ಬಿ-ಖಾತಾ ಯೋಜನೆಯ ಲಾಭ ಪಡೆಯಿರಿ: ಶಾಸಕ ರಾಜು ಕಾಗೆ
ಕಾಗವಾಡ 27: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಬಿ ಖಾತೆಯ ಲಾಭವನ್ನು ಎಲ್ಲರೂ ಪಡೆದುಕೊಂಡು, ಸರ್ಕಾರ ಯೋಜನೆಯ ಲಾಭ ಪಡೆಯಬೇಕೆಂದು ಶಾಸಕ ರಾಜು ಕಾಗೆ ಹೇಳಿದರು. ಅವರು ಬುಧವಾರ ದಿ. 25 ರಂದು ತಾಲೂಕಿನ ಶೇಡಬಾಳ ಪಟ್ಟಣ ಪಂಚಾಯತ ಸಭಾಂಗಣದಲ್ಲಿ ನಡೆದ 2025-26 ನೇ ಸಾಲಿನ ಉಳಿತಾಯ ಬಜೆಟ್ ಮಂಡನೆಯ ಸಭೆಯಲ್ಲಿ ಭಾಗವಹಿಸಿ, ಮಾತನಾಡುತ್ತಿದ್ದರು. ರಾಜ್ಯ ಸರ್ಕಾರ ತಮ್ಮ ತೋಟದ ಹಾಗೂ ಪಟ್ಟಣದಲ್ಲಿ ಇರುವ ಆಸ್ತಿ ನೋಂದಣಿಯಾಗದೇ ಇರುವ ಆಸ್ತಿಗಳನ್ನು ಬಿ ಖಾತೆ ಮಾಡಿ, ಕೊಳ್ಳುವ ಅವಕಾಶ ನೀಡಿದ್ದು, ಈ ಯೋಜನೆ ಬರುವ ಮೇ ತಿಂಗಳ ವರಗೆ ಜಾರಿಯಲ್ಲಿದೆ. ಪಟ್ಟಣದ ನಾಗರೀಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಬಜೆಟ್ ಸಭೆಯಲ್ಲಿ ಪ.ಪಂ. ಅಧ್ಯಕ್ಷ ಉತ್ಕರ್ಷ ಪಾಟೀಲ ಅಧ್ಯಕ್ಷತೆಯಲ್ಲಿ ಮುಖ್ಯಾಧಿಕಾರಿ ಸುರೇಶ ಪತ್ತಾರ ಉಳಿತಾಯ ಬಜೆಟ್ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿ, ರಾಜ್ಯ ಸರ್ಕಾರ ಹಾಗೂ ಇತರೆ ಯೋಜನೆಯಿಂದ 8.24 ಕೋಟಿ ಸಂಗ್ರಹವಾಗಿದ್ದು, ಇದರಲ್ಲಿ 8.22 ಕೋಟಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಹಂಚಿಕೆ ಮಾಡಲಾಗಿದೆ. 1.79 ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಗಿದೆ ಎಂದು ಹೇಳಿದರು. ಉಪಾಧ್ಯಕ್ಷ ದೀಪಾ ಹೊನಕಾಂಬಳೆ, ಸದಸ್ಯರಾದ ರಶಿದಾ ಮೇಸ್ತ್ರಿ, ಸುಲಭಾ ಪಾಟೀಲ, ಸ್ವಾತಿ ಜಗತಾಪ, ಅನೀಲ ಮಾಲಗಾಂವೆ, ಮಹಾದವಲ ಯಾದವಾಡೆ, ರಾಮು ನರಸಾಯಿ, ಬಾಬು ಐನಾಪೂರ, ಶೈಲಾ ಢಾಲೆ, ಶೃತಿ ಮಾಳಗೆ, ರೇಣುಕಾ ಹೊನಕಾಂಬಳೆ, ಅಣ್ಣಪ್ಪಾ ಮಾಕಣ್ಣನವರ, ರಮೇಶ ರತ್ನಪ್ಪಗೋಳ, ಜಿ.ಬಿ. ಹೀರೆಮಠ, ಸುಧೀರ ಮಾಳಪ್ಪಗೋಳ, ಶೇಖರ ಜಾಧವ, ಲೋಕೇಶ ನಡೋಣಿ, ಜೋತಿ ಪಾಟೀಲ ಇದ್ದರು.