೆಡಿಎಸ್ ಅಭ್ಯರ್ಥಿ ಡಾ.ಗಿರೀಶ್ ನಾಶಿ ಅವರಿಗೆ ನಾನಾರೀತಿಯಲ್ಲಿ ಆಮಿಷಗಳನ್ನು ಒಡ್ಡುವ ಮೂಲಕ ಬಿಜೆಪಿಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಒಪ್ಪಿಗೆ ನೀಡದ ನಾಶಿ ಅವರ ಮೇಲೆ ಬಸವೇಶ್ವರ ನಗರ ಸರ್ಕಲ್ ಇನ್ಸ್ ಪೆಕ್ಟರ್ ಮೂಲಕ ಹಲ್ಲೆ ಮಾಡಿಸಿದ್ದಾರೆ. ಹೀಗಾಗಿ ಪೊಲೀಸ್ ಅಧಿಕಾರಿ ವರ್ಗಾವಣೆಗೆ ದೂರು ನೀಡಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷವಿರೋಧಿ ಚಟುವಟಿಕೆ ನಡೆಸಿದ ಹಾಗೂ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದ ಹಿನ್ನಲೆಯಲ್ಲಿ ಪಕ್ಷದ ಬಿಬಿಎಂಪಿ ಸದಸ್ಯರಾದ ಗೋಪಾಲಯ್ಯ ಪತ್ನಿ ಹೇಮಲತಾ ಗೋಪಾಲಯ್ಯ, ಮಹಾದೇವ, ಬಿಬಿಎಂಪಿ ಮಾಜಿ ಸದಸ್ಯ ಎನ್.ಜಯರಾಮ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಉಪಚುನಾವಣೆಯಲ್ಲಿ ಸೋಲುವ ಭೀತಿಯಿಂದ ಗೋಪಾಲಯ್ಯ ಜೆಡಿಎಸ್ ನಾಯಕರನ್ನು ಹೆದರಿಸಿ ಬೆದರಿಸಿ ಪಕ್ಷ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಸೋಲುವ ಭೀತಿಯಿಂದ ಈ ರೀತಿ ಅಕ್ರಮ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.
ಯಶವಂತಪುರ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಬಿಜೆಪಿ ಪಕ್ಷ ಬೆಂಬಲಿಸುವಂತೆ ಆಹ್ವಾನ ನೀಡಿದ್ದ ವಿಚಾರವಾಗಿ ಮಾತನಾಡಿದ eಚ್. ಕೆ ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿ ಬಲಿಷ್ಟರಾಗಿದ್ದಾರೆಂಬುದು ಬಿಜೆಪಿಗೆ ಅರ್ಥ ಆಗಿದೆ. ಹೀಗಾಗಿ ಬಿಜೆಪಿ ಆಪರೇಶನ್ ಕಮಲ ಮಾಡಲು ಯತ್ನಿಸಿ ಜವರಾಯಿಗೌಡರನ್ನ ಹಿಂದೆ ಸರಿಸಿ ಗೆಲ್ಲಬಹುದೆಂದು ಬಿಜೆಪಿ ಲೆಕ್ಕಾಚಾರ ಹಾಕಿತ್ತು..
ಜವರಾಯಿಗೌಡ, ನಮ್ಮ ಪಕ್ಷದ ನಿಷ್ಟಾವಂತ ಕಾರ್ಯಕರ್ತರು.ಅವರು ಚುನಾವಣೆಗೆ ಸ್ಪರ್ಧಿಸಿ ಗೆಲ್ಲಲಿದ್ದಾರೆ ಎಂದರು.
ಮಹಾಲಕ್ಷ್ಮಿ ಲೇಔಟ್ ನ ಜೆಡಿಎಸ್ ಅಭ್ಯರ್ಥಿ ಡಾ. ಗಿರೀಶ್ ನಾಶಿ ಮಾತನಾಡಿ,ತಾವುಚುನಾವಣಾ ಕಣದಿಂದ ಹಿಂದೆ ಸರಿಯುತ್ತಿರುವುದಾಗಿ ಸುಳ್ಳು ವದಂತಿಗಳನ್ನು ಹರಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ. ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದೆ.ಇಂತಹ ಸುಳ್ಳು ಸುದ್ದಿಗಳಿಗೆ ಮತದಾರರು ಕಿವಿಗೊಡಬಾರದು ಎಂದು ಮನವಿ ಮಾಡಿದರು.