ಮಾ.13 ರಿಂದ ಸುಕ್ಷೇತ್ರ ಉಪ್ಪಿನಬೆಟಗೇರಿ ಲವಣಗಿರಿ ಉತ್ಸವ ಆರಂಭ

ಮಾ.13 ರಿಂದ ಸುಕ್ಷೇತ್ರ ಉಪ್ಪಿನಬೆಟಗೇರಿ ಲವಣಗಿರಿ ಉತ್ಸವ ಆರಂಭ Sukshetra Uppinabetageri Lavanagari Festival begins from March 13

ಧಾರವಾಡ 11 : ಸುಕ್ಷೇತ್ರ ಉಪ್ಪಿನಬೆಟಗೇರಿ ಶ್ರೀ ಜಗದ್ಗುರು ಮೂರುಸಾವಿರ ವಿರಕ್ತಮಠದ ಗುರು ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವದ ಲವಣಗಿರಿ ಉತ್ಸವು ಮಾ.13 ರಿಂದ ಆರಂಭಗೊಳ್ಳಲಿದ್ದು, ಮಾ.23 ಕ್ಕೆ ರಥೋತ್ಸವದ ಮೂಲಕ ಸಂಪನ್ನಗೊಳ್ಳಲಿದೆ ಎಂದು ಶ್ರೀಮಠದ ಪೀಠಾಧಿಪತಿ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು. ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಶ್ರೀಮಠದ ಶಿವಾನುಭವ ಮಂಟಪದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಮಾ.13 ರಿಂದ ಶರಣರ ದರ್ಶನ ಪ್ರವಚನಕ್ಕೆ ಚಾಲನೆ ದೊರೆಯಲಿದ್ದು, 9 ದಿನವೂ ಸಂಜೆ 6:30 ಗಂಟೆಗೆ ನಂದಿಕೇಶ್ವರದ ವೀರೇಶ್ವರ ಶಾಸ್ತ್ರೀಗಳು ಬಸವಾದಿ ಶರಣರ ಜೀವನ ದರ್ಶನ ಕುರಿತು ಪ್ರವಚನ ನೀಡಲಿದ್ದಾರೆ. ಮಾ.14 ರಂದು ಮುನವಳ್ಳಿ ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಡಾ.ವಿ.ಶ್ರೀಶಾನಂದ ಅವರಿಗೆ ಲವಣಗಿರಿ ಪ್ರಶಸ್ತಿ ಪ್ರದಾನ ನೆರವೇರಲಿದೆ. ಮಾ.21ಕ್ಕೆ ನಡೆಯುವ ಪ್ರವಚನ ಮಹಾಮಂಗಲ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಗಣ್ಯರು ಆಗಮಿಸಲಿದ್ದಾರೆ.  

ಮಾ.22 ರಂದು ಬೆಳಿಗ್ಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದ್ದು, ಅಂದು ಸಂಜೆ ನಡೆಯುವ ಧರ್ಮಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೇರಿದಂತೆ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.ಮಾ.23 ರಂದು ಬೆಳಿಗ್ಗೆ 7:00 ಗಂಟೆಗೆ ಅಯ್ಯಾಚಾರ ಹಾಗೂ ಶಿವದೀಕ್ಷೆ ಜರುಗಲಿದೆ. ಇದಾದ ಬಳಿಕ ಬೆಳಿಗ್ಗೆ 10:00 ಗಂಟೆಗೆ ಅಂಕಲಗಿಯ ಡಾ.ಅಮರಸಿದ್ದೇಶ್ವರ ಸ್ವಾಮೀಜಿ, ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯದಲ್ಲಿಸಹಸ್ರ ಸುಮಂಗಲೆಯರಿಂದ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ.

ಈ ಕಾರ್ಯಕ್ರಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ, ಮೇಯರ್ ಜ್ಯೋತಿ ಪಾಟೀಲ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.ಜಂಗಮೋತ್ಸವ-ರಥೋತ್ಸವ : ಮಾ.23 ರಂದು ಮಧ್ಯಾಹ್ನ 3:30 ಗಂಟೆಗೆ ವಿಜಯಪುರ ಮಮದಾಪುರದ ಮುರುಘೇಂದ್ರ ಶಿವಯೋಗಿಗಳ ವಿರಕ್ತಮಠದ ಅಭಿನವ ಮುರುಘೇಂದ್ರ ಸ್ವಾಮೀಜಿ ಅವರ ಜಂಗೋತ್ಸವ ನಡೆಯಲಿದೆ. ಶ್ರೀಗಳ ಹೊತ್ತ ಅಡ್ಡಪಲ್ಲಕ್ಕಿ ಮಹೋತ್ಸವು ಊರಿನ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೈಭವದೊಂದಿಗೆ ಜರುಗಲಿದೆ. ಇದಾದ ಬಳಿಕ ಸಂಜೆ ಹೊತ್ತಿಗೆ ಹರ-ಗುರು-ಚರ ಮೂರ್ತಿಗಳ ಸಾನಿಧ್ಯದಲ್ಲಿ ಶ್ರೀ ಜಗದ್ಗುರು ವಿರೂಪಾಕ್ಷೇಶವರ ರಥೋತ್ಸವವು ಅದ್ದೂರಿಯಾಗಿ ನೆರವೇರಲಿದೆ ಎಂದರು.

ಮಾ.23 ರಂದು ರಾತ್ರಿ 10:00 ಗಂಟೆಗೆ ಬಯಲು ರಂಗಮಂದಿರದಲ್ಲಿ ಶ್ರೀ ಗುರು ವಿರೂಪಾಕ್ಷೇಶ್ವರ ನಾಟ್ಯ ಸಂಘದಿಂದ ಮಾತು ಬಿದ್ದಿತು, ಮೌನ ಗೆದ್ದಿತು ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಮಾ.24 ರಿಂದ ಮಾ.26 ರವರೆಗೆ ಮಾಜಿ ಪೈಲವಾನರ ಸಂಘದಿಂದ ಬಯಲು ಕುಸ್ತಿಗಳು ನಡೆಯಲಿವೆ. ಮಾ.27 ರಂದು ಸಂಜೆ 7:00 ಗಂಟೆಗೆ ಲಿಂಗೈಕ್ಯ ಬಸವಲಿಂಗ ಸ್ವಾಮೀಜಿ ಅವರ 34ನೇ ಪುಣ್ಯ ಸ್ಮರಣೋತ್ಸವ ಜರುಗಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಕೆ.ಎನ್‌.ಬುದ್ನಿ, ಮಲ್ಲಣ್ಣ ಅಷ್ಟಗಿ, ಸುರೇಶಬಾಬು ತಳವಾರ, ಮಂಜುನಾಥ ಮಸೂತಿ, ಹಿರಿಯ ನ್ಯಾಯವಾದಿ ಎ.ಸಿ.ಚಾಕಲಬ್ಬಿ, ಬಸವರಾಜ ತಳವಾರ, ಕಲ್ಲನಗೌಡ ಪಾಟೀಲ, ಆತ್ಮಾನಂದ ಮಡಿವಾಳರ ಇದ್ದರು. 

ನ್ಯಾ.ಡಾ.ವಿ.ಶ್ರೀಶಾನಂದರಿಗೆ ಲವಣಗಿರಿ ಪ್ರಶಸ್ತಿ ಧಾರವಾಡ : ಸುಕ್ಷೇತ್ರ ಉಪ್ಪಿನಬೆಟಗೇರಿ ಜಗದ್ಗುರು ಮೂರುಸಾವಿರ ವಿರಕ್ತಮಠದ ಗುರು ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವದ ಲವಣಗಿರಿ ಉತ್ಸವದಲ್ಲಿ ಕೊಡ ಮಾಡುವ ಪ್ರಸಕ್ತ 2026ನೇ ಸಾಲಿನ ಲವಣಗಿರಿ ಪ್ರಶಸ್ತಿಗೆ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಡಾ.ವಿ.ಶ್ರೀಶಾನಂದ ಭಾಜನರಾಗಿದ್ದಾರೆ. ಶ್ರೀಮಠದ ಶಿವಾನುಭವ ಮಂಟಪದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕುಮಾರ ವಿರೂಪಾಕ್ಷ ಸ್ವಾಮೀಜಿ, ಯುಗಾದಿ ಹಬ್ಬದ ಬಳಿಕ ಪ್ರತಿ ವರ್ಷ ಲವಣಗಿರಿ ಉತ್ಸವ ಅದ್ದೂರಿಯಾಗಿ ಆಚರಿಸಿಕೊಂಡು ಬಂದಿದ್ದು,

ಈ ಸಲದ ಲವಣಗಿರಿ ಪ್ರಶಸ್ತಿಗೆ ಹೈಕೋರ್ಟ್‌ ನ್ಯಾಯಮೂರ್ತಿ ಡಾ.ವಿ.ಶ್ರೀಶಾನಂದ ಅವರನ್ನು ಆಯ್ಕೆ ಮಾಡಿದ್ದೇವೆ ಎಂದರು.ಮಾ.13 ರಿಂದ ಮಾ.23 ರವರೆಗೆ ಲವಣಗಿರಿ ಉತ್ಸವ ನಡೆಯಲಿದ್ದು, ಈ ಮಧ್ಯೆ ಮಾ.14 ರಂದು ಲವಣಗಿರಿ ಪ್ರಶಸ್ತಿ ಪ್ರದಾನ ನೆರವೇರಲಿದೆ. ಮುನವಳ್ಳಿ ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ ಸಾನಿಧ್ಯದ ಕಾರ್ಯಕ್ರಮವನ್ನು ಮುಂಡರಗಿಯ ಘಟಪ್ರಭಾ ಕೆಂಪಯ್ಯಸ್ವಾಮಿಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಹಿರಿಯ ನ್ಯಾಯವಾದಿ ಎ.ಸಿ.ಚಾಕಲಬ್ಬಿ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ನ್ಯಾಯವಾದಿಗಳಾದ ಪಿ.ಎಚ್‌.ನೀರಲಕೇರಿ, ರವಿ ಯಲಿಗಾರ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. 

ಸದ್ಬಕ್ತರೇ ಮಠಕ್ಕೆ ಆಸ್ತಿಸಮಾಜದಲ್ಲಿ ಆಧ್ಯಾತ್ಮಿಕತೆ, ಮೌಲ್ಯ, ಸಾಮರಸ್ಯ, ಶಾಂತಿ-ಸೌಹಾರ್ದತೆ ಸಾರುವ ಶ್ರೀಮಠಕ್ಕೆ ಜಮೀನಲ್ಲ ಆಸ್ತಿ. ನಿಜವಾದ ಆಸ್ತಿಯೆಂದರೆ ಅದು ಸದ್ಬಕ್ತರೇ. ಹೀಗಾಗಿ ಭಕ್ತರಿಲ್ಲದೇ ಮಠವಿಲ್ಲ. ಮಠವಿಲ್ಲದೇ ಭಕ್ತರಿಲ್ಲ. ಮಠಕ್ಕೆ ಭಕ್ತರೇ ನಿಜವಾದ ಆಸ್ತಿಯಾಗಿದ್ದು, ಈ ಪರಂಪರೆ ಮುನ್ನಡೆಸಿಕೊಂಡು ಲವಣಗಿರಿ ಉತ್ಸವ ಅದ್ದೂರಿಯಾಗಿ ಆಚರಿಸೋಣ ಎಂದು ಹಿರಿಯ ನ್ಯಾಯವಾದಿ ಎ.ಸಿ.ಚಾಕಲಬ್ಬಿ ಹಾಗೂ ಮಲ್ಲಣ್ಣ ಅಷ್ಟಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಂಚಾರಿ ಬಸವ ಪುರಾಣಬಸವ ಪುರಾಣಕ್ಕೆ ಹೆಸರುವಾಸಿ ಆಗಿರುವ ನಮ್ಮೂರಿನ ಕುಮಾರ ವಿರೂಪಾಕ್ಷ ಸ್ವಾಮೀಜಿ ಅವರಿಂದ 2027 ರಲ್ಲಿ ಸಂಚಾರಿ ಬಸವ ಪುರಾಣ ಆಯೋಜಿಸಲು ಉದ್ದೇಶಿಸಲಾಗಿದೆ.

ಈ ಬಸವ ಪುರಾಣವು ವಿವಿಧ ಗ್ರಾಮಗಳಲ್ಲಿ ಸಂಚರಿಸಿ, ಅಲ್ಲಿ ಬಸವ ಪುರಾಣ ಪ್ರವಚನವು ಶ್ರೀಗಳಿಂದ ನಡೆಯಲಿದೆ. ಇದರ ರೂಪರೇಷೆ ಸಿದ್ದಗೊಳ್ಳುತ್ತಲಿದೆ.-ಸುರೇಶಬಾಬು ತಳವಾರ, ಶ್ರೀಮಠದ ಹಿರಿಯರುಪ್ರತಿ ವರ್ಷಕ್ಕಿಂತ ಈ ಸಲ ಅದ್ದೂರಿಯಾಗಿಯೇ ಲವಣಗಿರಿ ಉತ್ಸವ ಆಚರಿಸಲು ಸಿದ್ದತೆ ಮಾಡಿಕೊಂಡಿದ್ದು, ಈ ಸಲವಂತೂ ಯುವಸಮೂಹ ಜಾತ್ರೆಗೆ ಕೈಜೋಡಿಸಿದೆ. ಹೀಗಾಗಿ ಎಲ್ಲ ಗುರು-ಹಿರಿಯರು ಕೂಡಿಕೊಂಡು ಅದ್ದೂರಿಯಾಗಿ ಅಜ್ಜನ ಜಾತ್ರೆ ಆಚರಿಸೋಣ.-ಮಂಜುನಾಥ ಮಸೂತಿ, ಮಾಜಿ ಅಧ್ಯಕ್ಷರು, ಗ್ರಾ.ಪಂ. ಉಪ್ಪಿನಬೆಟಗೇರಿ.