ಸ್ವರಸೇನ್ ಪಂ. ಸಂಗಮೇಶ್ವರ ಗುರವ ಸಂಗೀತ ಪ್ರತಿಷ್ಠಾನ್(ರಿ), ಧಾರವಾಡ ಪ್ರತಿಷ್ಠಾನದ ಉದ್ಘಾಟನೆ ಹಾಗೂ ಸಂಗೀತೋತ್ಸವ ಸಮಾರಂಭ

ಸ್ವರಸೇನ್ ಪಂ. ಸಂಗಮೇಶ್ವರ ಗುರವ ಸಂಗೀತ ಪ್ರತಿಷ್ಠಾನ್(ರಿ), ಧಾರವಾಡ ಪ್ರತಿಷ್ಠಾನದ ಉದ್ಘಾಟನೆ ಹಾಗೂ ಸಂಗೀತೋತ್ಸವ ಸಮಾರಂಭ Swarasen Pt. Sangameshwara Guruva Sangeet Pratishthan(R), Dharwad Foundation inauguration and music

ಧಾರವಾಡ 22 : ಕಿರಾನಾ ಘರಾಣೆಯ ಹಿಂದೂಸ್ಥಾನಿ ಸಂಗೀತದ ಮೇರು ಗಾಯಕರಾಗಿದ್ದ ಸ್ವರಸೇನ್ ಪಂ. ಸಂಗಮೇಶ್ವರ ಗುರವ ಅವರು ಹಿಂದೂಸ್ಥಾನಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದುದು.  ತಂದೆ ವಿದ್ವಾನ್ ಗಣಪತರಾವ್ ಗುರವ ಅವರು ಜಮಖಂಡಿ ಆಸ್ಥಾನದ ಗಾಯಕರಾಗಿದ್ದರು. ಸಂಗೀತ ಮನೆತನದಲ್ಲಿ 07.12.1932ರಲ್ಲಿ ಜಮಖಂಡಿಯಲ್ಲಿ ಜನಿಸಿದ ಇವರು, ಉಸ್ತಾದ್ ಅಬ್ದುಲ್ ಖರೀಮಖಾನ್ ಅವರ ಬಳಿ ಸಂಗೀತಾಭ್ಯಾಸ ಪೂರೈಸಿದರು. ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.  ಅಪಾರ ಸಂಖ್ಯೆಯ ಇವರ ಶಿಷ್ಯರು ರಾಜ್ಯ ಹೊರ ರಾಜ್ಯದಲ್ಲಿ ಸಂಗೀತ ಸುಧೆಯನ್ನು ಪಸರಿಸಿದ ಕೀರ್ತಿ ಪಂ. ಸಂಗಮೇಶ್ವರ ಗುರವ ಅವರಿಗೆ ಸಲ್ಲುತ್ತದೆ.   

ಇವರಿಗೆ 1983ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ,  1997ರಲ್ಲಿ ಕರ್ನಾಟಕ ಸಂಗೀತ ವಿದ್ವಾನ್, 2001ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2003ರಲ್ಲಿ ಪುಣೆಯ ಮಾಣಿಕ ವರ್ಮಾ ಪ್ರಶಸ್ತಿ, 2004ರಲ್ಲಿ ಪಂ.ಪುಟ್ಟರಾಜ್ ಸಮ್ಮಾನ, 2005ರಲ್ಲಿ ಕರ್ನಾಟಕ ರಾಜ್ಯೊತ್ಸವ ಪ್ರಶಸ್ತಿಯನ್ನೊಳಗೊಂಡು ಅನೇಕ ಸಂಘ-ಸಂಸ್ಥೆಗಳ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.   

         ಅವರ ಶಿಷ್ಯರಲ್ಲಿ ಸಗುನಾ ಚಂದಾವರಕರ, ಪಂ. ಅಶೋಕ ಹುಗ್ಗಣ್ಣವರ, ಪಂ.ರಾಜಪ್ರಭು ದೋತ್ರೆ, ಡಾ.ಮೃತ್ಯುಂಜಯ ಶೆಟ್ಟರ, ಪಂ.ಕೈವಲ್ಯಕುಮಾರ ಗುರವ, ಪಂ. ವಿಜಯಕುಮಾರ ತೇಲಿ, ವಿದುಷಿ ಲತಾ ಜಯಗೀರದಾರ, ಲೀಲಾ ಮುರಿಗೆಪ್ಪ, ವಿದುಷಿ ಸುಜಾತಾ ಗುರವ ಕಮ್ಮಾರ, ವಿದುಷಿ ಗೀತಾ ಹೆಬ್ಳೀಕರ ಮುಂತಾದವರು ಪ್ರಮುಖರಾಗಿದ್ದಾರೆ.  ಇವರ ಸ್ಮರಣೆಯನ್ನು ಸದಾ ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಸ್ವರಸೇನ್ ಪಂ. ಸಂಗಮೇಶ್ವರ ಗುರವ ಸಂಗೀತ ಪ್ರತಿಷ್ಠಾನವನ್ನು ಸ್ಥಾಪಿಸಿ, ಉದ್ಘಾಟನೆಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.    ದಿನಾಂಕ: 24.01.2026 ರಂದು ಸಂಜೆ 5.00 ಗಂಟೆಗೆ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಪ್ರತಿಷ್ಠಾನದ ಉದ್ಘಾಟನೆ ಮತ್ತು ಸಂಗೀತೋತ್ಸವ ಜರುಗಲಿದೆ.   

        ನಾಡಿನ ಶ್ರೇಷ್ಠ ಗಾಯಕರಾದ ಪದ್ಮಶ್ರೀ ಪಂ. ಎಮ್‌. ವೆಂಕಟೇಶಕುಮಾರ ಅವರು ಪ್ರತಿಷ್ಠಾನವನ್ನು ಉದ್ಘಾಟಿಸಲಿದ್ದಾರೆ. ಮುರುಘಾಮಠದ ಪೂಜ್ಯ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸಾನಿಧ್ಯವನ್ನು ವಹಿಸಲಿದ್ದಾರೆ.  ಮುಖ್ಯ ಅತಿಥಿಗಳಾಗಿ ಸ್ವರ್ಣ ಗ್ರುಪ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿ.ಎಸ್‌.ವಿ. ಪ್ರಸಾದ ಅವರು ಆಗಮಿಸುವರು.  ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಶಿಧರ ತೋಡಕರ ವಹಿಸುವರು. ಪುಣೆಯ ಖ್ಯಾತ ಸಿತಾರವಾದಕ ಉಸ್ತಾದ್ ಶಾಕೀರಖಾನ್, ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶಶಿಧರ ಸಾಲಿ, ಉಪಾಧ್ಯಕ್ಷರಾದ ಪಿ.ಎಚ್‌.ನೀರಲಕೇರಿ, ಪಂ.ಕೈವಲ್ಯಕುಮಾರ ಗುರವ, ಕಾರ್ಯದರ್ಶಿ ಪ್ರಕಾಶ ಬಾಳಿಕಾಯಿ ಉಪಸ್ಥಿತರಿರುವರು ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಶಿಧರ ತೋಡಕರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.     

         ನಂತರ ಪದ್ಮಶ್ರೀ ಪುರಸ್ಕೃತ ಪಂ. ಎಮ್‌.ವೆಂಕಟೇಶಕುಮಾರ ಅವರು ಗಾಯನ ಹಾಗೂ ಪುಣೆಯ ಖ್ಯಾತ ಸಿತಾರವಾದಕ ಉಸ್ತಾದ್ ಶಾಕೀರಖಾನ್ ಅವರು ಸಿತಾರ ವಾದನ ಪ್ರಸ್ತುತ ಪಡಿಸಲಿದ್ದಾರೆ. ವಾದ್ಯ ಸಹಕಾರದಲ್ಲಿ ತಬಲಾದಲ್ಲಿ ಶ್ರೀಧರ ಮಾಂಡ್ರೆ, ಡಾ.ಉದಯ ಕುಲಕರ್ಣಿ ಹಾಗೂ ಹಾರ್ಮೊನಿಯಂದಲ್ಲಿ ಸತೀಶ ಭಟ್ಟ, ಹೆಗ್ಗಾರ ಸಾತ ಸಂಗತ ನೀಡಲಿದ್ದಾರೆ.   ಪತ್ರಿಕಾ ಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಪಿ.ಎಚ್‌.ನೀರಲಕೇರಿ, ಪಂ.ಕೈವಲ್ಯಕುಮಾರ ಗುರವ, ಕಾರ್ಯದರ್ಶಿ ಪ್ರಕಾಶ ಬಾಳಿಕಾಯಿ ವಿದುಷಿ ಸುಜಾತಾ ಕಮ್ಮಾರ ಗುರವ ಉಪಸ್ಥಿತರಿದ್ದರು.