ಲೋಕದರ್ಶನ ವರದಿ
ರಾಯಬಾಗ 22: ಗಣರಾಜ್ಯೋತ್ಸವ ಮತ್ತು ಸ್ವಾತಂತ್ರೋತ್ಸವ ದಿನಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ರಾಷ್ಟ್ರಧ್ವಜ ವಿತರಣೆ ಮಾಡುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಬುಧವಾರ ತಹಶೀಲ್ದಾರ ಚಂದ್ರಕಾಂತ ಭಜಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ರಾಷ್ಟ್ರಧ್ವಜವನ್ನು ಅತ್ಯಂತ ಗೌರವದಿಂದ ಹಾರಿಸಲಾಗುತ್ತಿದೆ. ಆದರೆ ಪ್ಲಾಸ್ಟಿಕನಿಂದ ತಯಾರಿಸಿದ ರಾಷ್ಟ್ರಧ್ವಜ ಸಂಜೆಯಾಗುತ್ತಿದ್ದಂತೆ ರಸ್ತೆ ಮೇಲೆ, ಕಸದ ಬುಟ್ಟಿಯಲ್ಲಿ, ಚರಂಡಿಯಲ್ಲಿ ಬಿದ್ದಿರುವುದನ್ನು ಕಾಣುತ್ತೇವೆ. ಇದರಿಂದ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದಂತಾಗುತ್ತದೆ. ಪ್ಲಾಸ್ಟಿಕ್ ರಾಷ್ಟ್ರಧ್ವಜ ನಾಶವಾಗದೇ ಇರುವುದರಿಂದ ಮತ್ತು ಸರಕಾರ ಪ್ಲಾಸ್ಟಿಕ್ ನಿಷೇಧ ಮಾಡಿದ್ದರಿಂದ ಪ್ಲಾಸ್ಟಿಕ್ ರಾಷ್ಟ್ರಧ್ವಜದ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ. ಸರಕಾರದ ಆದೇಶವನ್ನು ಉಲ್ಲಂಘಿಸಿ ಪ್ಲಾಸ್ಟಿಕ್ ರಾಷ್ಟ್ರಧ್ವಜದ ವಿತರಣೆ, ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕಾರ್ಯಾಚರಣೆ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.
ರಾಖಿ ಬೆಳಗಾಂವಕರ, ಲಕ್ಷ್ಮೀ ಕುಲಕರ್ಣಿ, ರೋಹಿಣಿ ಬೆನಾರೆ, ಸುಜಾತಾ ಕಾಂಬಳೆ, ಶಿವಾನಂದ ಬಂತೆ, ಸಂಜು ಶಿವಬುಗಡೆ, ಸಿದ್ದು ದೇಸಾಯಿ, ಪ್ರವೀಣಡಂಗೆರ, ಸಾವಂತ ನಾಯಿಕ, ಡಾ.ಸದಾನಂದ ನಾಯಿಕ, ಡಾ.ಅಪ್ಪಾಸಾಬ ಸುತಾರ ಉಪಸ್ಥಿತರಿದ್ದರು.