ಪರಿಸರವು ನಮ್ಮ ಅನುಕೂಲದ ಬಹಳಷ್ಟು ಅಮೂಲ್ಯ ವಸ್ತುಗಳನ್ನು ನಮಗೆ ಉಡುಗೊರೆಯಾಗಿ ನೀಡಿದೆ-ಅಜೀತ ಪ್ರಸಾದ
ಧಾರವಾಡ 06:ನಾವು ನಮ್ಮ ಮನೆಯನ್ನು ಮತ್ತು ಮನೆಯ ಸುತ್ತಮುತ್ತಲು ಎಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇವೆಯೋ ಹಾಗೆಯೇ ನಮಗೆ ಅನ್ನ ಕೊಡುವ ನಮ್ಮ ಶಾಲೆ ಮತ್ತು ಕಚೇರಿಯನ್ನು ಹಾಗೆಯೇ ಇಟ್ಟುಕೊಳ್ಳಬೇಕು. ಪರಿಸರವು ನಮ್ಮ ಅನುಕೂಲದ ಬಹಳಷ್ಟು ಅಮೂಲ್ಯ ವಸ್ತುಗಳನ್ನು ನಮಗೆ ಉಡುಗೊರೆಯಾಗಿ ನೀಡಿದೆ, ಅದನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜೆ.ಎಸ್.ಎಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಅಜಿತ್ ಪ್ರಸಾದ ರವರು ಹೇಳಿದರು. ಹುಬ್ಬಳ್ಳಿ ಧಾರವಾಡ ನಾಗರಿಕ ಪರಿಸರ ಸಮಿತಿ, ಮುನವಳ್ಳಿ ಪೌಂಡೇಶನ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಇಂದು ಬೆಳಿಗ್ಗೆ ಜೆ.ಎಸ್.ಎಸ್ ಸಂಸ್ಥೆಯ ಉತ್ಸವ ಸಭಾಭವನದಲ್ಲಿ ನಡೆದ "ಪರಿಸರ ಮಿತ್ರ ಶಾಲಾ ಸ್ಪರ್ಧೆ- 2025 ಶಿಕ್ಷಕರ ಪೂರ್ವಭಾವಿ ತರಬೇತಿ ಕಾರ್ಯಕ್ರಮವನ್ನು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ.ಅಜಿತ ಪ್ರಸಾದ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸೇವಿಸುವ ಗಾಳಿ ಉಣ್ಣುವ ಅನ್ನ, ಹಣ್ಣು, ಕಾಯಿಪಲ್ಲೆ ಎಲ್ಲವೂ ರಾಸಾಯನಿಕ ಮಿಶ್ರಿತವಾಗಿದೆ. ಸರಿ ತಪ್ಪಿನ ತಿಳುವಳಿಕೆ ಆಗಬ್ಕಿದೆ. ಸರಕಾರ ಮತ್ತು ಕಾನೂನಿನಿಂದ ಎಲ್ಲವನ್ನೂ ಸರಿಪಡಿಸಲು ಸಾದ್ಯವಿಲ್ಲ. ಮಕ್ಕಳ ಮನಸ್ಸಿನಲ್ಲಿ ಪರಿಸ ಕಾಳಜಿ ತುಂಬುವ ಅವಶ್ಯಕತೆ ಇದೆ. ಈ ಮೂರೂ ಸಂಸ್ಥೆಗಳು ಮಾಡುತ್ತಿರುವುದು ಅಭಿನಂದನಾರ್ಹ ಎಂದು ಹೇಳಿ ಶಿಕ್ಷಕರು ಈ ದಿಶೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಹಾರೈಸಿದರು. ಅತಿಥಿಗಳಾದ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಎಸ್.ಎಂ ಹುಡೇದಮನಿ ಮಾತನಾಡಿ, ಶಾಲೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಶಾಲಾ ಮಕ್ಕಳಿಗೆ ತಿಳಿಸುವುದು ಶಿಕ್ಷಕರ ಕರ್ತವ್ಯವಾಗಿದೆ. ಮಕ್ಕಳಿಗೆ ನೀರಿನ ಮಹತ್ವ ಹಾಗೂ ನೀರಿನ ಸಂರಕ್ಷಣೆ ವಿಧಾನಗಳ ಬಗ್ಗೆ ತಿಳುವಳಿಕೆ ನೀಡಬೇಕು. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಕಾರ್ಯ ಆಗಬೇಕು. ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಿ ಈ ಯೋಜನೆಯ ಫಲ ಸಮಾಜಕ್ಕೆ ತಲುಪುವಂತೆ ಮಾಡೋಣ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರಿಸರ ಸಮಿತಿಯ ಅಧ್ಯಕ್ಷ ಶಂಕರ ಕುಂಬಿ ಮಾತನಾಡಿ, ಪರಿಸರ ಸಂರಕ್ಷಣೆ ಮನುಷ್ಯನಿಗೆ ಮಾತ್ರವಲ್ಲ ಇತರ ಜೀವಿಗಳಿಗೂ ಬಹಳ ಮುಖ್ಯ. ಏಕೆಂದರೆ ಪರಿಸರ ಸುರಕ್ಷಿತವಾಗಿರದಿದ್ದರೆ ಭೂಮಿಯ ಮೇಲಿನ ಜೀವಸಂಕುಲವೂ ಕಡಿಮೆಯಾಗುತ್ತದೆ. ಪ್ರತಿಯೊಬ್ಬರೂ ಪರಿಸರ ತಮಗೆ ಬದುಕು ನೀಡುತ್ತದೆ ಎಂಬ ಅರಿವು ಇಟ್ಟುಕೊಂಡು ಪರಿಸರವನ್ನು ಕಾಪಾಡಿಕೊಳ್ಳಬೇಕು ಎಂದರು. ಪರಿಸರ ಮಿತ್ರ ಶಾಲಾ ಯೋಜನೆಯ ಸಂಯೋಜಕ ಕೆ.ಎಚ್. ನಾಯಕ ಮಾತನಾಡಿ, ಹಿರಿಯರು ಮಾಡಿದ ತಪ್ಪುಗಳನ್ನು ನಮ್ಮ ಮಕ್ಕಳು ಮಾಡಬಾರದು. ಮೇಲಾಗಿ ಇಂದಿನ ಮಕ್ಕಳಿಂದಲೇ ಪರಿಸರ ಉಳಿಸಲು ಸಾಧ್ಯ ಎಂದು ಹೇಳಿ ಪರಿಸರ ಕೈಪಿಡಿ ಭರಣ ಮಾಡುವ ಮತ್ತು ಯೋಜನೆಯ ವಿವರವನ್ನು ಹಾಗೂ ರೂಪರೇಷೆ ಕುರಿತು ಉಪನ್ಯಾಸ ನೀಡಿದರು. ಧಾರವಾಡ ಗ್ರಾಮೀಣ ವಲಯದ ಕ್ಷೇತ್ರಶಿಕ್ಷಣಾಧಿಕಾರಿ ಆರ್.ಆರ್ ಸದಲಗಿ, ಪ್ರೊ. ಉಪಾಧ್ಯಾಯ ಉಪಸ್ಥಿತರಿದ್ದರು. ಸಹಾಯಕ ಯೋಜನಾ ಸಮನ್ವಯಾಧಿಕಾರಿ ಡಾ.ರೇಣುಕಾ ಅಮಲಝರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ವಿಲಾಸ ಕುಲಕರ್ಣಿ ಸ್ವಾಗತಿಸಿದರು. ಐ.ಎಲ್.ಪಾಟೀಲ ವಂದಿಸಿದರು.