ಇಂದು ಭಾರತ ಮತ್ತು ವಿಂಡೀಸ್ ನಡುವೆ ಟಿ-20 ಅಂತಾರಾಷ್ಟ್ರೀಯ ಮೊದಲ ಪಂದ್ಯ

ಕೋಲ್ಕತ್ತಾ 03: ನಾಳೆಯಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಟಿ-20 ಅಂತಾರಾಷ್ಟ್ರೀಯ ಮೊದಲ ಪಂದ್ಯ ಆರಂಭವಾಗಲಿದೆ. 

ಕೋಲ್ಕತ್ತಾದಲ್ಲಿ ನಡೆಯಲಿರುವ ಚುಟುಕು ಕ್ರಿಕೆಟ್ನ ಮೊದಲ ಹಣಾಹಣಿ ತೀವ್ರ ಕುತೂಹಲ ಕೆರಳಿಸಿದೆ. 

ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಸೋತು ಸುಣ್ಣವಾಗಿರುವ ವಿಂಡೀಸ್ ದೈತ್ಯರು ಟಿ-20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನದೊಂದಿಗೆ ಅತಿಥೇಯರಿಗೆ ತಿರುಗೇಟು ನೀಡುವ ತವಕದಲ್ಲಿದ್ದಾರೆ. 

ಎರಡು ಬಾರಿ ಭಾರತಕ್ಕೆ ವಿಶ್ವಕಪ್ನ ವಿಜೇತ ತಂಡದ ನೇತೃತ್ವ ವಹಿಸಿದ್ದ ಮಹೇಂದ್ರ ಸಿಂಗ್ ಧೋನಿ ಇದೇ ಮೊದಲ ಸಲ ಟಿ-20 ಪಂದ್ಯದಿಂದ ಹೊರಗುಳಿದಿರುವುದು ಕ್ರಿಕೆಟ್ ಪ್ರೇಮಿಗಳಲ್ಲಿ ನಿರಾಸೆ ಮೂಡಿಸಿದೆ. 

ಜೊತೆಗೆ ಚುಟುಕು ಕ್ರಿಕೆಟ್ ಪಂದ್ಯದಿಂದ ನಾಯಕ ವಿರಾಟ್ ಕೊಹ್ಲಿ ಸಹ ವಿಶ್ರಾಂತಿ ಪಡೆದಿದ್ದಾರೆ. 

ಪ್ರವಾಸಿ ತಂಡ ಟೆಸ್ಟ್ನಲ್ಲಿ 0-2 ಪಂದ್ಯಗಳಿಂದ ಭಾರತಕ್ಕೆ ಶರಣಾಗಿತ್ತು. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾ ಏಕದಿನ ಪಂದ್ಯಾವಳಿಯಲ್ಲಿ 3-1ರಿಂದ ವಿಂಡೀಸ್ ದೈತ್ಯರನ್ನು ಮಣಿಸಿದ್ದರು. 

ಈ ಸೋಲುಗಳಿಂದ ಕಂಗೆಟ್ಟಿರುವ ವೆಸ್ಟ್ ಇಂಡೀಸ್ ಟಿ-20ಯ ಮೂರು  ಪಂದ್ಯಗಳಲ್ಲಿ ಜಯ ಸಾಧಿಸಿ ಮಾನ  ಉಳಿಸಿಕೊಳ್ಳುವ ತವಕದಲ್ಲಿದೆ. ನಾಯಕ ಜಾನ್ಸನ್ ಹೋಲ್ಡರ್ ವಿಶ್ರಾಂತಿ ಪಡೆದಿದ್ದು, ಕಾರ್ಲೋಸ್ ಬ್ರಾತ್ ವೈಟ್ ನಾಯಕತ್ವ ವಹಿಸಿಕೊಂಡಿದ್ದಾರೆ. 

ಒಟ್ಟಾರೆ ನಾಳೆಯ ಟಿ-20 ಹೈವೋಲ್ಟೇಜ್ ಕದನ ಕುತೂಹಲ ಕೆರಳಿಸಿದೆ.