ತಿರುವನಂತಪುರಂ, ನ 27 -ಆರ್ ಎಸ್ ಎಸ್ ಮುಖಂಡ ಮತ್ತು ಪ್ರಜ್ಞಾ ಪ್ರವಾಹ ರಾಷ್ಟ್ರೀಯ ಸಂಯೋಜಕ ಜೆ ನಂದಕುಮಾರ್ ವಿರಚಿತ “ಹಿಂದುತ್ವ ಫಾರ್ ಚೇಂಜಿಂಗ್ ಟೈಮ್” ಪುಸ್ತಕವನ್ನು ಡಿಸೆಂಬರ್ 1ರಂದು ಕೊಚ್ಚಿ ಅಂತಾರಾಷ್ಟ್ರೀಯ ಪುಸ್ತಕೋತ್ಸವದಲ್ಲಿ ಪ್ರಸಾರ ಭಾರತಿ ಅಧ್ಯಕ್ಷ ಎ.ಸೂರ್ಯಪ್ರಕಾಶ್ ಬಿಡುಗಡೆಗೊಳಿಸಲಿದ್ದಾರೆ.
ಈ ಕುರಿತು ಬುಧವಾರ ಟ್ವೀಟ್ ಮಾಡಿರುವ ಸೂರ್ಯಪ್ರಕಾಶ್ , “ಪುಸ್ತಕ ಬಿಡುಗಡೆಯ ಭಾಗವಾಗುವುದಕ್ಕೆ ಸಂತಸವಾಗುತ್ತಿದೆ. ರಂಗಹರಿಜೀ, ನಂದಕುಮಾರ್ ಅವರನ್ನು ಭೇಟಿಯಾಗಲು ಉತ್ಸುಕನಾಗಿದ್ದೇನೆ. ಈ ವಿಷಯದ ಸಾಹಿತ್ಯಕ್ಕೆ “ಹಿಂದುತ್ವ” ಹೆಚ್ಚುವರಿ ಮೌಲ್ಯವಾಗಲಿದೆ’ ಎಂದಿದ್ದಾರೆ.
ತಮ್ಮ ಪುಸ್ತಕದಲ್ಲಿ ನಂದಕುಮಾರ್, ಹಿಂದುತ್ವದ ವಿವಿಧ ಸೈದ್ಧಾಂತಿಕ ವಾದಗಳ ಯಶಸ್ಸು ಮತ್ತು ವೈಫಲ್ಯಗಳನ್ನು ವಿಶ್ಲೇಷಿಸಿದ್ದಾರೆ. ಬದಲಾಗುತ್ತಿರುವ ಕಾಲದಲ್ಲಿ ಹಿಂದುತ್ವ ಹೇಗೆ ಪ್ರಸ್ತುತವಾಗುತ್ತದೆ ಎಂಬುದನ್ನು ವಿವರಿಸುವುದರ ಜೊತೆಗೆ, ಹಿಂದೂ ಸಿದ್ಧಾಂತ ಅಪ್ರಸ್ತುತವಾಗಿದೆ ಎಂದು ಆರೋಪಿಸುವ ಎಡಪಂಥೀಯರಿಗೂ ಉತ್ತರ ನೀಡಿದ್ದಾರೆ.
ಯುಎನ್ಐ ಸುದ್ದಿಸಂಸ್ಥೆಯೊಂದಿಗೆ ಪುಸ್ತಕದ ಕುರಿತು ಮಾತನಾಡಿರುವ ನಂದಕುಮಾರ್, “ಹಿಂದೂ ಸಿದ್ಧಾಂತದ ಕುರಿತು ಅಪಪ್ರಚಾರ ಮಾಡಿ ಸಾಂತ್ವನ ಹುಡುಕುವುದು ಜಾಗತಿಕವಾಗಿ, ರಾಷ್ಟ್ರೀಯವಾಗಿ ಮತ್ತು ವಿಶೇಷವಾಗಿ ಕೇರಳದಲ್ಲಿ ಅಪ್ರಸ್ತುತವಾಗಿರುವ ಎಡಪಂಥೀಯರ ಏಕೈಕ ಚಟುವಟಿಕೆಯಾಗಿದೆ” ಎಂದರು.
ಇಂಡಸ್ ಸ್ಕ್ರಾಲ್ಸ್ ಪ್ರೆಸ್ ಪ್ರಕಟಿಸಿರುವ ಪುಸ್ತಕದ ಮೊದಲ ಪ್ರತಿಯನ್ನು ಆರ್. ಹರಿ ಸ್ವೀಕರಿಸಲಿದ್ದಾರೆ.