ಚೆನ್ನೈ, ಮೇ 2 ವಿಶ್ವ ಶ್ರೇಷ್ಠ ವಿಕೆಟ್ ಕೀಪರ್ಗಳಲ್ಲಿ ತಾವು ಒಬ್ಬರೂ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬುಧವಾರ ರಾತ್ರಿ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸಾಬೀತುಪಡಿಸಿದರು.
ಬುಧವಾರ ರಾತ್ರಿ ನಡೆದ ಐಪಿಎಲ್ 50ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 80 ರನ್ಗಳಿಂದ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಎಂ.ಎಸ್ ಧೋನಿ, ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಕ್ರಿಸ್ ಮೊರಿಸ್ ಅವರನ್ನು ಸ್ಟಂಪ್ ಔಟ್ ಮಾಡಿದ್ದರು. ಈ ಎರಡು ಸ್ಟಂಪ್ ಔಟ್ ಅದ್ಭುತವಾಗಿತ್ತು.
ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ಸಿಎಸ್ಕೆ ನಾಯಕ ಧೋನಿ, " ಬಾಲ್ಯದ ದಿನಗಳಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡಿದ್ದರಿಂದ ವೇಗವಾಗಿ ಸ್ಟಂಪಿಂಗ್ ಕೌಶಲ ಬೆಳೆದಿದೆ. ಪಂದ್ಯದಿಂದ ಪಂದ್ಯಕ್ಕೆ ಸ್ಟಂಪಿಗ್ ಕೌಶಲ ಇನ್ನಷ್ಟು ಪಕ್ವತೆ ಪಡೆದಿದೆ. ಆದರೆ, ಈ ರೀತಿ ವೇಗವಾಗಿ ಸ್ಟಂಪಿಂಗ್ ಮಾಡಲು ಸಹಕಾರಿಯಾಗಲು ಮೂಲ ಕಾರಣ ಟೆನಿಸ್ ಬಾಲ್ ಕ್ರಿಕೆಟ್" ಎಂದು ಸ್ಪಷ್ಟಪಡಿಸಿದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತಿದ್ದ ನಾಯಕ ಶ್ರೇಯಸ್ ಅಯ್ಯರ್ಗೆ ಮತ್ತೊಂದು ತುದಿಯಲ್ಲಿ ಯಾರೂ ಸಾಥ್ ನೀಡಲಿಲ್ಲ. ಒಂದು ತುದಿಯಲ್ಲಿ ಬ್ಯಾಟ್ಸ್ಮನ್ಗಳು ಪೆರೆಡ್ ಮಾಡುತ್ತಿದ್ದರು. ಇಂಥ ಕ್ಲಿಷ್ಠ ಸನ್ನಿವೇಶದಲ್ಲಿ ಅಯ್ಯರ್(44 ರನ್, 31 ಎಸೆತ) ಏಕಾಂಗಿ ಹೋರಾಟ ನಡೆಸುತ್ತಿದ್ದರು. ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಅವರನ್ನು ಧೋನಿ ಮಿಂಚಿನ ವೇಗವಾಗಿ ಸ್ಟಂಪ್ ಔಟ್ ಮಾಡಿದರು. ನಂತರ, ಕ್ರಿಸ್ ಮೋರಿಸ್ (0) ಧೋನಿಯ ಮಿಂಚಿನ ವೇಗದ ಸ್ಟಂಪಿಂಗ್ಗೆ ಬಲಿಯಾಗಿದ್ದರು. ಈ ಸ್ಟಂಪ್ಡ್ ಔಟ್ ಮೇಲ್ನೋಟಕ್ಕೆ ಕಾಣಿಸದೆ, ಡಿಆರ್ಎಸ್ ಮೂಲಕ ಮಾತ್ರ ನಿರ್ಧರಿಸುವಷ್ಟು ಸೂಕ್ಷ್ಮ ರೀತಿಯದ್ದಾಗಿತ್ತು.
'ಚೆಂಡನ್ನು ಗಮನಿಸಬೇಕು, ಅನಂತರ ಸ್ಟಂಪ್ಗೆ ಯತ್ನಿಸಬೇಕು. ಚೆಂಡಿನ ವೇರಿಯೇಷನ್ಸ್ ತಿಳಿದುಕೊಳ್ಳಬೇಕು. ಅದಕ್ಕಾಗಿ ನೀವು ಕೊಂಚ ಸಮಯ ವ್ಯಯಿಸಬೇಕಾಗುತ್ತದೆ. 20 ಓವರ್ ಬಳಿಕ (ಮೊದಲ ಇನ್ನಿಂಗ್ಸ್ ಮುಕ್ತಾಯದ ಬಳಿಕ) ಚೆಂಡು ಹೆಚ್ಚಿನ ಸಾರಿ ಸ್ವಿಂಗ್ ಆರಂಭವಾಗುತ್ತದೆ. ಅದಕ್ಕೆ ತಯಾರಾಗಿರಬೇಕು' ಎಂದು ಧೋನಿ ವಿಕೆಟ್ ಕೀಪಿಂಗ್ ಗುಟ್ಟನ್ನು ಬಿಚ್ಚಿಟ್ಟರು.