ಧಾರವಾಡ 04: ನಿರಂತರ ಕರ್ತವ್ಯನಿರ್ವಹಣೆ ಮತ್ತು ಕೆಲಸದಲ್ಲಿ ಅತಿಯಾದ ಪಾಲ್ಗೊಳ್ಳುವಿಕೆಯಿಂದ ಮಾನಸಿಕ ಒತ್ತಡ, ರಕ್ತದೊತ್ತಡ, ಸಕ್ಕರೆ ಖಾಯಿಲೆಯಂತಹ ಅನಾರೋಗ್ಯ ಉಂಟಾಗುವ ಸಾಧ್ಯತೆ ಇರುತ್ತದೆ. ಇವುಗಳಿಂದ ದೂರವಿರಲು ಮತ್ತು ಉತ್ಸಾಹದಿಂದ ನಿತ್ಯ ಕರ್ತವ್ಯ ನಿರ್ವಹಿಸಲು ಪ್ರತಿಯೊಬ್ಬರಿಗೂ ಕ್ರೀಡೆ ಅತ್ಯಗತ್ಯ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಈಶಪ್ಪ ಕೆ. ಭೂತೆ ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ಕ್ರೀಡಾಂಗಣದಲ್ಲಿ ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ವಾಷರ್ಿಕ ಕ್ರೀಡಾಕೂಟ ಉದ್ಘಾಟಿಸಿ, ಮಾತನಾಡಿದರು.
ಪೊಲೀಸ್ ಇಲಾಖೆ ಸಮಾಜದ ಶಾಂತಿ, ಸುವ್ಯವಸ್ಥೆಗಾಗಿ ಹೆಚ್ಚಿನ ಮುತುವಜರ್ಿಯಿಂದ ಕೆಲಸ ಮಾಡುತ್ತದೆ. ಇಲ್ಲಿನ ಸಿಬ್ಬಂದಿಗಳು ಕಾರ್ಯ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಅವರಿಗೆ ಬದಲಾವಣೆ ಹಾಗೂ ಉತ್ಸಾಹಕ್ಕಾಗಿ ಕ್ರೀಡೆ, ಯೋಗ, ಧ್ಯಾನಗಳು ಮಹತ್ವವಾಗಿವೆ. ಆದ್ದರಿಂದ ಪ್ರತಿ ಸಿಬ್ಬಂದಿ ಇಂತಹ ಒಂದಿಲ್ಲೊಂದು ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಅವರು ಹೇಳಿದರು.
ಕ್ರೀಡೆಯಲ್ಲಿ ಸೋಲು-ಗೆಲುವುಗಳನ್ನು ಕ್ರೀಡಾಪಟು ಸಮಾನವಾಗಿ ಸ್ವೀಕರಿಸಬೇಕು. ಮನರಂಜನೆ ಮನೋಭಾವದಿಂದ ಕ್ರೀಡೆಗಳನ್ನು ಆಡಬೇಕು. ಉತ್ತಮ ಆಹಾರ ಸೇವನೆಯೂ ಬಹುಮುಖ್ಯ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶ ಈಶಪ್ಪ ಭೂತೆ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಜಿ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಎ. ಹಟ್ಟಿ ವಂದಿಸಿದರು. ಎನ್.ಎ. ಮುತ್ತಣ್ಣ ಸ್ವಾರಕ ವಸತಿ ಶಾಲೆಯ ಶಿಕ್ಷಕ ಡಾ.ಎ.ಸಿ. ಅಲ್ಲಯ್ಯನಮಠ ಕಾರ್ಯಕ್ರಮ ನಿರೂಪಿಸಿದರು.
ಅಣ್ಣಿಗೇರಿ ಪೊಲೀಸ್ ಠಾಣೆ ಪೊಲೀಸ್ ಪೇದೆ ಬಸವರಾಜ ಲಮಾಣಿ ಅವರು ಕ್ರೀಡಾ ಜ್ಯೋತಿಯೊಂದಿಗೆ ಕ್ರೀಡಾಂಗಣಕ್ಕೆ ಆಗಮಿಸಿದರು. ಪ್ರಭಾರ ಡಿಸಿಪಿ ಹರಿಶ್ಚಂದ್ರ ನಾಯಕ ಕ್ರೀಡಾಪಟುಗಳ ಪರವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಡಿಸೆಂಬರ್ 5ರ ಸಂಜೆ 4 ಗಂಟೆಗೆ ಕ್ರೀಡಾಕೂಟದ ಮುಕ್ತಾಯ ಸಮಾರಂಭ ಜರುಗಲಿದ್ದು, ಜಿಲ್ಲಾಧಿಕಾರಿ ದೀಪಾ ಚೋಳನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಬಹುಮಾನ ವಿತರಣೆ ಮಾಡಲಿದ್ದಾರೆ.