ತಂತ್ರಜ್ಞಾನ ನಮ್ಮ ಜ್ಞಾನದ ಮೇಲೆ ಪ್ರಹಾರ ಸಲ್ಲದು: ನಿಂಗಪ್ಪ
ಹೂವಿನಹಡಗಲಿ 19: ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ನಮ್ಮ ಜ್ಞಾನ ಪರಂಪರೆಗೆ ಧಕ್ಕೆ ತರಲಿದೆ. ಮುಂದಿನ ಪೀಳಿಗೆಯ ಬೌದ್ಧಿಕತೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಧಾರವಾಡ ವಿಶ್ವವಿದ್ಯಾಲಯದ ಸಿ.ಹಿರೇಮಠ ಕನ್ನಡ ಕರ್ನಾಟಕ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕ ನಿಂಗಪ್ಪ ಪಟ್ಟಣದ ಗವಿಸಿದ್ದೇಶ್ವರ ಸ್ವಾಮಿಯ 30 ನೇ ವರ್ಷದ ಜಾತ್ರೆ ಪ್ರಯುಕ್ತ ಸೋಮವಾರ ರಾತ್ರಿ ಆಯೋಜಿಸಿದ್ದ ಭಕ್ತ ಹಿತ ಚಿಂತನಾ ಸಭೆಯಲ್ಲಿ ’ಗವಿಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು ಯಾವುದೇ ತಂತ್ರಜ್ಞಾನ ನಮ್ಮ ಅಲೋಚನೆಗಳ ಮೇಲೆ, ಜ್ಞಾನದ ಮೇಲೆ ಪ್ರಹಾರ ಮಾಡಬಾರದು ಎಂದ ಅವರು ಇಂತಹ ಕೆಡುಕುಗಳಿಗೆ ಮದ್ದು ನೀಡುವ ಕೆಲಸವನ್ನು ಮಠಮಾನ್ಯಗಳು, ಧರ್ಮ ಗುರುಗಳು ಮಾಡುತ್ತಿದ್ದಾರೆ ಎಂದರು.
ನನಗೆ ಸಂದಿರುವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇತರೆಪುರಸ್ಕಾರಗಳಿಗಿಂತ ’ಗವಿಶ್ರೀ’ ಪ್ರಶಸ್ತಿ ನನ್ನ ಬದುಕನ್ನು ಸಾರ್ಥಕಗೊಳಿಸಿದೆ. ನನ್ನೊಳಗೆ ನೈತಿಕತೆಯ ಬೆಳಕು ನೀಡಿದೆ. ಇಲ್ಲಿನ ಗವಿಮಠವು ಮಕ್ಕಳಿಗೆ ಸಂಸ್ಕಾರ ನೀಡಿ, ಪ್ರತಿಭೆ ಬೆಳಗಲು ಸಹಕಾರಿಯಾಗಿದೆ’ ಎಂದು ಪ್ರಶಂಸಿಸಿದರು.
ಸಾನ್ನಿಧ್ಯ ವಹಿಸಿದ್ದ ಮುಂಡರಗಿಯ ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಲಿಂ.ಲಿಂಗೇಶ್ವರ ಸ್ವಾಮೀಜಿ ಆಶಯದಂತೆ ಹಿರಿಶಾಂತವೀರ ಸ್ವಾಮೀಜಿ ಮಠವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿದ್ದಾರೆ. ಕೊಪ್ಪಳ ಮಠದಂತೆ ಶಾಖಾ ಮಠವೂ ಬೆಳಗುತ್ತಿದೆ ಎಂದು ಪ್ರಶಂಸಿಸಿದರು.ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಹಿರಿಶಾಂತವೀರ ಸ್ವಾಮೀಜಿ, ಮಲ್ಲನಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಮೈನಳ್ಳಿಯ ಸಿದ್ದೇಶ್ವರ ಸ್ವಾಮೀಜಿ, ಇಟಗಿಯ ಗುರುಶಾಂತ ಸ್ವಾಮೀಜಿ, ಹೆಬ್ಬಾಳ ನಾಗಭೂಷಣ ಸ್ವಾಮೀಜಿ, ಮಂಗಳೂರಿನ ಸಿದ್ದಲಿಂಗ ಸ್ವಾಮೀಜಿ, ಅಗಡಿಯ ಗುರುಸಿದ್ದ ಸ್ವಾಮೀಜಿ, ಹೊಳಲಿನ ಮಲ್ಲಿಕಾರ್ಜುನ ದೇವರು ಸಾನ್ನಿಧ್ಯ ವಹಿಸಿದ್ದರು. ಭಕ್ತಿಸೇವೆ ಸಲ್ಲಿಸಿದ ಭಕ್ತರಿಗೆ ಗುರುರಕ್ಷೆ ನೀಡಲಾಯಿತು. ಗವಿಶ್ರೀ ಅಕ್ಕನ ಬಳಗದವರು ’ಸುಧಾಮ ಕೃಷ್ಣರ ಗೆಳೆತನ’ ಕಿರುನಾಟಕ ಪ್ರದರ್ಶಿಸಿದರು