ಕೃಷಿ ಸೇರಿದಂತೆ ನಾನಾ ಕ್ಷೇತ್ರಗಳ ಉತ್ತೇಜನಕ್ಕೆ ಹತ್ತು, ಹಲವು ಕ್ರಮ ಕೈಗೊಂಡಿದ್ದಾರೆ : ಶ್ರೀನಿವಾಸ ಮಾನೆ
ಹಾನಗಲ್ : ಕೇಂದ್ರ ಸರ್ಕಾರದ ಅಸಹಕಾರ, ಆರ್ಥಿಕ ಸವಾಲುಗಳ ಮಧ್ಯೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮತೋಲಿತ ಹಾಗೂ ವಾಸ್ತವತೆಯಿಂದ ಕೂಡಿದ ನಾಳೆಗಳ ಬಗ್ಗೆ ಭರವಸೆ ಮೂಡಿಸುವಂಥ ಆಶಾದಾಯಕ ಬಜೆಟ್ ಮಂಡಿಸಿದ್ದು, ಶಿಕ್ಷಣ, ಮಹಿಳಾ ಸಬಲೀಕರಣ, ಕೃಷಿ ಸೇರಿದಂತೆ ನಾನಾ ಕ್ಷೇತ್ರಗಳ ಉತ್ತೇಜನಕ್ಕೆ ಹತ್ತು, ಹಲವು ಕ್ರಮ ಕೈಗೊಂಡಿದ್ದಾರೆ ಎಂದು ಶಾಸಕ ಶ್ರೀನಿವಾಸ ಮಾನೆ ಪ್ರತಿಕ್ರಿಯೆ ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ 51 ಸಾವಿರ ಕೋಟಿ ರೂ. ಒದಗಿಸಿ, ಮೂಲಸೌಕರ್ಯಗಳ ಅಭಿವೃದ್ಧಿಗೆ 8 ಸಾವಿರ ಕೋಟಿ ರೂ. ನೀಡಿದ್ದಾರೆ. ಸುಸ್ಥಿರ ಮತ್ತು ಲಾಭದಾಯಕ ಕೃಷಿಗೆ ನಾನಾ ಕ್ರಮ ಕೈಗೊಂಡಿದ್ದಾರೆ. ಶಿಕ್ಷಣ ಕ್ಷೇತ್ರದ ಅಮೂಲಾಗ್ರ ಬದಲಾವಣೆಗೆ ಮುನ್ನುಡಿ ಬರೆದಿದ್ದು, ಹೊಸದಾಗಿ 500 ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭ, ಶಾಲೆಗಳ ಉನ್ನತೀಕರಣ ಬಗ್ಗೆ ಹೇಳಿದ್ದಾರೆ. ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಬಿಸಿಯೂಟ ಸಿಬ್ಬಂದಿಯ ಗೌರವಧನ ಹೆಚ್ಚಿಸಿದ್ದಾರೆ. ಅಕ್ಕ ಕೋ ಆಪರೇಟಿವ್ ಸೊಸೈಟಿ, ಅಕ್ಕ ಕ್ಯಾಂಟೀನ್ ಸ್ಥಾಪನೆಯ ಘೋಷಣೆ ಮಾಡಿದ್ದಾರೆ. ಇನ್ನು ಜಿಲ್ಲೆಯ ವಿಚಾರಕ್ಕೆ ಸಂಬಂಧಿಸಿದಂತೆ ಕಾಗಿನೆಲೆಗೆ 34 ಕೋಟಿ ರೂ. ನೀಡಿದ್ದು, ರಾಣೇಬೆನ್ನೂರಿನಲ್ಲಿ ಜವಳಿ ಪಾರ್ಕ್ ಸ್ಥಾಪನೆ, ಸವಣೂರು ತಾಲೂಕಾಸ್ಪತ್ರೆಯ ನವೀಕರಣ, ಹಾವೇರಿಯಲ್ಲಿ ವಿದ್ಯುನ್ಮಾನ ಕ್ಯಾಮರಾ ಅಳವಡಿಸುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ನರೇಗಲ್, ಕೂಸನೂರು ಏತ ನೀರಾವರಿ ಯೋಜನೆಗಳಿಗೆ ಮಂಜೂರಾತಿ ಸಿಗುವ ವಿಶ್ವಾಸವಿದೆ ಎಂದು ಶಾಸಕ ಮಾನೆ ಹೇಳಿದ್ದಾರೆ.