ಸಮರ್ಕ ಅಕ್ಕಿ ವಿತರಣೆಗೆ ಸುನಂದಾ ಯಂಪೂರೆ ತಾಕೀತು
ಸಿಂದಗಿ 06: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಈ ಹಿಂದೆ ನಡೆದ ಎರಡು ಸಭೆಗಳಲ್ಲಿಯೂ, ಗ್ರಾಮಗಳಲ್ಲಿ ನ್ಯಾಯಬೆಲೆ ಅಂಗಡಿಗಳಿಂದ ಸಮರ್ಕವಾಗಿ ಅಕ್ಕಿ ವಿತರಿಸುವಂತೆ ಹಾಗೂ ಸೂಚನಾ ಫಲಕ ಅಳವಡಿಸುವಂತೆ ಸೂಚನೆ ನೀಡಲಾಗಿದ್ದರೂ, ಯಾವುದೇ ಬದಲಾವಣೆ ಆಗಿಲ್ಲ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯೆ ಸುನಂದಾ ಯಂಪೂರೆ ದೂರಿದರು.
ತಿಂಗಳ ಪೂರ್ತಿ ಅಕ್ಕಿ ವಿತರಣೆ ಮಾಡಬೇಕೆಂಬ ಸರ್ಕಾರದ ನಿಯಮಾವಳಿಯನ್ನು ಗಾಳಿಗೆ ತೂರಲಾಗಿದೆ. ಈ ಕುರಿತು ಆಹಾರ ಇಲಾಖೆಗೆ ಪ್ರಶ್ನಿಸಿದರೆ ಉಡಾಫೆ ಉತ್ತರ ಕೇಳಿ ಬರುತ್ತಿದೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರಗತಿ ಪರೀಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ವಕೀಲ ಎಸ್.ಬಿ. ಖಾನಾಪೂರ ಮಾತನಾಡಿ, ಆಹಾರ ಇಲಾಖೆಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ನ್ಯಾಯಬೆಲೆ ಅಂಗಡಿಕಾ ರರಿಗೆ ಈ ತಿಂಗಳು 15ರ ಒಳಗಾಗಿ ಸಭೆ ಕರೆದು ಎಚ್ಚರಿಕೆ ನೀಡಬೇಕು ಎಂದು ಆಹಾರ ಇಲಾಖೆ ಅಧಿಕಾರಿ ಬಿ.ಎಂ. ಬೋವಿ ಅವರಿಗೆ ಆಗ್ರಹಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಂಭುಲಿಂಗ ಹಿರೇಮಠ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯ ಬಾಕಿ ಉಳಿದಿದ್ದ 272 ಪ್ರಕರಣಗಳು ಇತ್ಯರ್ಥಗೊಂಡಿವೆ. ಈಗ ಕೇವಲ ಒಂಬತ್ತು ಪ್ರಕರಣ ಇವೆ. ಈ ವಾರದಲ್ಲಿ ಇತ್ಯರ್ಥಗೊಳಿಸಲಾಗುವುದು ಎಂದರು.
ಗೃಹಲಕ್ಷ್ಮೀ ಯೋಜನೆ ಹಣದಿಂದ ಮಹಿಳೆಯರು ಹೂವಿನ ವ್ಯಾಪಾರ, ಚಹಾದ ಅಂಗಡಿ, ಕಿರಾಣಿ ಅಂಗಡಿ, ಹೈನುಗಾರಿಕೆ ಅಂತಹ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಈ ಯೋಜನೆ ಶೇ.99.98 ರಷ್ಟು ಸಾಧನೆ ಮಾಡಿದೆ ಎಂದು ಅವರು ವಿವರಿಸಿದರು.
ಗೃಹಜ್ಯೋತಿ ಯೋಜನೆಯಲ್ಲಿ 22,883 ಫಲಾನುಭವಿಗಳಿದ್ದು, ಈ ತಿಂಗಳು 51 ಹೊಸ ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೆಸ್ಕಾಂ ಎಇಇ ಚಂದ್ರಕಾಂತ ನಾಯಕ ತಿಳಿಸಿದರು.
ಸಾರಿಗೆ ಘಟಕ ವ್ಯವಸ್ಥಾಪಕ ರೇವಣಸಿದ್ದ ಖೈನೂರ ಮಾತನಾಡಿ, ಶಕ್ತಿ ಯೋಜನೆಯಡಿ 37,66,211 ಮಹಿಳಾ ಪ್ರಯಾಣಿಕರು ಶೂನ್ಯ ಟೆಕೆಟ್ ದರದಲ್ಲಿ ಪ್ರಯಾಣ ಮಾಡಿದ್ದಾರೆ. ಈ ಯೋಜನೆ ಜಾರಿಯಾದ ನಂತರ ತಾಲ್ಲೂಕಿನ ಒಂಬತ್ತು ಹಳ್ಳಿಗಳಿಗೆ ಬಸ್ ಸಂಚಾರ ಪ್ರಾರಂಭವಾಗಿದೆ ಎಂದು ವಿವರಿಸಿದರು.
ಸಮಿತಿ ಅಧ್ಯಕ್ಷ ಶ್ರೀಶೈಲ ಕವಲಗಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಇಒ ರಾಮು ಅಗ್ನಿ, ಸಮಿತಿ ಸದಸ್ಯರಾದ ಶಿವಾನಂದ ಹಡಪದ, ಮೊಹಸೀನ್ ಬೀಳಗಿ, ರುದ್ರಗೌಡ ಪಾಟೀಲ, ರವೀಂದ್ರ ನಾಟೀಕಾರ, ಪರುಶರಾಮ ಗೌಂಡಿ, ಮಹಮ್ಮದರಜತ ತಾಂಬೆ, ಸಿದ್ಧಲಿಂಗಪ್ಪ ಗುಂಡಾಪೂರ, ಸಿದ್ರಾಮಪ್ಪ ಕಲ್ಲೂರ, ಶರಣಗೌಡ ಬಿರಾದಾರ ಇದ್ದರು.