ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶ್ರಮಿಸಿ: ಜಿಲ್ಲಾಧಿಕಾರಿ ನಲಿನ್ ಅತುಲ್
ಕೊಪ್ಪಳ 17: ಜೀತ ಕಾರ್ಮಿಕ ಪದ್ಧತಿಯು ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಇಂತಹ ಅಮಾನವೀಯ ಪದ್ಧತಿಯನ್ನು ಹೋಗಲಾಡಿಸಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು. ಅವರು ಸೋಮವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ಬೆಳಗಾವಿ (ಕೊಪ್ಪಳ ಘಟಕ) ಸ್ಪಂದನ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನಾ ದಿನದ ಅಂಗವಾಗಿ ಕೊಪ್ಪಳ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾದ ಒಂದು ದಿನದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. ಜೀತ ಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ 1976ರಲ್ಲಿ ಕಾಯ್ದೆ ಜಾರಿಗೆ ಬಂದಿದೆ. ರಾಜ್ಯದಲ್ಲಿ ಜೀತ ಪದ್ಧತಿಯನ್ನು ನಿಯಂತ್ರಣಗೊಳಿಸಿ ನಿರ್ಮೂಲನೆ ಮಾಡಲು ಜೀತ ಕಾರ್ಮಿಕ ಪದ್ಧತಿ ನಿಷೇಧ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಜಿಲ್ಲಾಧಿಕಾರಿಯಿಂದ ಗ್ರಾಮ ಆಡಳಿತಾಧಿಕಾರಿವರೆಗಿನ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಜೀತ ಪದ್ಧತಿ ನಿರ್ಮೂಲನಾಧಿಕಾರಿಗಳು, ಜೀತ ಕಾರ್ಮಿಕ ಪ್ರಕರಣಗಳನ್ನು ಸೂಕ್ತ ಪ್ರಾಧಿಕಾರಕ್ಕೆ ವರದಿ ಮಾಡಬೇಕು. ಈ ಪದ್ಧತಿಯನ್ನು ತಡೆಯಲು ಸಹ ಕ್ರಮವಹಿಸಬೇಕು. ಜೀತ ಪದ್ಧತಿಗೆ ಒತ್ತಾಯಿಸಿದ ಆರೋಪಿಗಳ ವಿರುದ್ಧ ಪರಿಣಾಮಕಾರಿಯಾಗಿ ಅಭಿಯೋಜನೆಗೆ ಒಳಪಡಿಸಲು ಸಾಕ್ಷ್ಯ ಸಂಗ್ರಹಣೆಗೆ ಸಹಕರಿಸಬೇಕು ಎಂದರು. ಜೀತ ಪದ್ಧತಿ ಶಿಕ್ಷಾರ್ಹ ಅಪರಾಧವೆಂದು, ಜೀತ ಪದ್ಧತಿಯನ್ನು ಮುಂದುವರೆಸುವಂತಿಲ್ಲವೆಂದು ಸಾರ್ವಜನಿಕರಿಗೆ, ಉದ್ಯಮಿಗಳಿಗೆ ಅರಿವು ಮೂಡಿಸಬೇಕು. ಈ ಕುರಿತು ಸಂವೇದನೆಯನ್ನು ಸಾರ್ವಜನಿಕರಲ್ಲಿ ಮೂಡಿಸಲು ಕ್ರಮ ವಹಿಸಬೇಕು. ಇದರ ಜೊತೆಗೆ ಜೀತ ವಿಮುಕ್ತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಪೂರಕ ಕ್ರಮಗಳನ್ನು ಅನುಸರಿಸಬೇಕು. ಅವರಿಗೆ ಅಗತ್ಯವಿರುವ ಕಾನೂನು ಸಲಹೆ, ಪೊಲೀಸ್ ನೆರವು ಪಡೆಯಲು ಸಹಕರಿಸಬೇಕು ಹಾಗೂ ಜೀತ ವಿಮುಕ್ತ ಕಾರ್ಮಿಕರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರೇಷ್ಮಾ ಹಾನಗಲ್, ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಸುಧಾ ಜಿ ಗರಗ, ಮಾನವ ಕಳ್ಳ ಸಾಗಾಣಿಕೆ ಮತ್ತು ಜೀತ ಕಾರ್ಮಿಕ ಪದ್ಧತಿಯ ರಾಜ್ಯ ಉನ್ನತ ಸಮಿತಿ ಸದಸ್ಯರಾದ ವಿಲಿಯಂ ಕ್ರಿಸ್ಟೋಪರ್, ಯುನಿಸೆಫ್ ಪ್ರಾದೇಶಿಕ ಸಂಯೋಜಕ ರಾಘವೇಂದ್ರ ಭಟ್, ಯುನಿಸೆಫ್ ಸಂಯೋಜಕ ಹರೀಶ ಜ್ಯೋಗಿ, ಬೆಳಗಾವಿ ಸ್ಪಂದನ ಸಂಸ್ಥೆಯ ಕಾರ್ಯದರ್ಶಿ ವಿ.ಸುಶೀಲ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ವಿಲಿಯಂ ಕ್ರಿಸ್ಟೋಪರ್ ಅವರು ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು, ರಾಘವೇಂದ್ರ ಭಟ್ ಅವರು ಮಾನವ ಕಳ್ಳ ಸಾಗಾಣಿಕೆ ತಡೆ ಕಾಯ್ದೆ ಬಗ್ಗೆ ಹಾಗೂ ಹರೀಶ ಜ್ಯೋಗಿ ಅವರು ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಕುರಿತು ತರಬೇತಿ ನೀಡಿದರು. ಕೊಪ್ಪಳ ಜಿಲ್ಲೆಯ ಜೀತ ಪದ್ಧತಿ ನಿರ್ಮೂಲನಾಧಿಕಾರಿಗಳು ಭಾಗವಹಿಸಿದ್ದರು.