ದುಶ್ಚಟಗಳಿಂದ ದೂರವಿರಿ: ಆನಂದ ದೇವರು

ದುಶ್ಚಟಗಳಿಂದ ದೂರವಿರಿ: ಆನಂದ ದೇವರು Stay away from vices: Ananda Dev

            ವಿಜಯಪುರ 22: ನಾವೆಲ್ಲರೂ ಭಾರತೀಯರೆಂಬ ಐಕ್ಯತಾ ಮಂತ್ರವನ್ನು ಪಠಿಸುತ್ತಾ ನಮ್ಮಲ್ಲಿರುವ ಜಾತಿ, ಮತ, ಪಂಥ, ಪಂಗಡ, ಮೇಲು-ಕೀಳುಗಳೆಂಬ ಅನಿಷ್ಟಗಳನ್ನು ತೊಲಗಿಸಿ ನಾವೆಲ್ಲರೂ ಒಂದೇ, ಜಾತಿ ಒಂದೇ, ಮತ ಒಂದೇ ನಾವು ಮನುಜರು ಎಂಬಂತೆ ಸದ್ಭಾವನೆಯನ್ನು ಹೊಂದಬೇಕು. ನಮ್ಮದು ‘ವಸುದೈವ ಕುಟುಂಬಕಂ’ ಎನ್ನುವ ಸಂಸ್ಕೃತಿಯ ನಾಡು. ಮಾನವೀಯತೆ, ಸದಾಚಾರ, ಸನ್ನಡತೆ, ಸದ್ವಿಚಾರ, ಸಚ್ಚಾರಿತ್ರ್ಯ, ಸತ್ಸಂಗ, ಸಮಷ್ಠಿಭಾವ ಮತ್ತು ಸಮನ್ವಯತೆ ಮತ್ತು ಸಮಾನತೆಯಂತಹ ಗುಣಗಳನ್ನು ಅಳವಡಿಸಿಕೊಂಡು ನಮ್ಮ ನಾಡಿನ ಭವ್ಯ ಸಂಸ್ಕೃತಿ-ಪರಂಪರೆಯನ್ನು ಎತ್ತಿ ಹಿಡಿಯಬೇಕು ಎಂದು ಜಮಖಂಡಿಯ ಓಲೆಮಠದ ಆನಂದ ದೇವರು ಅಭಿಪ್ರಾಯಪಟ್ಟರು. 

       ಅವರು ನಗರದ ಅಥಣಿ ರಸ್ತೆಯ ಎನ್‌.ಜಿ,ಓ ಕಾಲನಿಯ ಜೈ ಆಂಜನೇಯ ದೇವಸ್ಥಾನದ 6ನೇಯ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ದುಶ್ಚಟಗಳ ನಿರ್ಮೂಲನೆ ಮತ್ತು ಸದ್ಭಾವನಾ ಜನಜಾಗೃತಿ ಪಾದಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇಂದಿನ ಆಧುನಿಕತೆ ಮತ್ತು ವಾಣಿಜ್ಯೀಕರಣದತ್ತ ಸಾಗುತ್ತಿರುವ ಈ ಸಮಾಜದಲ್ಲಿ ಯುವಕರು ನೈತಿಕ-ಮೌಲ್ವಿಕ ಮತ್ತು ಮಾನವೀಯತೆಯಂತಹ ಗುಣಗಳನ್ನು ತೊರೆದು ಮಾಯಾ ಜಗತ್ತಿನ ಬೆನ್ನು ಹತ್ತಿ ನಮ್ಮ ಸಂಸ್ಕೃತಿ-ಸಂಸ್ಕಾರ, ಪರಂಪರೆ, ಸಂಪ್ರದಾಯ, ಆಚರಣೆಗಳನ್ನು ಬಿಟ್ಟು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ಕಳವಳಕಾರಿ ಸಂಗತಿ. ಪಾದಯಾತ್ರೆಯ ಪ್ರತಿ ಹಳ್ಳಿ ಮತ್ತು ಮನೆ-ಮನೆಗೆ ಮೂಲಕ ತೆರಳಿ ಯುವಕರಿಗೆ ದುಶ್ಚಟಗಳನ್ನು ತ್ಯಜಿಸುವಲ್ಲಿ ಅರಿವು ಮೂಡಿಸುತ್ತಾ, ರಾಷ್ಟ್ರವನ್ನು ಸುಶಿಕ್ಷಿತ, ಸುಸ್ಥಿರ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ನಾವೆಲ್ಲರೂ ಕಂಕಣಬದ್ಧರಾಗಬೇಕಾಗಿದೆ ಎಂದರು. 

            ಐದು ದಿನಗಳವರೆಗೆ ನಡೆದ ಈ ಪಾದಯಾತ್ರೆಯಲ್ಲಿ ಸಂತೋಷ ಪಾಟೀಲ, ಲಕ್ಷ್ಮಣ ಶಿಂಧೆ, ಬಲವಂತ ಬಳೂಲಗಿಡದ, ಭೀಮರಾಯ ಬಿರಾದಾರ, ಎಸ್,ಜಿ,ನಿಂಗನಗೌಡ್ರ, ಎಂ.ಎನ್‌.ಉಕುಮನಾಳಮಠ, ಮಲ್ಲಿಕಾರ್ಜುನ ಪಾಟೀಲ, ಪ್ರೊ. ಎಂ.ಎಸ್‌.ಖೊದ್ನಾಪೂರ, ವೆಂಕಟೇಶ ಹೊಸಮನಿ, ಆರ್‌.ಜಿ.ಗುಜಗೊಂಡ, ಅಣ್ಣಾಸಾಹೇಬ ಸಂಖ, ಅಶೋಕ ಪಾಟೀಲ, ರಮೇಶ ಕುಮಟಗಿ, ರಮೇಶ ಕೋಷ್ಠಿ, ಗಂಗಾಧರ ಚಾಬೂಕಸವಾರ, ಇನ್ನಿತರರು ಸೇರಿದಂತೆ ನವರಸಪುರದ ವಿವಿಧ ಬಡಾವಣೆಗಳ ನೂರಾರು ಜನ ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು.