30 ಸಾವಿರ ಎಕರೆ ನೀರಾವರಿಗೊಳಪಡಿಸುವ ಕಾಮಗಾರಿಗೆ ಶೀಘ್ರ ಮಂಜೂರಾತಿ: ಎಂ.ಬಿ.ಪಾಟೀಲ

Soon approval for the work of irrigating 30 thousand acres: M.B. Patil

30 ಸಾವಿರ ಎಕರೆ ನೀರಾವರಿಗೊಳಪಡಿಸುವ ಕಾಮಗಾರಿಗೆ ಶೀಘ್ರ ಮಂಜೂರಾತಿ: ಎಂ.ಬಿ.ಪಾಟೀಲ 

ವಿಜಯಪುರ 15: ಅರ್ಜುಣಗಿ, ಕುಮಠೆ, ತೊದಲಬಾಗಿ, ಹೆಬ್ಬಾಳಟ್ಟಿ, ತಿಗಣಿಬಿದರಿ, ನಾಗರಾಳ, ಗದ್ಯಾಳ, ಗೋಠೆ, ಯಕ್ಕುಂಡಿ, ವಕ್ಕುಂಡಿ, ನಿಡೋಣಿ, ಶೇಗುಣಸಿ ಗ್ರಾಮಗಳ 30 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಒದಗಿಸುವ 5ಎ-5ಬಿ ಏತ ನೀರಾವರಿ ಯೋಜನೆ ಹಾಗೂ ಬಬಲೇಶ್ವರ  ವಿತರಣಾ ಕಾಲುವೆ ನಂ. 15ರ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಮಂಜೂರಾತಿ ದೊರೆತು ಕಾಮಗಾರಿ ಆರಂಭಿಸಲಾಗುವುದು  ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.  ಶನಿವಾರ ಬಬಲೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಕೆಆರ್‌ಐಡಿಎಲ್ ವತಿಯಿಂದ ರೂ.25 ಲಕ್ಷ ವೆಚ್ಚದಲ್ಲಿ ಆರ್‌ಐಡಿಎಫ್ ಯೋಜನೆಯಡಿ ರೈತ ಸಂಪರ್ಕ ಕೇಂದ್ರದಲ್ಲಿ ಗೋದಾಮು ಕಟ್ಟಡ ಉದ್ಘಾಟನೆ, ಪಟ್ಟಣ ಪಂಚಾಯತಿ ವತಿಯಿಂದ 264 ಲಕ್ಷ ರೂ.ವೆಚ್ಚದಲ್ಲಿ ವಿವಿಧ 9 ಕಾಮಗಾರಿಗಳ ಭೂಮಿಪೂಜೆ, ಬಬಲೇಶ್ವರ ತಾಲೂಕಾ ಪಂಚಾಯತಿ ವತಿಯಿಂದ ಆಯ್ಕೆಯಾದ ಫಲಾನುಭವಿಗಳಿಗೆ 45 ಹೊಲಿಗೆ ಯಂತ್ರಗಳ ವಿತರಣೆ, ಆರೋಗ್ಯ ಇಲಾಖೆ ವತಿಯಿಂದ 250 ಲಕ್ಷ ರೂ. ವೆಚ್ಚದಲ್ಲಿ ಬಬಲೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಶಂಕು ಸ್ಥಾಪನೆ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ 17 ಕೋಟಿ ರೂ. ವೆಚ್ಚದಲ್ಲಿ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಕಟ್ಟಡ ಶಂಕು ಸ್ಥಾಪನೆ, ಕಂದಾಯ ಇಲಾಖೆ ವತಿಯಿಂದ ಬಬಲೇಶ್ವರ ತಾಲೂಕಿನ ಭೂಮಾಪನ ಕಚೇರಿ ಉದ್ಘಾಟನೆ, ಬಬಲೇಶ್ವರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರ ಕಾರ್ಯಾಲಯ ಕಾರ್ಯಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  ಜಿಲ್ಲೆಯ ಸಮಗ್ರ ಅಭಿವೃದ್ದಿಗಾಗಿ ಆರೋಗ್ಯ, ಶಿಕ್ಷಣ, ನೀರಾವರಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ.  ವಿಶೇಷವಾಗಿ ಬಬಲೇಶ್ವರ ಮತ್ತು ತಿಕೋಟಾ ಭಾಗದ ನೀರಾವರಿ ಯೋಜನೆಗಳನ್ನು ಸಮರ​‍್ಕವಾಗಿ ಅನುಷ್ಠಾನಗೊಳಿಸಿದ ಸಂತೃಪ್ತಿ ನನಗಿದೆ. ಈ ಭಾಗದಲ್ಲಿ ಅನುಷ್ಠಾನಗೊಳಿಸಿದ ಯೋಜನೆಗಳು ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಈ ಯೋಜನೆಗಳು ಭದ್ರ ಬುನಾದಿ ಒದಗಿಸಿವೆ. ಬರದ ನಾಡನ್ನು ನೀರಾವರಿಗೊಳಪಡಿಸಿ ಜಿಲ್ಲೆಯ ಇತಿಹಾಸ ಬದಲಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ ಎಂದು ಹೇಳಿದರು.  ಇಂಡಿ ತಾಲೂಕಿನ 25 ಕೆರೆಗಳಿಗೆ ನೀರು ಒದಗಿಸಲು ಕ್ರಮ ವಹಿಸಲಾಗುತ್ತಿದ್ದು, ಇದರಿಂದ ಈ ಭಾಗದಲ್ಲಿ ಜನ-ಜಾನುವಾರುಯಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದ ಅವರು, ಜಿಲ್ಲೆಯ ಹಳ್ಳಗಳನ್ನು ತುಂಬಿಸುವ  ಮೂಲಕ ಅಂತರಜಲಮಟ್ಟ ಹೆಚ್ಚಿಸಿ ರೈತರ ಬಾಳನ್ನು ಬೆಳಗಿಸುವ ತಮ್ಮ ಕನಸಿನ ಯೋಜನೆ ಕುರಿತು ಅಭಿಪ್ರಾಯಿಸಿದ ಅವರು, ಜಿಲ್ಲೆಯ ಕಾಲುವೆ ಜಾಲಗಳ ಹಳ್ಳಗಳಿಗೆ ಪ್ರತಿಯೊಂದು ಕಿ.ಮೀ.ಗೆ ಚೆಕ್ ಡ್ಯಾಂ ನಿರ್ಮಿಸಿ ನೀರನ್ನು ಇಂಗುವಂತೆ ಮಾಡಿ ಅಂತರಜಲವನ್ನು ಹೆಚ್ಚಿಸಲು ಕ್ರಮ ವಹಿಸುವುದಾಗಿ ತಮ್ಮ ಅಂತರಾಳದಲ್ಲಿನ ನೀಲನಕ್ಷೆಯ ಯೋಜನೆ-ಯೋಚನೆಯನ್ನು ಕಾರ್ಯಕ್ರಮದಲ್ಲಿ ತಿಳಿಸಿದರು.  ಜಿಲ್ಲೆಯಲ್ಲಿ ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದ್ದು, ಈ ನಿಟ್ಟಿನಲ್ಲಿ ಸಿಎಸ್‌ಆರ್ ಅನುದಾನವನ್ನು ಬಳಸಿಕೊಂಡು ಸ್ಮಾರ್ಟಕ್ಲಾಸ್, ಆಟದ ಪರಿಕರಗಳ ವ್ಯವಸ್ಥೆ ಸೇರಿದಂತೆ ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ಸಮರ​‍್ಕ ವಾತಾವರಣ ಮಕ್ಕಳಿಗೆ ಕಲ್ಪಿಸಿಕೊಂಡು ಪ್ರೋತ್ಸಾಹಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.  ಬಬಲೇಶ್ವರ-ತಿಕೋಟಾ ಭಾಗದ ಅತ್ಯಂತ ಬಡವರಿಗೆ  ಸೂರು ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳಡಿ ಒಂದು ಸಾವಿರ ಮನೆಗಳನ್ನು ನಿರ್ಮಾಣ ಮಾಡಿ ಗ್ರಾಮ ಸಭೆಗಳ ಮೂಲಕ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.  ಸರ್ಕಾರ ಜಾರಿಗೊಳಿಸಿ ಐದು ಗ್ಯಾರಂಟಿ ಯೋಜನೆಗಳು ಸಮಾಜದ ಎಲ್ಲ ವರ್ಗಗಳಿಗೆ ಲಾಭ ದೊರಕಿಸಿದೆ. ಪ್ರತಿ ಕುಟುಂಬ ಆರ್ಥಿಕ ಸ್ವಾವಲಂಬನೆಗೆ ಈ ಯೋಜನೆಗಳು ಶಕ್ತಿ ತುಂಬಿವೆ.  ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಪ್ರತಿಯೊಬ್ಬರು ಸಹಕರಿಸಬೇಕು. ನೀರನ್ನು ಮಿತವಾಗಿ ಬಳಸುವ ಮೂಲಕ ನೀರಿನ ಸಂರಕ್ಷಣೆಗೆ ಮುಂದಾಗಬೇಕು. ಬೇಸಿಗೆ ಸಮಯದಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸೂಕ್ತ ಯೋಜನೆಗಳನ್ನು ಹಾಕಿಕೊಂಡು ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದರು.  ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾತನಾಡಿ, ಜಿಲ್ಲೆಯಲ್ಲಿ 8 ತಾಲೂಕುಗಳನ್ನು ಹೊಸದಾಗಿ ರಚನೆ ಮಾಡಲಾಗಿದ್ದು, ತಿಕೋಟಾ ಮತ್ತು ಬಬಲೇಶ್ವರ ತಾಲೂಕನ್ನು ರಾಜ್ಯದಲ್ಲಿಯೇ ಮಾದರಿ ತಾಲೂಕನ್ನಾಗಿಸುವ ನಿಟ್ಟಿನಲ್ಲಿ ಸಚಿವರು ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದ್ದು, ಈಗಾಗಲೇ ಕಳೆದ ವರ್ಷ ತಿಕೋಟಾದಲ್ಲಿ ತಾಲೂಕಾ ಆಡಳಿತ ಸೌಧ ಹಾಗೂ ಭೂಮಾಪನ ಇಲಾಖೆ ಕಚೇರಿ ಕಾರ್ಯಾರಂಭಗೊಳಿಸಿ, ತಾಲೂಕಿನ ರೈತರ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗಿದ್ದು, ಇಂದು ಸಹ ಬಬಲೇಶ್ವರ ತಾಲೂಕಿನಲ್ಲಿ ಭೂಮಾಪನ ಕಚೇರಿ ಆರಂಭದಿಂದ  ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಿದೆ.  ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರಗಳಿಗೆ ಅಲೆದಾಡುವುದು ತಪ್ಪಿದಂತಾಗುತ್ತದೆ.  ಅನಾವಶ್ಯಕ ಸಮಯದ ವ್ಯರ್ಥವಾಗದೇ, ನಿಗದಿತ ಅವಧಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ, ಇದೇ ಮಾದರಿಯಲ್ಲಿ  ಉಳಿದ 6 ತಾಲೂಕುಗಳಲ್ಲಿ ಹಂತ ಹಂತವಾಗಿ ಕಾರ್ಯಾರಂಭಗೊಳಿಸಲಾಗುವುದು. ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಮಟ್ಟದಿಂದಲೇ ಅರಣ್ಯೀಕರಣಕ್ಕೆ ಒತ್ತು ನೀಡಲು ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.  ಡಾ.ಮಹಾದೇವ ಜಗದ್ಗುರುಗಳು ಸಾನಿಧ್ಯ ವಹಿಸಿದ್ದರು. ಧಾರವಾಡ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷ ಇಲಿಯಾಸ ಬೋರಾಮಣಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಬದ್ರೂದ್ದಿನ ಸೌದಾಗರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.