ಸರಕಾರದ ಯೋಜನೆಗಳನ್ನು ಸದುಪಯೋಗಿಸಿಕೊಳ್ಳಿ: ಲಕ್ಷ್ಮಣ ಬಡಿಗೇರ
ಬಾಗಲಕೋಟೆ 04: ಹಿರಿಯ ನಾಗರೀಕರಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಸಾಕಷ್ಟು ಯೋಜನೆಗಳಿದ್ದು ಅವುಗಳನ್ನು ಹಿರಿಯರು ಸದುಪಯೋಗಪಡಿಸಿಕೊಂಡು ಸ್ವಾಭಿಮಾನದಿಂದ ಬದುಕಬೇಕು ಎಂದು ಬಾಗಲಕೋಟೆಯ ಹಿರಿಯ ನಾಗರಿಕ ಕಲ್ಯಾಣ ಇಲಾಖೆಯ ಯೋಜನಾ ಅಧಿಕಾರಿ ಲಕ್ಷ್ಮಣ ಬಡಿಗೇರ್ ಹೇಳಿದರು.
ಅವರು ಬಿವ್ಹಿವ್ಹಿ ಸಂಘದ ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನ ಬಿಇಸಿ ಧ್ವನಿ ಸಮುದಾಯ ಬಾನುಲಿ ಕೇಂದ್ರದಿಂದ ಸಮುದಾಯ ಬಾನುಲಿ ಕೇಂದ್ರಗಳ ಸಂಘ ಮತ್ತು ಭಾರತ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ಕಿರಸೂರ ಗ್ರಾಮದಲ್ಲಿ ನಡೆದ ನಮ್ಮ ಹಿರಿಯರು ನಮ್ಮ ಗೌರವ ಸರಣಿ ಕಾರ್ಯಕ್ರಮದಲ್ಲಿ ಮಾತನಾಡಿ ವಯಸ್ಸಾದವರ ಒಳಿತನ್ನು ಕಾಪಾಡುವುದು ಯೋಜನೆಗಳ ಉದ್ದೇಶವಾಗಿದೆ. ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ವೃದ್ದರಿಗೆ ಸಮಾನ ಅವಕಾಶಗಳನ್ನು ರೂಪಿಸುವುದು ಅಲ್ಲದೆ ಹಿರಿಯ ನಾಗರಿಕರು ರಚನಾತ್ಮಕ, ಸುಭಿಕ್ಷ ಮತ್ತು ತೃಪ್ತಿಕರ ಜೀವನವನ್ನು ನಡೆಸಲು ಅವಕಾಶಗಳನ್ನು ನೀಡುವುದು ವಯಸ್ಸಾದ ವ್ಯಕ್ತಿಗಳೂ ಸಹ ಸಂಪನ್ಮೂಲ ವ್ಯಕ್ತಿಯಾಗಿದ್ದು ಕುಟುಂಬಕ್ಕೆ ಮತ್ತು ಸಮಾಜಕ್ಕೆ ಉಪಯುಕ್ತ ಸೇವೆಯನ್ನು ಸಲ್ಲಿಸಿರುತ್ತಾರೆ ಎಂಬುವುದನ್ನು ಗಮನದಲ್ಲಿಟ್ಟಿಕೊಳ್ಳಬೇಕು. ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಅಂತಹ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.
ಸಿಆರ್‌ಎ ಮೇಲ್ವಿಚಾರಣೆಯ ಸಮಿತಿಯ ಶಿವಶಂಕರ, ಬಿಇಸಿ ಧ್ವನಿಯ ಭರತ್ ಬಡಿಗೇರ, ಈರಯ್ಯ ಚಿಕ್ಕಮಠ, ಮಹಾಂತೇಶ್ ಕೊತಿನ್ ಸೇರಿದಂತೆ ಗ್ರಾಮದ ಹಿರಿಯರು ಇದ್ದರು.