ಹಿಡ್ಕಲ್ ಡ್ಯಾಂ ಬಚಾವೋ ಆಂದೋಲನ ಆರಂಭಿಸಿ
ಮಹಾಲಿಂಗಪುರ 17: ಬೆಳಗಾವಿ-ಬಾಗಲಕೋಟ ಜಿಲ್ಲೆಗಳ ರೈತರ ಗದ್ದೆಗಳಿಗೆ, ಜನ, ಜಾನುವಾರುಗಳಿಗೆ ನೀರು ಪೂರೈಸುವ ಹಿಡ್ಕಲ್ ಡ್ಯಾಂ ನೀರನ್ನು ಹುಬ್ಬಳ್ಳಿ-ಧಾರವಾಡ ಕೈಗಾರಿಕೆಗಳಿಗೆ ಪೂರೈಸುವ ಯೋಜನೆಯ ಹುನ್ನಾರ ನಡೆದಿರುವುದು ಖಂಡನೀಯ ಎಂದು ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಸುರೇಶ ಹಾದಿಮನಿ ವಿರೋಧ ವ್ಯಕ್ತಪಡಿಸಿದ್ದಾರೆ.
ಪತ್ರಿಕೆಯೊಂದಿಗೆ ಅವರು ಮಾತನಾಡಿ, ಹುಕ್ಕೇರಿ ತಾಲೂಕು ಹಿಡ್ಕಲ್ ಗ್ರಾಮದ ಬಳಿ ಇರುವ 51 ಟಿಎಂಸಿ ಸಾಮರ್ಥ್ಯದ ಘಟಪ್ರಭಾ ಜಲಾಶಯ ಬೆಳಗಾವಿ-ಬಾಗಲಕೋಟೆ ಜಿಲ್ಲೆಗಳ 3,08326 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುತ್ತಿದೆ. ಅಲ್ಲದೇ ಬರ ಪರಿಸ್ಥಿತಿಯಲ್ಲಿ ತುರ್ತಾಗಿ ಕಾಲುವೆ ಮೂಲಕ ನೀರು ಒದಗಿಸುವ ಆಪತ್ಬಾಂಧವದಂತಿದೆ. ಕೆಲವೊಮ್ಮೆ ಈ ಜಲಾಶಯದ ಫಲಾನುಭವಿಗಳಿಗೂ ನೀರಿನ ಬವಣೆ ಕಾಡುತ್ತದೆ. ಅಂಥದ್ದರಲ್ಲಿ ಈ ಜಲಾಶಯದ ನೀರನ್ನು ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ಪ್ರದೇಶಗಳಿಗೆ ಪೂರೈಸುವ ಯೋಜನೆ ಆರಂಭಿಸಿದರೆ ಈ ಭಾಗದ ರೈತರಿಗೆ ಬರದ ಬರೆ ಎಳೆದಂತಾಗುತ್ತದೆ. ಈ ಸತ್ಯ ಅರಿಯದೇ ಜನಪ್ರತಿನಿಧಿಗಳು ಯಾವ ಸ್ವಾರ್ಥ (ಪುಷಾರ್ಥ)ಕ್ಕಾಗಿ ಸಮ್ಮತಿ ಸೂಚಿದ್ದಾರೆ ಗೊತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಹಿಡ್ಕಲ್ ಡ್ಯಾಂ ನಿಂದ ಘಟಪ್ರಭ ಎಡದಂಡೆ ಕಾಲುವೆ ಮತ್ತು ಬಲದಂಡೆ ಕಾಲುವೆ ಮೂಲಕ ನೀರಾವರಿ ಯೋಜನೆ ರೂಪಿಸಲಾಗಿದೆ. ಬಲದಂಡೆ ಕಾಲುವೆಯೇ ಇನ್ನೂ ಸಂಪೂರ್ಣ ಯಶಸ್ವಿಯಾಗಿಲ್ಲ. ಇನ್ನು ಹೊಸ ಯೋಜನೆಯ ಆರಂಭದ ಅವಸರವೇಕೆ? ಎಂದರು.
ಹುಬ್ಬಳ್ಳಿ-ಧಾರವಾಡ ಕೈಗಾರಿಕೆಗಳಿಗೆ ನೀರು ಪೂರೈಸಲು ದಾಂಡೇಲಿ ಬೆಲ್ಟ್‌ನಲ್ಲಿ ಬೇರೆ ಸಂಪನ್ಮೂಲಗಳಿವೆ. ಅದನ್ನು ಬಿಟ್ಟು ಇದೇ ಜಲಾಶಯಕ್ಕೆ ಕನ್ನ ಹಾಕುವುದು ಯಾವ ನ್ಯಾಯ? ಕಳಸಾ ಬಂಡೂರಿ ಯೋಜನೆಯೂ ನೆನೆಗುದಿಯಲ್ಲಿದೆ. ಆಹಾರ ಬೆಳೆಯುವ ರೈತರ ಜಮೀನನ್ನು ಒಣಗಿಸಿ, ಕಾಸು ಮಾಡುವ ಕೈಗಾರಿಕೆಗಳಿಗೆ ಮಣೆ ಹಾಕುವುದು ನ್ಯಾಯವಲ್ಲ, ದಯವಿಟ್ಟು ಸಂಬಂಧಪಟ್ಟವರು ಇದರ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು. ಹಿಡ್ಕಲ್ ಡ್ಯಾಂ ಬಚಾವೋ ಆಂದೋಲನ ಆರಂಭಿಸಬೇಕು ಎಂದು ಕರೆ ನೀಡಿದರು.