ಮನದಲ್ಲಿನ ತಮಸ್ಸು ಕಳೆಯಿರಿ: ಕೃಪಾಮಯಿ ಮಾತಾಜೀ
ವಿಜಯಪುರ 05: ವೇದಾಂತ, ಉಪನಿಷತ್ತು ಮತ್ತು ಭಗವದ್ಗೀತೆಯಲ್ಲಿ ತಿಳಿಸಿದ ನೀತಿ ಸಾರ ಸಂದೇಶದಂತೆ ಮೃಗೀಯತೆ ಅಥವಾ ಕ್ರೌರ್ಯತೆಯಿಂದ ಮನುಷತ್ವದೆಡೆಗೆ ಸಾಗಲು ಸನ್ಮಾರ್ಗ ತೋರಲು ಧರ್ಮವು ಒಂದು ಸಾಧನ. ಎಲ್ಲ ಧರ್ಮಗಳ ಗೂಢಾರ್ಥ ಅಥವಾ ಉದ್ಧೇಶ ವ್ಯಕ್ತಿ ತಾನು ಸುಖಿಯಾಗಿರಬೇಕು ಮತ್ತು ಸದಾ ಪರರ ಸುಖವನ್ನು ಬಯಸಿ, ಇರುವಷ್ಟು ದಿನ ಒಳ್ಳೆಯ ಕೆಲಸ-ಕಾರ್ಯ ಮಾಡುತ್ತಾ, ಸದ್ಭಾವ, ಸದ್ವಿಚಾರ, ಸನ್ನಡತೆ, ಸದ್ಗುಣ, ಸಚ್ಚಾರಿತ್ರ್ಯ ಎಂಬ ಪಂಚ ಗುಣಗಳನ್ನು ಮೈಗೂಡಿಸಿಕೊಂಡು ಬದುಕಬೇಕು. ನಮ್ಮ ಬದುಕು ಹೆಂಗ ಆಗಬೇಕೆಂದರೆ, ಇತರರಿಗೆ ಆದರ್ಶ, ಮಾದರಿ ಮತ್ತು ಅನುಕರಣೆಯಾಗುವಂತಿರಬೇಕು. ಸಾಮಾನ್ಯರಾಗಿ ಅಸಾಮಾನ್ಯ ದೈವಿಗುಣ ಹೊಂದುತ್ತಾ, ಇಡೀ ಸಮಾಜ್ಯೋದ್ಧಾರಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಸಾಧು-ಸಂತರು, ಮಹಾಪುರುಷರು, ದೈವಾಂಶ ಸಂಭೂತರೆನಿಸಿಕೊಂಡ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಅರವಿಂದ ಘೋಷ, ಸಿಸ್ಟರ್ ನಿವೇದಿತಾ, ಮದರ ತೇರೇಸಾ, ಸಿದ್ದೇಶ್ವರ ಸ್ವಾಮೀಜಿ ಅವರಂತಹ ಶ್ರೇಷ್ಠ ಅಧ್ಯಾತ್ಮ ಜೀವಿಗಳನ್ನು ಕೊಡುಗೆ ನೀಡಿದ ದೇಶ ನಮ್ಮದು. ಅದಕ್ಕಾಗಿ ತಾಯಂದಿರು ತಮ್ಮ ಮಕ್ಕಳಿಗೆ ಕೇವಲ ಶಿಕ್ಷಣವಂತರನ್ನಾಗಿಸದೇ ಅವರು ನಮ್ಮ ಧರ್ಮ, ಸಂಸ್ಕೃತಿ-ಸಂಸ್ಕಾರ, ಪರಂಪರೆ, ಇತಿಹಾಸದ ಬಗ್ಗೆ ಅರ್ಥೈಸಿ, ಉತ್ತಮ ಸತ್ಪ್ರಜೆಯಾಗುವಂತೆ ಪ್ರೇರೇಪಿಸಬೇಕು ಎಂದು ವಿಜಯಪುರದ ಕೃಪಾಮಯಿ ಶಾರದಾಶ್ರಮದ ಕೈವಲ್ಯಮಯಿ ಮಾತಾಜೀ ಕಿವಿಮಾತು ಹೇಳಿದರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಎನ್.ಜಿ.ಓ ಕಾಲನಿಯಲ್ಲಿ ಜೈ ಆಂಜನೇಯ ದೇವಸ್ಥಾನದ 5 ನೇಯ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಪಾರಿತೋಷಕ ವಿತರಣೆ ಮತ್ತು ದಾನಿಗಳ ಸನ್ಮಾನ ಸಮಾರಂಭವನ್ನು ದೀಪ ಬೆಳಗಿಸುವದರ ಮೂಲಕ ಉದ್ಘಾಟಿಸಿ, ಆರ್ಶಿವಚನ ನೀಡಿ ಮಾತನಾಡುತ್ತಿದ್ದರು.
ಜೀವನದಲ್ಲಿ ನೈತಿಕ ನಿಯಮ, ಜೀವನ ಕ್ರಮ ಅನುಸರಿಸುತ್ತಾ, ನುಡಿದಂತೆ ನಡೆದು ಯಾವುದೇ ಫಲಾಪೇಕ್ಷೆಯಿಲ್ಲದೇ ಇತರರಿಗೆ ಪರೋಪಕಾರಿಯಾಗಿ ಬದುಕಬೇಕು. ನಮ್ಮ ಸಂಸಾರ ಸಸಾರವಾಗಬೇಕಾದರೆ ಮೊದಲು ನಮ್ಮಲ್ಲಿರುವ ಕಲ್ಮಶ ಮನಸ್ಸು, ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಮದ, ಮೋಹ, ಮತ್ಸರ ಮತ್ತು ಲೋಭಗಳು ದೂರಾಗಬೇಕು. ಅಂದಾಗ ಮಾತ್ರ ಅವರು ದೇವರಿಗೆ ಪ್ರೀಯರಾಗುತ್ತಾರೆ. ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿಯೊಂದಿಗೆ ಸಾರ್ಥಕತೆ ಪಡೆಯಬೇಕಾದರೆ ನಿತ್ಯ ಧರ್ಮ, ಅದರ ನೀತಿಯ ಸಾರ ಅರಿಯಲು ಏರಿ್ಡಸಿದ ಭಗವದ್ಚಿಂತನೆ, ಸತ್ಸಂಗ, ಕೀರ್ತನೆ, ಅಧ್ಯಾತ್ಮಿಕ ಮತ್ತು ಚಿಂತನ-ಮಂಥನ ಗೋಷ್ಠಿಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು. ಎನ್.ಜಿ.ಓ. ಕಾಲನಿಯ ಈ ಆಂಜನೇಯ ದೇವಸ್ಥಾನವು ವಿಜಯಪುರ ನಗರದ ಮಾದರಿ ಬಡಾವಣೆಯಾಗಿ ನಿರಂತರವಾಗಿ ಸಾಮಾಜಿಕ, ಧಾರ್ಮಿಕ ಮತ್ತು ಸತ್ಸಂಗಗಳನ್ನು ಏರಿ್ಡಸಿ, ಸಾರ್ವಜನಿಕರಿಗೆ ಸತ್ಸಂಗದತ್ತ ಒಲವನ್ನು ಹೆಚ್ಚಿಸುತ್ತಿರುವುದು ಉತ್ತಮ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಿದ್ದಸಿರಿ ಸಹಕಾರಿ ಪತ್ತಿನ ನಿಯಮಿತ ನಿರ್ದೇಶಕಿ ಶೈಲಜಾ. ಬ. ಪಾಟೀಲ (ಯತ್ನಾಳ) ಅವರು ಮಾತನಾಡಿ, ಪಾಶ್ಚಾತ್ಯೀಕರಣದ ಪ್ರಭಾವದಿಂದ ದೇವರು, ದೇವಸ್ಥಾನ, ಧಾರ್ಮಿಕ ಕಾರ್ಯಕ್ರಮ ಮತ್ತು ಅಧ್ಯಾತ್ಮಿಕತೆಯತ್ತ ಒಲವು ತೋರದೇ ಇರುವ ಯುವಕರಲ್ಲಿ ನೈತಿಕ, ಮೌಲ್ವಿಕ, ವೈಚಾರಿಕ ಮತ್ತು ಜೀವನ-ಮೌಲ್ಯಗಳು, ಬದುಕಿನ ರೀತಿ-ನೀತಿ, ಮತ್ತು ಸಮಾಜಕ್ಕೆ ಸದಾ ಋಣಯಾಗುವಂತೆ ಮತ್ತು ದೇಶಪ್ರೇಮದಂತಹ ಗುಣಗಳನ್ನು ಒಡಮೂಡಿಸಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ ಎಂದರು.
ದೇವಸ್ಥಾನದ ಅಭಿವೃದ್ಧಿಗೆ ತನು-ಮನ-ಧನದಿಂದ ದೇಣಿಗೆ ನೀಡಿದ ಮಹಿಳಾ ದಾನಿಗಳಾದ ಉಮಾ ತೊಡಕೆ, ಜಯಶ್ರೀ ಚಾಂದಕವಟೆ, ಜ್ಯೋತಿ ಪಾಟೀಲ, ಮಂಜುಳಾ ಜೋಶಿ, ಪರಿಮಳ ಹಿರೇಮಠ, ಮಹದೇವಿ ಪಾಟೀಲ, ವಿಜಯಲಕ್ಷ್ಮೀ ನಿಂಗನಗೌಡ್ರ, ಡಾ. ವಾಸಂತಿ ಚಲವಾದಿ, ಪ್ರೀಯದರ್ಶಿನಿ ಪಾಟೀಲ, ಲಕ್ಷ್ಮೀ ಪೂಜಾರಿ, ವಿಜಯಲಕ್ಷ್ಮೀ ಬಾರಿಗಿಡದ, ಮಂಜುಳಾ ಕವಲಗಿ ಇನ್ನಿತರನ್ನು ಸನ್ಮಾನ ಮಾಡಲಾಯಿತು.
ಸಿ.ಪಿ.ಐ ನಿಂಗಪ್ಪ ಪೂಜಾರಿ, ಪ್ರೊ. ಮುರುಗೇಶ ಪಟ್ಟಣಶೆಟ್ಟಿ, ಅಶೋಕಗೌಡ ಪಾಟೀಲ, ಶಂಕರ ಪೂಜಾರಿ, ಶಕುಂತಲಾ ಶಿಂಧೆ, ಆಶಾ ಬಾಸೂತಕರ, ಸರೋಜಿನಿ ಬಿರಾದಾರ, ಸರೋಜಾ ಬಾಗಲಕೋಟ ಇನ್ನಿತರರು ವೇದಿಕೆ ಮೇಲಿದ್ದರು. ನವರಸಪುರದ ಎಲ್ಲ ಬಡಾವಣೆಗಳ ಸುಮಾರು ನೂರಾರು ಹಿರಿಯರು, ಮಹಿಳೆಯರು, ಮಕ್ಕಳು ಯುವಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.