ಸೋಬಾನೆ ಪದಗಾರ್ತಿ ಗಿರಿಜಮ್ಮ ಬಣಕಾರ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ
ರಾಣೇಬೆನ್ನೂರು 20 : ತಾಲೂಕಿನ ಕಲಾವಿದರ ತವರೂರು ಆರೇಮಲ್ಲಾಪುರ ಖ್ಯಾತಿಯ, ಯಕಲಾಸಫುರ ಗ್ರಾಮದ ಶ್ರೀಮತಿ ಗಿರಿಜಮ್ಮ ಹನುಮಪ್ಪ ಬಣಕಾರ ಅವರು, 2023-24ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ಜಾನಪದ ಅಕಾಡೆಮಿಯ ಸಾಧಕರಿಗೆ ಕೊಡ ಮಾಡುವ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಗ್ರಾಮೀಣ ಸಂಸ್ಕೃತಿ ಪ್ರತಿಬಿಂಬಿತ ಜಾನಪದ ಕಲಾಪರಂಪರೆಯ ಸೋಬಾನೆ, ಸಂಪ್ರದಾಯ, ಮತ್ತು ಆಧ್ಯಾತ್ಮ ಯೋಗಿ ಶ್ರೀ ಸಿದ್ಧಾರೂಢರ ಹಾಡುಗಳನ್ನು ತಮ್ಮ ಕಂಠಸಿರಿಯಲ್ಲಿ ಸುಲಲಿತವಾಗಿ ಪ್ರಸ್ತುತಪಡಿಸುವ ಗಿರಿ ಜಮ್ಮ ಅವರು, ತಾಲೂಕಿನ ಹೆಮ್ಮೆಯ ಕಲಾವಿದೆ. ಬಾಲ್ಯದಲ್ಲಿಯೇ ಗ್ರಾಮ ಸಂಸ್ಕೃತಿಯಲ್ಲಿ ಬೆಳೆದ ಗಿರಿಜಮ್ಮ ಸುದೀರ್ಘ ಐದು ದಶಕಗಳ ಕಾಲ ದಣಿವರಿಯದೆ ತಮ್ಮ ಕಂಠಸಿರಿಯಲ್ಲಿ ಬಹು ಸಂಸ್ಕೃತಿಯ ಸೋಬಾನೆ ಪದಗಳ ಮೂಲಕ ಗ್ರಾಮೀಣರ ಜನರ ಮನದಾಳದಲ್ಲಿ ಜನಪ್ರಿಯತೆ ಗಳಿಸಿರುವ "ಸೋಬಾನೆ’ ಹಾಡುಗಾರ್ತಿ ಗಿರಿಜಮ್ಮ ಎಂದೆ ಗುರುತಿಸಿಕೊಂಡವರು.
ಕರ್ನಾಟಕ ಜಾನಪದ ಅಕಾಡೆಮಿಯು, ಗಿರಿಜಮ್ಮ ಅವರ ಸೋಬಾನೆ ಪದಗಳ, ಸುಧೀರ್ಘ ಅಪ್ರತಿಮ ಸಾಧನೆಗಾಗಿ, ಪ್ರತಿಷ್ಠಿತ ಪ್ರಶಸ್ತಿಯು ವಿತರಿಸಿ ಗೌರವಿಸಿರುವುದು ಜಿಲ್ಲೆಗೆ ಮತ್ತು ನಾಡಿಗೆ ಹೆಮ್ಮೆಯ ಸಂಗತಿಯಾಗಿದೆ.ಕಳೆದ ಮಾರ್ಚ್ 15 2025 ರಂದು ಬೀದರ ಮಹಾನಗರದಶ್ರೀ ಬಸಪ್ಪ ಪಟ್ಟದದೇವರು ರಂಗಮಂದಿರದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 2024- ವಾರ್ಷಿಕ ಗೌರವ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದ್ದಾರೆ. ಅಭಿನಂದನೆ :- ಜಾನಪದ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಗ್ರಾಮೀಣ ಜನರಲ್ಲಿ ಜಾನಪದ ಸಂಸ್ಕೃತಿಯ ಸೋಬಾನೆ ಪದಗಳ ಮೂಲಕ ಇಂದಿಗೂ ಅರಿವು ಜಾಗೃತಿ ಮೂಡಿಸುತ್ತಿರುವ ಹೆಮ್ಮೆಯ ಕಲಾವಿದೆ ಗಿರಿಜಮ್ಮ ಬಣಕಾರ, ತಾಲೂಕಿನ ಮತ್ತು ಜಿಲ್ಲೆಯ ಹೆಮ್ಮೆ ಎಂದು ತಮ್ಮ ಸಂತಸ ವ್ಯಕ್ತಪಡಿಸಿರುವ , ಜಾನಪದ ವಿದ್ವಾಂಸ, ಡಾ, ಕೆ.ಸಿ. ನಾಗರಜ್ಜಿ, "ಅಭಿರುಚಿ " ಜಾನಪದ ಕಲಾ ತರಬೇತಿ ಸಂಸ್ಥೆಯ, ಕಲಾ ನಿರ್ದೇಶಕ ಕೆ.ಎಸ್. ನಾಗರಾಜ, ಕುಪ್ಪೇಲೂರು ರಂಗ ಚೇತನ ಸಂಸ್ಥೆಯ ಅಧ್ಯಕ್ಷ ಗಣೇಶ್ ಗುಡಗುಡಿ, ಮತ್ತು ಜಿಲ್ಲೆಯ ಅನೇಕ ಕಲಾವಿದರು ಅಭಿನಂದಿಸಿ, ಪ್ರಶಸ್ತಿ ಪುರಸ್ಕೃತ ಗಿರಿಜಮ್ಮ ಬಣಕಾರ ಅವರ ಗ್ರಾಮಕ್ಕೆ ತೆರಳಿ ಅಭಿನಂದಿಸಿ ಸನ್ಮಾನಿಸಿದ್ದಾರೆ.