ವಿದ್ಯಾರ್ಥಿಗಳು ಬಾವಿಯ ಕಪ್ಪೆಯಾಗಬಾರದು : ಡಾ. ಭೀಮಾಶಂಕರ ಗುಳೇದ
ಬೆಳಗಾವಿ 02: ಕಳೆದ 25 ವರ್ಷಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಾವಿನ್ಯಪೂರ್ಣ ಆವಿಷ್ಕಾರಗಳಾಗಿದ್ದು, ವಿದ್ಯಾರ್ಥಿಗಳು ಇವುಗಳನ್ನು ಬಳಸಿಕೊಂಡು ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು. ಕೇವಲ ಪಠ್ಯಪುಸ್ತಕಕ್ಕೆ ಅಂಟಿಕೊಂಡು ಬಾವಿಯ ಕಪ್ಪೆಯಾಗದೆ, ಚಾರ್ಟ ಜಿ.ಪಿ.ಟಿ. ಅಂತಹ ನೂತನ ಆವಿಷ್ಕಾರಗಳನ್ನು ಉಪಯೋಗಿಸಿಕೊಂಡು ವೈಜ್ಞಾನಿಕ ಅಧ್ಯಯನ ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅಭಿಪ್ರಾಯಪಟ್ಟರು. ಅವರು ಇಂದು ನಾಗನೂರು ರುದ್ರಾಕ್ಷಿ ಮಠದ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆ, ಟ್ರಾನ್ಸ್ ಡಿಸಿಪ್ಲೇನರಿ ಲನಿಂರ್ಗ್ ಸೊಲ್ಯೂಷನ್ಸ್ ಇವರ ಮಾರ್ಗದರ್ಶನದಲ್ಲಿ ಸ್ಟೀಮ್- ಎಚ್. ತರಬೇತಿ ಮತ್ತು ಸಂಶೋಧನಾ ಕೇಂದ್ರದಿಂದ ಆಯೋಜಿಸಲಾದ ಯುವ ವಿಜ್ಞಾನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ಪ್ರಸ್ತುತ ಯಂತ್ರಗಳು ಎಲ್ಲಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮುಂದೊಂದು ದಿನ ಮಾನವನನ್ನೇ ಬದಲಿಸುವ ದಿನ ಬರಬಹುದು. ಹಾಗಾಗಿ ಭಾವನಾ ಶೂನ್ಯ ಯಂತ್ರಗಳಿಗಿಂತ ಮಾನವೀಯತೆ ಹೊಂದಿದ ಮನುಷ್ಯರು ವೈಜ್ಞಾನಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಇನ್ನೋರ್ವ ಅತಿಥಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲೀಲಾವತಿ ಹಿರೇಮಠ ಮಾತನಾಡಿ ಪ್ರಸ್ತುತ ದೇಶದಲ್ಲಿ ಸಂಶೋಧನೆ ಮತ್ತು ಚಟುವಟಿಕೆ ಆಧಾರಿತ ಕಲಿಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಸಂಶೋಧಕರಾಗಲು ಇದೊಂದು ಸದಾವಕಾಶ. ಇಂತಹ ಉತ್ಕೃಷ್ಠ ಗುಣಮಟ್ಟದ ಸಂಶೋಧನಾ ಕೇಂದ್ರ ಬೆಳಗಾವಿಯಲ್ಲಿ ಪ್ರಾರಂಭಿಸುತ್ತಿರುವ ನಾಗನೂರು ರುದ್ರಾಕ್ಷಿ ಮಠದ ಕಾರ್ಯ ಶ್ಲಾಘನೀಯ ಎಂದರು.
ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ. ಹಿರೇಮಠ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ ಮೆಲ್ಬೋರ್ನ್ ಎಫ್‌ಪಿಡಬ್ಲ್ಯೂ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಸಹ ಸಂಸ್ಥಾಪಕ ಡಾ. ಬಸನಗೌಡ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಾರಂಭದಲ್ಲಿ ಸಿದ್ಧರಾಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಧ್ಯಾಪಕ ಏ.ಕೆ. ಪಾಟೀಲ ಸ್ವಾಗತಿಸಿದರು. ವಿಜ್ಞಾನ ಕೇಂದ್ರದ ಯೋಜನಾ ಸಹಾಯಕ ರಾಜಶೇಖರ ಪಾಟೀಲ ನಿರೂಪಿಸಿದರು. ಎಸ್ ಜಿ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಹಪ್ರಾಧ್ಯಾಪಕಿ ಲಲಿತಾ ದರ್ಬಾ ವಂದಿಸಿದರು