ಶ್ರೀ ರೇಣುಕಾಚಾರ್ಯರು ಮಾನವ ಕುಲಕ್ಕೆ ಮಾನವಿತೆಯ ಸಂದೇಶ ನೀಡಿದ ಮೊದಲಿಗರು : ಅಮ್ಜದ ಪಟೇಲ್

Sri Renukacharya was the first to give a message of humanity to mankind: Amjad Patel

 ಶ್ರೀ ರೇಣುಕಾಚಾರ್ಯರು ಮಾನವ ಕುಲಕ್ಕೆ ಮಾನವಿತೆಯ  ಸಂದೇಶ ನೀಡಿದ ಮೊದಲಿಗರು : ಅಮ್ಜದ ಪಟೇಲ್ 

ಕೊಪ್ಪಳ 12: ಮಾನವ ಕುಲಕ್ಕೆ ಮಾನವಿತೆಯ ಸಂದೇಶವನ್ನು ಕೋಡುವುದರ ಮುಖಾಂತರ, ಈ ಜಗತ್ತಿಗೆ ಮಾನವಿತೆಯ ಮಾರ್ಗದಲ್ಲಿ ನಡೆಯಲು ಮೊದಲು ಹೇಳಿದ ವೀರಶೈವ ಧರ್ಮದ ಮಹಾನ್ ಶರಣ ಜಗದ್ಗುರು ರೇಣುಕಾಚಾರ್ಯರು ಎಂದು ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್ ಹೇಳಿದರು.  

ಅವರು ಬುಧವಾರ ಕೊಪ್ಪಳ ನಗರದ ಹೊಸಪೇಟೆ ರಸ್ತೆ ಮಾತಾ ಹೋಟಲ್ ಎದುರುಗಡೆಯ ಶ್ರೀ ರೇಣುಕಾಚಾರ್ಯ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. 

ನಾವೆಲ್ಲರೂ ಭಾರತೀಯ ಮಕ್ಕಳು, ಯಾವುದೇ ಜಾತಿ ಭೇದವಿಲ್ಲದೇ, ಸಮಾಜದ ಎಲ್ಲರನ್ನು ಪ್ರೀತಿಸಿ, ಅವರಿಗೆ ಮಹನಿಯರ ತತ್ವಾದರ್ಶ ಮತ್ತು ಧಾರ್ಮಿಕ ಶಿಕ್ಷಣವನ್ನು ನೀಡಬೇಕು. ಸಮಾಜದಲ್ಲಿ ಗಂಡು ಹೆಣ್ಣಿಗೆ ಸಮಾನ ಸ್ಥಾನ ನೀಡಬೇಕು. ಮಕ್ಕಳಿಗೆ ಸರಿಯಾದ ಸಂಸ್ಕಾರ ಹೇಳಿಕೊಡಬೇಕು. ತಾಯಿಯಾಗುವ ಪ್ರತಿಯೊಬ್ಬ ಹೆಣ್ಣು ಪ್ರಸವಪೂರ್ವ ಸಂಸ್ಕಾರವನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಮಗುವಿನ ಮೇಲೆ ಉತ್ತಮ ಸಂಸ್ಕಾರದ ಪ್ರಭಾವ ಉಂಟಾಗುತ್ತದೆ ಎಂದು ಹೇಳಿದರು. 

ಕೋಳುರು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶರಣಯ್ಯ ಅಬ್ಬಿಗೆರಿಮಠ ಅವರು ಶ್ರೀ ರೇಣುಕಾಚಾರ್ಯರ ಕುರಿತು ವಿಶೇಷ ಉಪನ್ಯಾಸ ನೀಡಿ, ಶ್ರೀ ರೇಣುಕಾಚಾರ್ಯರ ಬಗ್ಗೆ ಮಾಹಿತಿ ಹುಡುಕುತ್ತ ಹೋದರೆ, ಆಂದ್ರ​‍್ರದೇಶದ ಕದ್ರಿಗಿಯಲ್ಲಿ ಜನಿಸಿದರು ಎಂದು ತಿಳಿಯುತ್ತದೆ. ಅವರು ಭೂ ಲೋಕದಲ್ಲಿ ಅಧರ್ಮ ಅಶಾಂತಿ ಸ್ಥಾಪನೆಯಾದಾಗ ಅದನ್ನ ಹೋಗಲಾಡಿಸಿ ಸಧರ್ಮವನ್ನ ಹುಟ್ಟುಹಾಕಲು ಜನಿಸಿದ ಮಹಾನ್ ಶರಣ, ಶೈವ ಸಮುದಾಯವನ್ನು ಶ್ರೇಷ್ಠತೆಯ ಮೇಲ್ಮಟ್ಟಕ್ಕೆ ತರಲು ಶ್ರಮಿಸಿದರು. ಜಗದ್ಗುರು ರೇಣುಕಾಚಾರ್ಯರ ಜೀವನ ಮತ್ತು ತತ್ವ ಆದರ್ಶಗಳು ಶಿವಪುರಾಣ, ಬಸವಪುರಾಣ, ಮತ್ತು ಇತರ ಶೈವ ಪುರಾಣಗಳಲ್ಲಿ ವಿವರಿಸಲಾಗಿದೆ ಎಂದರು.  

ಜಗದ್ಗುರು ರೇಣುಕಾಚಾರ್ಯರ ತತ್ವಗಳು ಇಂದಿನ ಸಮಾಜದ ಸಮಾನತೆ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಆಧುನಿಕ ದಾರಿ ದೀಪದಂತಿವೆ. ಜಗದ್ಗುರು ರೇಣುಕಾಚಾರ್ಯರು ಶೈವ ತತ್ವ ಶಾಸ್ತ್ರವನ್ನು ಜನಸಾಮಾನ್ಯರಿಗೆ ಪರಿಚಯಿಸಿ, ಅದನ್ನು ಜೀವನದ ಭಾಗವನ್ನಾಗಿ ಮಾಡಿದ ಮಹಾನ್ ಶರಣರಾಗಿದ್ದಾರೆ. ಅವರ ಬದುಕು ಮತ್ತು ತತ್ವಗಳು ಸಮಾಜಕ್ಕೆ ಮಾತ್ರವಲ್ಲದೇ ವಿಶ್ವ ಪ್ರಾಮುಖ್ಯತೆಯನ್ನು ಹೊಂದಿವೆ. ಈ ಜಯಂತಿಗೆ ಅರ್ಥ ಸಿಗಬೇಕಾದರೆ ಅವರ ತತ್ವ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೋಳ್ಳಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಜಯಂತಿಯನ್ನ ಅರ್ಥಪೂರ್ಣ ಮಾಡಬೇಕು ಎಂದು ಹೇಳಿದರು.  

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೆಬ್ಬಾಳದ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಬ್ರಹನ್ಮಠ, ಮೈನಳ್ಳಿ-ಬಿಕನಳ್ಳಿಯ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಕಂಪಸಾಗರದ ನಾಗಯ್ಯ ಸ್ವಾಮಿಗಳು ವಹಿಸಿದ್ದರು.  

ಈ ಸಮಾರಂಭದಲ್ಲಿ ನಗರಸಭೆಯ ಉಪಾಧ್ಯಕ್ಷರಾದ ಅಶ್ವಿನಿ ಗದುಗಿನಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಕೊಪ್ಪಳ ನಗರಸಭೆ ಸಿಬ್ಬಂದಿಗಳು ಮತ್ತು ಸಮಾಜದ ಮುಖಂಡರಾದ ಹಂಪಯ್ಯ ಬನ್ನಿಮಠ, ಅಳವಂಡಿಯ ಗುರುಮೂರ್ತಿಸ್ವಾಮಿ, ಗವಿಸಿದ್ದಯ್ಯ ಎಸ್ ಲಿಂಗಬಸಯ್ಯನ ಮಠ, ಕೋಟ್ರಬಸಯ್ಯ, ಕಲ್ಲಯ್ಯಜ್ಜ ಕಲ್ಯಾಣಗೌಡ್ರು, ಶಿವಕುಮಾರ್ ಹಿರೇಮಠ, ಸಿದ್ದಲಿಂಗಯ್ಯ ಹಿರೇಮಠ, ದಯಾನಂದ ಸಿ.ಎಸ್‌., ಬಾಲಚಂದ್ರಯ್ಯ ಬಿ.ಎಮ್‌., ವಿರೇಶ ಮಹಾಂತಯ್ಯನಮಠ, ನಾಗಭೂಷಣ ಸಾಲಿಮಠ, ವೆಂಕಯ್ಯ ಹಿರೇಮಠ, ಮಂಜುನಾಥ ಕೆದ್ರಳ್ಳಿಮಠ, ಪಂಪಯ್ಯ ಹೀರೆಮಠ, ವಿ.ಎಮ್‌.ಭೂಸನೂರಮಠ ವಕೀಲರು, ಬಸಯ್ಯ ಹಿರೇಮಠ, ಪಾರ್ವತಿ ಹಿರೇಮಠ ಸೇರಿದಂತೆ ಮತ್ತಿತರರು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. 

ಅದ್ದೂರಿ ಮೆರವಣಿಗೆ: ಶ್ರೀ ರೇಣುಕಾಚಾರ್ಯ ಜಯಂತಿ ನಿಮಿತ್ತ ಶ್ರೀ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆಗೆ ಕೊಪ್ಪಳ ನಗರಸಭೆಯ ಉಪಾಧ್ಯಕ್ಷೆ ಅಶ್ವಿನಿ ಗದಗಿನ ಮಠ ಹಾಗೂ ಮೈನಳ್ಳಿ-ಬಿಕನಳ್ಳಿಯ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅವರು ಚಾಲನೆ ನೀಡಿದರು. ಇದೇ ವೇಳೆ ಕೊಪ್ಪಳ ತಹಶೀಲ್ದಾರ ವಿಠ್ಠಲ್ ಚೌಗಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ ಸೇರಿ ಮತ್ತಿತರರಿದ್ದರು.  

ಮೆರವಣಿಗೆಯು ಶ್ರೀ ಗವಿಮಠದಿಂದ ಪ್ರಾರಂಭಗೊಂಡು ಜವಾಹರ ರಸ್ತೆ ಮೂಲಕ ಅಶೋಕ ವೃತ್ತದ ಮಾರ್ಗವಾಗಿ ಮಾತಾ ಹೋಟೆಲ್ ಎದುರುಗಡೆಯ ಶ್ರೀ ರೇಣುಕಾಚಾರ್ಯ ಭವನದವರೆಗೆ ಅದ್ದೂರಿಯಾಗಿ ನಡೆಯಿತು. ಸಮಾಜ ಬಾಂಧವರು ಸೇರಿದಂತೆ ಹಲವಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.