ಮಕ್ಕಳೊಂದಿಗೆ ಅಸಭ್ಯ ವರ್ತನೆ ತೋರಿದ ಶಿಕ್ಷಕ ತಿಲಕ ಅಮಾನತ್ತು
ತಾಳಿಕೋಟೆ 16: ತಾಲೂಕಿನ ಗಡಿ ಸೋಮನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಸಹ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಎ.ಜಿ.ತಿಲಕ( ಜಿಟಿಟಿ) ಶಾಲಾ ಮಕ್ಕಳೊಂದಿಗೆ ತೋರಿದ ಅಸಭ್ಯವರ್ತನೆ, ದುರ್ನಡತೆ ಹಾಗೂ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಅಮಾನತ್ತು ಗೊಂಡಿದ್ದಾರೆ. ತಾಳಿಕೋಟಿ ತಾಲೂಕಿನ ದೇವರ ಹಿಪ್ಪರಗಿ ಮತಕ್ಷೇತ್ರ ವ್ಯಾಪ್ತಿಯ ಗಡಿ ಸೋಮನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಸಹ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಎ.ಜಿ.ತಿಲಕ 2016-17 ನೇ ಸಾಲಿನಲ್ಲಿ ನೇಮಕಾತಿಗೊಂಡು ಮುದ್ದೇಬಿಹಾಳ ತಾಲೂಕಿನ ಘಾಳಪೂಜಿ, ಚವನಭಾವಿ,ಹಗರಗುಂಡ,ದೇವರ ಹುಲಗಬಾಳ ಗ್ರಾಮಗಳ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗಲೂ ಇದೇ ರೀತಿಯ ದುರ್ವರ್ತನೆಯ ನಡತೆಯಿಂದಾಗಿ ಒಂದು ಬಾರಿ ಅಮಾನತ್ತು ಗೊಂಡು ನಾಲ್ಕು ಬಾರಿ ವರ್ಗಾವಣೆಗೊಂಡಿದ್ದರು. ದಿನಾಂಕ 15-3-2025 ರಂದು ಕರ್ನಾಟಕ ನಾಗರಿ ಸೇವಾ ನಿಯಮ- 1957 ( ವರ್ಗೀಕರಣ,ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ -10(1) ಡಿ.ರನ್ವಯ ಅವರಿಗಿರುವ ಪದದತ್ತವಾದ ಅಧಿಕಾರವನ್ನು ಚಲಾಯಿಸಿ ಶಿಕ್ಷಕ ಎ.ಜಿ.ತಿಲಕನನ್ನು ಕರ್ತವ್ಯಲೋಪ,ಅಸಭ್ಯ ವರ್ತನೆ ಹಾಗೂ ದುರ್ನಡತೆ ತೋರಿದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.