ತಡವಲಗಾ ಮರುಳಸಿದ್ದೇಶ್ವರ ಜಾತ್ರೆ: ಸರ್ವ ಧರ್ಮ ಸಾಮೂಹಿಕ ವಿವಾಹ
ಇಂಡಿ 25: ತಾಲೂಕಿನ ಸುಕ್ಷೇತ್ರ ಮರುಳಸಿದ್ದೇಶ್ವರ ಜೋಡಗುಡಿ ಕಾರ್ತಿಕ ಮಾಸದ ಜಾತ್ರೆಯ ಅಂಗವಾಗಿ ಮಾಹಾಲಕ್ಷ್ಮೀ ದೇವಸ್ಥಾನ, ಯಾತ್ರಾ ನಿವಾಸ ಹಾಗೂ ಮಂಗಲ ಕಾರ್ಯಾಲಯದ ಭೂಮಿ ಪೂಜೆ, ಮರುಳಸಿದ್ದೇಶ್ವರ ರಥ ನಿರ್ಮಾಣ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಇಂದು ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಿತು.
ಉಜೈನಿ ಮಹಾಸಂಸ್ಥಾನ ಪೀಠದ ಜಗದ್ಗುರು ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು. ನಂತರ ಭಕ್ತ ಸಮೂಹವನ್ನು ಆಶೀರ್ವದಿಸಿ ಮಾತನಾಡಿದ ಅವರು ಭಾರತ ಭವ್ಯವಾದ ಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರವಾಗಿದೆ. ಭಾರತದ ಪ್ರತಿ ಹಳ್ಳಿಗಳಲ್ಲಿ ದೇವಾಲಯಗಳಿವೆ, ದೇವಾಲಯಗಳು ಇಲ್ಲದ ಹಳ್ಳಿ ಭಾರತದಲ್ಲಿ ಇಲ್ಲ ಅಂದರೂ ತಪ್ಪಾಗಲಾರದು. ವಿದೇಶದಲ್ಲಿ ದೇಹವನ್ನು ಪೂಜೆ ಮಾಡುತ್ತಾರೆ. ಆದರೆ ಭಾರತದಲ್ಲಿ ದೇವರನ್ನು ಪೂಜಿಸುವ ಪುಣ್ಯ ಜನರು ಇದ್ದಾರೆ.
ಉಜೈನಿ ಶ್ರೀಗಳ ಸಾನ್ನಿಧ್ಯದಲ್ಲಿ ಹನ್ನೆರಡು ಜೋಡಿ ನವ ವಧು ವರರು ತಮ್ಮ ನವ ಜೀವನಕ್ಕೆ ಕಾಲಿಟ್ಟರು. ಅವರನ್ನು ಆಶೀರ್ವದಿಸಿ ಅವರು ತಮ್ಮ ನವ ಜೀವನ ಸುಖಕರವಾಗಿರಲಿ ಅವರಿಗೆ ಆ ಮರುಳಸಿದ್ದೇಶ್ವರ ಸಕಲ ಸಂಪತ್ತು ಕೊಟ್ಟು ಕಾಪಾಡಲಿ ಎಂದು ಶುಭ ಹಾರೈಸಿದರು. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಮಾತನಾಡಿ ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ತಗ್ಗಿ, ಪ್ರಗತಿಗೆ ಪೂರಕವಾಗುತ್ತದೆ. ಮದುವೆ ಪ್ರತಿಯೊಬ್ಬರ ಜೀವನದ ಮಹತ್ತರ ಘಟ್ಟ. ಇದಕ್ಕಾಗಿ ಅನಗತ್ಯ ಹಣ ವ್ಯರ್ಥ ಮಾಡುವ ಅಗತ್ಯವಿಲ್ಲ. ಸಾಮೂಹಿಕ ವಿವಾಹದಲ್ಲಿ ಸಂಸಾರ ಜೀವನಕ್ಕೆ ಪಾದಾರೆ್ಣ ಆದರ್ಶ. ಇದು, ಕುಟುಂಬಕ್ಕೆ ಮಾತ್ರವಲ್ಲದೇ ದೇಶದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ. ಮಿತ ಸಂತಾನ, ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ಎಂದು ಹೇಳಿದರು. ತಡವಲಗಾ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಸೋಮನಾಥ ಶಿವಾಚಾರ್ಯರು, ಸಿದ್ದನಕೇರಿ ರಾಚೋಟೇಶ್ವರ ಶಿವಾಚಾರ್ಯರು, ಸಾಸನೂರ ಮಹಾಂತಲಿಂಗ ಶಿವಾಚಾರ್ಯರು, ದೇವರಹಿಪ್ಪರಗಿ ವೀರಗಂಗಾಧರ ಶಿವಾಚಾರ್ಯರು, ಅಹಿರಸಂಗ ಮಲ್ಲಿಕಾರ್ಜುನ ಶಿವಾಚಾರ್ಯರು ಶಿವಾನಂದಯ್ಯ ಶಾಸ್ತ್ರಿಗಳು, ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ, ಹಾಗೂ ತಮ್ಮಣ್ಣ ಪೂಜಾರಿ ಸೇರಿದಂತೆ ಅನೇಕರು ಮಾತನಾಡಿದರು.
ಅಪ್ಪು ಕಲ್ಲೂರ, ಶಿವಯ್ಯ ಮಠಪತಿ, ಇಂಡಿ ತಾಲೂಕು ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಗೀತಾ ಎಸ್ ಗುತ್ತರಗಿಮಠ, ಹಾಗೂ,ಸಿ ಎಮ್ ಕಾಳೆ, ಬಾಬುಸಾಹುಕಾರ ಮೇತ್ರಿ, ಬಸವರಾಜ ಇಂಡಿ, ಚಂದ್ರಶೇಖರ ರೂಗಿ, ಡಾ ರಮೇಶ ಪೂಜಾರಿ, ಮಳಸಿದ್ದಪ್ಪ ಬ್ಯಾಳಿ, ಶಾಂತಯ್ಯ ಹಿರೇಮಠ, ರಾಮಲಿಂಗೇಶ್ವರ ಸ್ವಾಮಿಗಳು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜಾತ್ರೆಗೆ ಬಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಜಾತ್ರೆ ಶಾಂತಿಯುತವಾಗಿ ನಡೆಯಲು ಹೋರ್ತಿ ಪೋಲಿಸ್ ಠಾಣೆ ಪಿಎಸ್‌ಐ ದೀಪಾ ಗೋಡೆಕಾರ ಇವರ ನೇತೃತ್ವದಲ್ಲಿ ಪೋಲಿಸ್ ಬಂದು ಬಸ್ತ ಕೈಗೊಳ್ಳಲಾಗಿತ್ತು.