ವಿದ್ಯಾರ್ಥಿಗಳು ಕಲಿಕಾ ಹಂತವನ್ನು ಸದುಪಯೋಗ ಪಡೆದುಕೊಳ್ಳಬೇಕು -ಮಲ್ಲಿಕಾರ್ಜುನ ಭಜಂತ್ರಿ
ವಿಜಯಪುರ ಮಾ.07 : ವಿದ್ಯಾರ್ಥಿಗಳು ಸತತ ಅಧ್ಯಯನಶೀಲತೆ ರೂಢಿಸಿಕೊಳ್ಳುವ ಮೂಲಕ ತಮ್ಮ ಜೀವನವನ್ನು ಸುಂದರಗೊಳಿಸಿಕೊಳ್ಳಬೇಕು ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ ಭಜಂತ್ರಿ ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಬಿ.ವಿ ದರ್ಬಾರ್ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಸಭಾಂಗಣದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಗುರುವಾರ ಹಮ್ಮಿಕೊಂಡ ಮಾಧ್ಯಮ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿರಂತರ ಕಲಿಕೆಯಿಂದ ಅಧ್ಯಯನಶೀಲರಾಗುವುದರೊಂದಿಗೆ ಉತ್ತಮ ಗುರಿಯನ್ನಿಟ್ಟುಕೊಂಡು ಉನ್ನತ ಸ್ಥಾನ ಪಡೆಯುವ ಮೂಲಕ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜಕ್ಕೆ ತಮ್ಮ ಕೊಡುಗೆ ನೀಡಬೇಕು ಎಂದು ಹೇಳಿದರು.
ಪತ್ರಕರ್ತರಾದ ಪರಶುರಾಮ ಭಾಸಗಿ ಅವರು ಮಾತನಾಡಿ, ಮಾಧ್ಯಮ ಎಂದರೆ ಮಾಹಿತಿ, ಮನರಂಜನೆ ಹಾಗೂ ಶಿಕ್ಷಣದ ಕುರಿತ ಮಾಹಿತಿಯನ್ನು ಕನ್ನಡಿಯ ರೀತಿಯಲ್ಲಿ ಜನರಿಗೆ ಮುಟ್ಟಿಸುವ ಕೌಶಲ್ಯವಾಗಿದೆ. ಸತತ ಅಧ್ಯಯನ, ಪ್ರತಿ ವಿಷಯವನ್ನು ಅರಿತುಕೊಳ್ಳುವ ಹಂಬಲ, ಇಚ್ಛಾಶಕ್ತಿಯೊಂದಿಗೆ ಈ ಕೌಶಲ್ಯಗಳನ್ನು ರೂಢಿಸಿಕೊಂಡಲ್ಲಿ ಭವಿಷ್ಯದಲ್ಲಿ ವಿಫುಲ ಅವಕಾಶಗಳು ದೊರೆಯುತ್ತವೆ ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಾಧ್ಯಮ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ. ಮಾಧ್ಯಮ ಕ್ಷೇತ್ರ ಎಲ್ಲ ರಂಗಗಳಲ್ಲೂ ಇದೆ. ಬರವಣಿಗೆಯಲ್ಲಿ ಚಿಂತನೆಗಳ ಮೆರವಣಿಯಾಗಬೇಕು. ಮಾಧ್ಯಮ ಕ್ಷೇತ್ರವನ್ನು ಪ್ರಾಯೋಗಿಕವಾಗಿ ಕಲಿಯಬೇಕು. ಅರ್ಹತೆ ಗಳಿಸಿದರೆ ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಯಾವುದೇ ಸಾಮಾಜಿಕ ಸುಧಾರಣೆಗೆ ಮಾಧ್ಯಮದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಾತಿನ ಶೈಲಿ ಕರಗತ ಮಾಡಿಕೊಳ್ಳಬೇಕು, ನಿರಂತರ ಕಲಿಯುವಿಕೆ ರೂಢಿಸಿಕೊಳ್ಳಬೇಕು, ಮಾಧ್ಯಮ ಕ್ಷೇತ್ರಗಳಲ್ಲಿ ವಿವಿಧ ಅವಕಾಶಗಳಿದ್ದು, ವಿದ್ಯಾರ್ಥಿಗಳು ಇದರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ನಮ್ಮ ವಿದ್ಯೆ ಬುದ್ಧಿ ಕೌಶಲ್ಯ ಪ್ರತಿಭೆ ಗಳಿಸುವತ್ತ, ಗುರಿ ಇಟ್ಟುಕೊಂಡು ನಡೆಯಬೇಕು ಎಂದು ಹೇಳಿದ ಅವರು, ಪತ್ರಿಕೋದ್ಯಮ ಕುರಿತು ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿಕೊಟ್ಟರು.
ಬಿ.ವಿ.ದರಬಾರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಜಿ.ಎಚ್.ಮಣ್ಣೂರ ಅವರು ಮಾತನಾಡಿ, ಪತ್ರಿಕೆಗಳನ್ನು ಓದುವ ಗುಣ ಬೆಳೆಸಿಕೊಳ್ಳಬೇಕು. ಸಮಯ ಪ್ರಜ್ಞೆ ರೂಢಿಸಿಕೊಳ್ಳಬೇಕು. ಕರೋನ ಕಾಲಘಟ್ಟದಲ್ಲೂ ಮಾಧ್ಯಮ ಕ್ಷೇತ್ರ ಅದ್ಭುತವಾಗಿ ಕಾರ್ಯನಿರ್ವಹಿಸಿದೆ. ಚಿಕಿತ್ಸಕ ಮನೋಭಾವನೆ, ಹೊಸದನ್ನು ಕಲಿಯುವ ಹಂಬಲ ಹೊಂದಬೇಕು ಎಂದು ಅವರು ಕಿವಿಮಾತು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಅಮರೇಶ ದೊಡಮನಿ, ಶಿಕ್ಷಕಿ ರಶ್ಮಿ ಪಾಟೀಲ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನೀಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.