ಮನವೆಂಬ ಮರ್ಕಟ ಬಂಧಿಸಿ ಪರಶಿವನಲ್ಲಿ ಅಧೀನರಾಗಬೇಕು; ಶಂಕರಾನಂದ ಸ್ವಾಮೀಜಿ

The evil of mind must be bound and subjugated in Parashiva; Sankarananda Swamiji

ಮನವೆಂಬ ಮರ್ಕಟ ಬಂಧಿಸಿ ಪರಶಿವನಲ್ಲಿ ಅಧೀನರಾಗಬೇಕು; ಶಂಕರಾನಂದ ಸ್ವಾಮೀಜಿ 

ವಿಜಯಪುರ, 23;  ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪುರಾತನ ಕಾಲದಿಂದಲೂ ಗುರಿವಿಗೆ ಉನ್ನತ ಸ್ಥಾನಮಾನವನ್ನು ಸಮಾಜ ಕೊಟ್ಟಿದೆ. ಗುರು ಶಿಷ್ಯನ ಮನದ ಇಂಗಿತವನ್ನು ಅರಿತು ಕಾಮ, ಕ್ರೋಧ, ಮದ, ಮೋಹ, ಲೋಭ, ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ನಿಗ್ರಹಿಸಿ ಅವನಲ್ಲಿ ಸದಾಚಾರ, ಸನ್ನಡತೆ, ಸದ್ವಿವೇಕ, ಸದ್ವಿಚಾರ, ಸಮಚಿತ್ತ, ಸದ್ಭಾವ ಮತ್ತು ಸದಾ ಭಗವದ್ಚಿಂತನೆ ಬಿತ್ತಿ ಬದುಕು ಬಂಗಾರವನ್ನಾಗಿಸುತ್ತಾನೆ. ಇಡೀ ಜಗತ್ತಿಗೆ ಜ್ಞಾನದ ಪ್ರಭೆಯನ್ನು ಪಸರಿಸಿದ ಗುರುವನ್ನು ಸದಾ ಸ್ಮರಿಸಬೇಕು. ನಮ್ಮ ಜೀವನದಲ್ಲಿ ಗುರುಗಳ ಪಾತ್ರವೇನೆಂಬದನ್ನು ಅರಿಯುವುದರ ಮೂಲಕ ಅವರು ಬೋಧಿಸುವ ಉಪದೇಶ, ತೋರುವ ಸನ್ಮಾರ್ಗದಲ್ಲಿ ಮುನ್ನಡೆದರೆ ಖಂಡಿತ ಜೀವನ ಪುನೀತರಾಗುತ್ತೇವೆ. ಮನವೆಂಬ ಮರ್ಕಟನು ತನುವೆಂಬ ವೃಕ್ಷವನ್ನೇರಿ, ಇಂದ್ರಿಯಗಳೆಂಬ ಶಾಖೆ ಶಾಖೆಗೆ ಹೋಗದೇ ಭೌತಿಕ ಸುಖದ ಲೋಲುಪತೆಯಿಂದ ಹೊರಬಂದು ಮನಸ್ಸೆಂಬ ಕೋಡಗವನ್ನು ಧ್ಯಾನಪಾಶದಲ್ಲಿ ಕಟ್ಟಬೇಕೆಂದು ಭವಲೋಕದ ಸೂಕ್ಷ್ಮತೆಗಳನ್ನು ಉದಾಹರಣೆ ಸಹಿತವಾಗಿ ಉಪದೇಶಿಸಿದರು. ನೂರಾರು ಶಾಸ್ತ್ರ, ಪುರಾಣಗಳ ಓದಿದರು, ವೀರ-ಧೀರನಾಗಿ ಮೆರೆದರು ಸಾಲದು. ಸಜ್ಜನರ ಸಂಗವ ಮಾಡುತ ಗುರುವಿನ ಅಧೀನರಾಗಬೇಕು. ಆಗ ಮಾತ್ರ ಮುಕ್ತಿ ಎಂಬುದು ದೊರೆಯುತ್ತದೆ ಎಂದು ಪರಮಪೂಜ್ಯ ಶಂಕರಾನಂದ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.  ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್‌-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಸೇನಾ ನಗರದಲ್ಲಿರುವ ಶಿವಾಲಯ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಹಮ್ಮಿಕೊಂಡ ಪ್ರವಚನದ 3 ನೇ ದಿನದ ಪ್ರವಚನದಲ್ಲಿ “ನಿಷ್ಕಾಮ ಭಕ್ತಿ ಮತ್ತು ಜನಪದ ಸಂಸ್ಕೃತಿ” ವಿಷಯ ಕುರಿತು ಮಾತನಾಡುತ್ತಿದ್ದರು.  ಅವರು ಮಾತನಾಡುತ್ತಾ, ಅದ್ವೈತ್ ಸಿದ್ಧಾಂತದಲ್ಲಿ ಶಂಕರಾಚಾರ್ಯರ ನೀತಿಕ್ರಿಯಾದಲ್ಲಿ ತಿಳಿಸಿದಞಮತೆ, ಮನುಷ್ಯ ಚಂಚಲ ಮನಸ್ಸನ್ನು ಹತೋಟಿಯಲ್ಲಿಟ್ಟು ವೈರಾಗ್ಯಗಳಿಂದ ನಿಯಂತ್ರಿಸಿಕೊಂಡು, ಸದಾ ಒಳ್ಳೆಯ ಆಲೋಚನೆ, ಕೆಲಸ ಮಾಡುವುದು, ಪರೋಪಕಾರ, ಸತ್ಕಾರ್ಯ, ಸಮಾಜಮುಖಿ ಮತ್ತು ಧಾರ್ಮಿಕ, ಅಧ್ಯಾತ್ಮಿಕ, ವೈಚಾರಿಕತೆ ಚಟುವಟಿಕೆಗಳಲ್ಲಿ ತೊಡಗಿಕೊಲ್ಳಬೇಕು. ಅಂದಾಗ ಮಾತ್ರ ನರಮಾನವ ದೇವ ಮಾನವನಾಗಲು ಸಾಧ್ಯ. ಮೂಕನಾಗಬೇಕು ಈ ಜಗದೊಳು ಜ್ವಾಕ್ಯಾಗಿರಬೇಕು, ಕಾಕಬುದ್ದಿತನ ಮತ್ತು ಲೋಕದ ಗೊಡವೆ ಬಿಟ್ಟು, ಆಸೆ ಅಳಿದು ಮನಸ್ಸಿನ ಹೇಸಿಗೆ ತೊಳೆದು ಯಾವಾಗಲೂ ಈಶ ಮಹಾಂತನ ಪಾದ ಹಿಡಿದು ಪ್ರಾರ್ಥಿಸಿದರೆ ಜೀವನದಲ್ಲಿ ಸಾರ್ಥಕತೆ ಸಾಧಿಸಬಹುದು ಎಂದು ಹಾಸ್ಯ ಲೇಪನದ ಮೂಲಕ ಉಪದೇಶಿಸಿದರು. ಕಾರ್ಯಕ್ರಮದಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಧನ ಸಹಾಯ ಮತ್ತು ದೇಣಿಗೆ ನೀಡಿದ ಮಹನೀಯರನ್ನು ಸನ್ಮಾನಿಸಲಾಯಿತು. ಶ್ರೀ ವಿಠ್ಠಲ ಕಾಕಾ ಜಗತಾಪ, ವಿಶ್ವನಾಥ ಹಿರೇಮಠ, ಸುಭಾಸ ಕಟ್ಟಿಮನಿ, ಪ್ರೊ. ಬಿ. ವ್ಹಿ. ಕುಂಬಾರ ದಂಪತಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗುರುಬಸಯ್ಯ ಹಿರೇಮಠ, ಮೋಹನಸಿಂಗ್ ಪತ್ತಾರ, ಅರವಿಂದ ಹಂಗರಗಿ, ವಿಶ್ವನಾಥ ತೋಟದ, ಚನ್ನವೀರ ಬಿಜ್ಜರಗಿ, ಶ್ರೀಶೈಲ ಬೀಳೂರ, ಶ್ರೀಮತಿ ಶೋಭಾ ಚವ್ಹಾಣ, ರಾಜಶೇಖರ ಉಮರಾಣಿ, ಭರಮಣ್ಣ ಕಡಕೋಳ, ಶಿವಯೋಗೆಪ್ಪ ಹತ್ತಿ, ಶ್ರೀಶೈಲ ಅವಜಿ, ಪ್ರಫುಲ ನಿಂಬಾಳಕರ, ಅಲ್ಲಮಪ್ರಭು ಶಿರಹಟ್ಟಿ, ಕಾಶಿಲಿಂಗ ಶೇಗಾವಿ, ಅಪ್ಪಾಸಾಹೇಬ ಹಂಚಿನಾಳ, ಸಾವಿತ್ರಿ ಹಿರೇಮಠ, ಶಾಂತಾ ಕಪಾಳಿ ಇನ್ನಿತರರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ನವರಸಪುರದ ಎಲ್ಲ ಬಡಾವಣೆಗಳ ಸುಮಾರು ನೂರಾರು ಹಿರಿಯರು, ಮಹಿಳೆಯರು, ಮಕ್ಕಳು ಯುವಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ನಂತರ ಸದ್ಭಕ್ತರು ಮಹಾಪ್ರಸಾದ ಸೇವಿಸಿ ಶಿವನ ಕೃಪೆಗೆ ಪಾತ್ರರಾದರು.