ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಅಗತ್ಯ ಸೌಲಭ್ಯ ಒದಗಿಸಲು ಕ್ರಮ ವಹಿಸಿ -ಜಿಲ್ಲಾಧಿಕಾರಿ ಟಿ.ಭೂಬಾಲನ್

Take steps to provide necessary facilities at the refugee relief center - District Magistrate T. Bh

ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಅಗತ್ಯ ಸೌಲಭ್ಯ ಒದಗಿಸಲು ಕ್ರಮ ವಹಿಸಿ    -ಜಿಲ್ಲಾಧಿಕಾರಿ ಟಿ.ಭೂಬಾಲನ್ 

ವಿಜಯಪುರ 10: ವಿಜಯಪುರ ನಗರದ ಟಕ್ಕೆಯಲ್ಲಿರುವ ಸ್ಥಳೀಯ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ನಿರಾಶ್ರಿತರಿಗೆ ಸಂಬಂಧಿಸಿದ ಇಲಾಖೆಗಳು ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ನಿರಾಶ್ರಿತರಿಗೆ ಆಶ್ರಯ ಒದಗಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದರು.  

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಬೆಳಿಗ್ಗೆ ನಡೆದ ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975ರ ಸೆಕ್ಷನ್ 5ರ ಪ್ರಕಾರ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮದಂತೆ ಭಿಕ್ಷಾಟನೆ ಮಾಡುತ್ತಿರುವವರನ್ನು ರಕ್ಷಿಸಿ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಆಶ್ರಯ ಒದಗಿಸಲಾಗುತ್ತದೆ. ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳು ಒಳಗೊಂಡಂತೆ ನಗರದಲ್ಲಿ ಪರಿಹಾರ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಈ ಕೇಂದ್ರದಲ್ಲಿ 150 ನಿರಾಶ್ರಿತರಿಗೆ ಆಶ್ರಯ ಒದಗಿಸಲಾಗಿದ್ದು, ಈ ಪೈಕಿ 91 ಬೇರೆ ರಾಜ್ಯದವರಾಗಿದ್ದಾರೆ.  

ಆಶ್ರಯ ಪಡೆದವರಲ್ಲಿ 45 ಜನ ಮಾನಸಿಕ ಅಸ್ವಸ್ಥರಿದ್ದು, ಕೆಲವರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕಾಲಕಾಲಕ್ಕೆ ಕೌನ್ಸೆಲಿಂಗ್ ನಡೆಸಬೇಕು. ಕಾಲಕಾಲಕ್ಕೆ ಸಮಾಲೋಚನೆ ನಡೆಸಬೇಕು. ಆರೋಗ್ಯ ತಪಾಸಣೆ ನಡೆಸಬೇಕು. ದೀರ್ಘಾವಧಿ ಕಾಯಿಲೆ ಇರುವವರಿಗೆ ಸೂಕ್ತ ಓಷಧೋಪಚಾರ ಒದಗಿಸಿ ಗುಣಪಡಿಸಲು ಕ್ರಮ ವಹಿಸಬೇಕು ಎಂದು ಅವರು ಸೂಚನೆ ನೀಡಿದರು.  

ಕೇಂದ್ರದಲ್ಲಿನ ನಿರಾಶ್ರಿತರಿಗೆ ಟೇಲರಿಂಗ್, ಲಾಂಡ್ರಿ ಸೇರಿದಂತೆ ಅವರ ಕೌಶಲ್ಯಕ್ಕನುಸಾರವಾಗಿ ಸೂಕ್ತ ತರಬೇತಿ ಒದಗಿಸಲು ಕ್ರಮ ವಹಿಸಬೇಕು. ಕೇಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಬೀದಿ ದೀಪಗಳನ್ನು ಸಮರ​‍್ಕವಾಗಿ ನಿರ್ವಹಣೆ ಮಾಡಬೇಕು. ಕೇಂದ್ರದ ಆವರಣದಲ್ಲಿ ಉತ್ತಮವಾದ ಸ್ವಚ್ಛ ಪರಿಸರಕ್ಕೆ ಆದ್ಯತೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.  

ಭಿಕ್ಷಾಟನೆ ಮಾಡುವವರಿಗೆ ಸಂರಕ್ಷಿಸುವುದು, ರಕ್ಷಿತರನ್ನು ಅವರ ಕೌಶಲ್ಯದ ಆಧಾರದ ಮೇಲೆ ಅವರಿಗೆ ತರಬೇತಿ ನೀಡಿ, ಮುಂದಿನ ದಿನಗಳಲ್ಲಿ ಭಿಕ್ಷಾಟನೆಗಿಳಿಯದೇ ಅವರ ಜೀವನ ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ  ಕೇಂದ್ರ ಕಾರ್ಯ ನಿರ್ವಹಿಸಲು, ನಿರಾಶ್ರಿತರ ಕೇಂದ್ರದ ಸಮರ​‍್ಕ ನಿರ್ವಹಣೆಗೆ ವಿವಿಧ ಇಲಾಖೆಗಳ ಸಹಕಾರವು ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಶೇ3ರಷ್ಟು ಕರ ಆದ್ಯತೆ ಮೇಲೆ ನೀಡಬೇಕು. ಯಾವುದೇ ಕಾರಣಕ್ಕೆ ವಿಳಂಬ ಮಾಡಬಾರದು ಎಂದು ಹೇಳಿದರು.  

ನಿರಾಶ್ರಿತ ಕೇಂದ್ರ ನಿರ್ವಹಣೆಗೆ ಮೆಚ್ಚುಗೆ : ನಿರಾಶ್ರಿತರ ಕೇಂದ್ರಕ್ಕೆ ಇತ್ತೀಚಿಗೆ ಭೇಟಿ ನೀಡಿದಾಗ ಅಲ್ಲಿನ ಸ್ವಚ್ಛ, ಶುದ್ಧ ಪರಿಸರ, ಆವರಣದಲ್ಲಿ ಬೆಳೆದಿರುವ ಗಿಡ-ಮರಗಳ ಹಸಿರು ವಾತಾವರಣ, ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಈ ಮಾದರಿಯಲ್ಲಿಯೇ ಜಿಲ್ಲೆಯಲ್ಲಿನ ಎಲ್ಲ ಸರ್ಕಾರಿ ಕಚೇರಿ ಆವರಣದಲ್ಲಿ ಸ್ವಚ್ಛತೆ ಹಾಗೂ ಹಸರೀಕರಣಕ್ಕೆ ಆದ್ಯತೆ ನೀಡುವಂತೆ ಅವರು ಸೂಚನೆ ನೀಡಿದರು.  

ಇದೇ ಸಂದರ್ಭದಲ್ಲಿ ಭಿಕ್ಷಾಟನೆ ನಿರ್ಮೂಲನೆಯ ಕರಪತ್ರ  ಬಿಡುಗಡೆ ಹಾಗೂ ಪ್ರಚಾರ ವಾಹನಕ್ಕೆ  ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಚಾಲನೆ ನೀಡಿದರು.  

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸಂಪತ್‌ಕುಮಾರ ಗುಣಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಎಲ್‌.ರೂಪಾ, ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಬಸವರಾಜ ನಾಟೀಕಾರ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.