ಕೌಶಲ್ಯ ರೋಜ್‌ಗಾರ್ ಮೇಳ, ಉದ್ಯೋಗ ಮೇಳ ಯುವಕರು ಕೆಲಸ ಮಾಡುವ ಹವ್ಯಾಸವನ್ನು ಬೆಳಸಿಕೊಳ್ಳಬೇಕು - ಕೆ.ರಾಜಶೇಖರ ಹಿಟ್ನಾಳ
ಕೊಪ್ಪಳ 06: ಭಾರತದ ದೇಶವು ಜಗತ್ತಿನ ಅತಿ ಹೆಚ್ಚು ಯುವ ಜನತೆಯನ್ನು ಹೊಂದಿರುವ ರಾಷ್ಟ್ರವಾಗಿದ್ದು, ಯುವಕರು ಕೆಲಸ ಮಾಡುವ ಹವ್ಯಾಸವನ್ನು ಬೆಳಸಿಕೊಳ್ಳಬೇಕು ಎಂದು ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ್ ಹಿಟ್ನಾಳ ಹೇಳಿದರು.
ಅವರು ಗುರುವಾರ ಕೊಪ್ಪಳ ನಗರದ ತಾಲೂಕು ಕ್ರೀಡಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕೌಶಲ್ಯ ಮಿಷನ್, ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಏರಿ್ಡಸಿದ್ದ “ಕೌಶಲ್ಯ ರೋಜ್‌ಗಾರ್ ಮೇಳ" ಉದ್ಯೋಗ ಮೇಳ-2025"ರ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದರು.
ಉದ್ಯೋಗ ಮೇಳಗಳು ನಿರುದ್ಯೋಗಿಗಳಿಗೆ ಸಹಕಾರಿಯಾಗಿದ್ದು, ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಸಿಗುವುದರ ಜೊತೆಗೆ ಅವರ ಆರ್ಥಿಕವಾಗಿ ಸಬಲೀಕರಣಕ್ಕೂ ಅನುಕೂಲವಾಗಲಿದೆ. ಇಂದಿನ ದಿನಗಳಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿದ್ದು, ಈ ಸಮಸ್ಯೆಯನ್ನು ಹೋಗಲಾಡಿಸಲು ಉದ್ಯೋಗ ಮೇಳಗಳ ಆಯೋಜನೆ ಅತ್ಯವಶ್ಯಕವಾಗಿದೆ. ಉದ್ಯೋಗಾಕಾಂಕ್ಷೆ ಹೊಂದಿರು ಯುವಕರು ಇಂತಹ ಮೇಳಗಳಲ್ಲಿ ಭಾಗವಹಿಸಿ, ಉದ್ಯೋಗದ ನೆರವು ಪಡೆದುಕೊಳ್ಳಬೇಕು. ಇಂದಿನ ತಂತ್ರಜ್ಞಾನ ಯೋಗದಲ್ಲಿ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ತರಬೇತಿಗಳು ಅತ್ಯವಶ್ಯಕವಾಗಿದ್ದು, ಸರ್ಕಾರಗಳು ಹಲವಾರು ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿವೆ. ಕೌಶಲಾಭಿವೃದ್ಧಿ ತರಬೇತಿಯ ಸದ್ಬಳಕೆಯನ್ನು ಮಾಡಿಕೊಳ್ಳಲು ವಿದ್ಯಾರ್ಥಿಗಳು, ಯುವ ಜನತೆ ಮುಂದೆ ಬರಬೇಕೆಂದರು.
ನಮ್ಮ ಭಾಗದಲ್ಲಿ ಕಾರ್ಖಾನೆಗಳು, ಪ್ರವಾಸೋದ್ಯಮ ಹಾಗೂ ತೋಟಗಾರಿಕೆ ಕ್ಷೇತ್ರವಿದ್ದು, ಇವುಗಳನ್ನು ತಮ್ಮ ಉದ್ಯೋಗಕ್ಕಾಗಿ ಆಯ್ಕೆ ಮಾಡಿಕೊಳ್ಳಬಹುದು. ಒಂದು ಎಕರೆ ನೀರಾವರಿ ಭೂಮಿಯಲ್ಲಿ ತೋಟಗಾರಿಕೆ ಮಾಡುವ ಮೂಲಕ ವಾರ್ಷಿಕ ನಾಲ್ಕು ಲಕ್ಷ ಆದಾಯವನ್ನು ಗಳಿಸಬಹುದು. ಇದರ ಜೊತೆಗೆ ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆಯಂತಹ ಸ್ವಯಂ ಉದ್ಯೋಗಗಳನ್ನು ಕೈಗೆತ್ತಿಕೊಳ್ಳಬಹುದು. ಇದಕ್ಕಾಗಿ ಸರ್ಕಾರದಿಂದ ಸಾಲ, ಸಹಾಯಧನ ಸೌಲಭ್ಯಗಳಿವೆ. ಈ ಎಲ್ಲಾ ಉದ್ಯೋಗಗಳಿಗೆ ಕೌಶಲ್ಯ ತರಬೇತಿಯು ಸಹ ಸಿಗಲಿದ್ದು, ಕೌಶಲ್ಯವನ್ನು ನಿಮ್ಮ ಉದ್ಯೋಗದಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಬಹುದು. ಇದರಿಂದ ನೀವು ಉದ್ಯೋಗಸ್ಥರಾಗಿ ಇತರರಿಗೂ ಉದ್ಯೋಗ ನೀಡುವವರಾಗುತ್ತೀರಿ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಅವರು ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಪ್ರತಿ ವರ್ಷ ಉದ್ಯೋಗ ಮೆಳವನ್ನ ಆಯೋಜನೆ ಮಾಡುತಿದ್ದೆವೆ. ಈ ವರ್ಷ 50 ರಿಂದ 60 ಕಂಪನಿಗಳು ಇಲ್ಲಿ ಬಂದಿವೆ. ಅವರಲ್ಲಿ 5 ಸಾವಿರಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ. ಆದರೆ, ನಮ್ಮ ಜಿಲ್ಲೆಯಲ್ಲಿ 2304 ಯುವಕರು ಮಾತ್ರ ನೋಂದಣಿ ಮಾಡಿಕೋಂಡಿದ್ದಾರೆ. ಅಂದರೆ ಶೇ.50 ಕ್ಕಿಂತ ಕಡಿಮೆ ನೋಂದಣಿಯಾಗಿದ್ದು, ಅದಕ್ಕೆ ಮುಖ್ಯ ಕಾರಣ ನಮ್ಮ ಭಾಗದಲ್ಲಿ ತಾಂತ್ರಿಕ ಕೌಶಲ್ಯದ ಕೊರತೆಯಿದೆ ಎಂದರ್ಥ. ಯುವಕರು ತಾಂತ್ರಿಕ ಕೌಶಲ್ಯಗಳಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.
ವಿದ್ಯಾರ್ಹತೆಯ ಅಂಕಗಳಿಗಿಂತ ಸೃಜನಾತ್ಮಕ ಕೌಶಲಗಳು ಬಹಳ ಮುಖ್ಯವಾಗಿವೆ. ಟೆಕ್ನಿಕಲ್ ಮತ್ತು ನಾನ್ ಟೆಕ್ನಿಕಲ್ ಕೌಶಲ್ಯಗಳ ಜತೆಗೆ ಕಂಪನಿಯಲ್ಲಿ ಭಾವನಾತ್ಮಕವಾಗಿ ಇತರರೊಂದಿಗೆ ಬೆರೆತು ಗುಂಪಾಗಿ ಕೆಲಸ ಮಾಡುವ ಜಾಣ್ಮೆಯನ್ನ ಬೆಳೆಸಿಕೊಳ್ಳಬೇಕು. ಅಲ್ಲದೇ ಕಂಪನಿಯ ಗುರಿಯನ್ನು ನಿಮ್ಮ ಗುರಿಯಾಗಿಸಿ ಕೊಂಡು, ಎಲ್ಲರೊಂದಿಗೆ ಬೆರೆತು ಕೆಲಸ ಮಾಡಿದರೆ, ಆ ಕಂಪನಿಯಲ್ಲಿ ಉನ್ನತ ಸ್ಥಾನಮಾನ ಪಡೆಯಲು ಸಾಧ್ಯವಾಗುತ್ತದೆ. ಉದ್ಯೋಗಾಕಾಂಕ್ಷಿಗಳು, ಈ ಉದ್ಯೋಗ ಮೇಳದಲ್ಲಿ ಬಂದಿರುವ ಎಲ್ಲಾ ಕಂಪನಿಗಳಿಗೆ ಸಂದರ್ಶನ ನೀಡಿ, ನಿಮಗೆ ಸಮಂಜಸ ಎನಿಸುವ ಕಂಪನಿಯನ್ನು ಆಯ್ಕೆ ಮಾಡಿಕೊಂಡು, ಸಂದರ್ಶನ ನೀಡಬೇಕು. ನೀವು ತೆಗೆದುಕೊಂಡ ನಿರ್ಧಾರಕ್ಕೆ ಬದ್ದರಾಗಿ, ಈ ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಬೇಕು. ಮುಂದಿನ ಉದ್ಯೋಗ ಮೇಳದಲ್ಲಿ ಎಷ್ಟು ಉದ್ಯೋಗ ಕರೆಯಲಾಗುತ್ತದೆ, ಅದಕ್ಕಿಂತ 2 ಪಟ್ಟು ನೋಂದಣಿಯಾಗುವಂತೆ, ಹೆಚ್ಚು ಜಾಗೃತಿ ಮೂಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಜಾಬ್ ಆಫರ್ ಲೇಟರ್ ವಿತರಣೆ: ಕೌಶಲ್ಯ ರೋಜ್‌ಗಾರ್ ಮೇಳ, ಉದ್ಯೋಗ ಮೇಳದಲ್ಲಿ ಉದ್ಯೋಗ ಪಡೆದ ಅಭ್ಯರ್ಥಿಗಳಲ್ಲಿ ಪಲ್ಲವಿ, ಗುರುಮೂರ್ತಿ, ಕನಕರಾಯ ಹಾಗೂ ಇತರರಿಗೆ ಸಾಂಕೇತಿಕವಾಗಿ ಜಾಬ್ ಆಫರ್ ಲೇಟರ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಪ್ರಕಾಶ ವಿ., ಕೊಪ್ಪಳ ತಹಶಿಲ್ದಾರ ವಿಠ್ಠಲ ಚೌಗಲಾ, ಜಿಲ್ಲಾ ಕೌಶಲ್ಯಭಿವೃದ್ಧಿ ಅಧಿಕಾರಿ ಗವಿಶಂಕರ ಸೇರಿದಂತೆ ವಿವಿಧ ಇಲಾಖೆಗಳ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳಾದ ಜೆ.ಎಸ್.ಡ.ಬ್ಲೂ ತೋರಣಗಲ್ ಅಸೋಸಿಯೇಟ್ ಕಂಪನಿಗಳು, ಕಿರ್ಲೋಸ್ಕರ್ ಫರಸ್ ಇಂಡಸ್ಟ್ರೀಸ್ ಕೊಪ್ಪಳ, ಮುಕುಂದ್ ಸ್ಟಿಲ್, ದೊಡ್ಲಾ, ಎಲ್.ಐ.ಸಿ ಆಫ್ ಇಂಡಿಯಾ ಕೊಪ್ಪಳ, ಮೊಯೋಟಾ ಮೋಟರ್ಸ್ ಬೆಂಗಳೂರು, ಟೊಯೋಟಾ ಆಟೋ ಪಾರ್ಟ್ಸ್ ಬೆಂಗಳೂರು, ಹೊಂಡಾ ಮೋಟರ್ಸ್ ್ಘ ಸ್ಕೂಟರ್ ಇಂಡಿಯಾ ಪ್ರೈ.ಲಿ. ಕೋಲಾರ, ಲಯಮ್ ಪ್ಲೆಕ್ಸಿ ಸಲೂಷನ್ಸ್ ಹಾಗೂ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಕೋಲಾರ, ಕಾರವಾರ ಮುಂತಾದ ಜಿಲ್ಲೆಗಳಿಂದ 45 ಕಂಪನಿಗಳು ಭಾಗವಹಿಸಿದರು.
ಈ ಉದ್ಯೋಗ ಮೇಳದಲ್ಲಿ 2594 ಉದ್ಯೋಗಾಂಕ್ಷಿಗಳು ನೋಂದಣಿ ಮಾಡಿಕೊಂಡು 1558 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಇದರಲ್ಲಿ 569 ಉದ್ಯೋಗಾಕಾಂಕ್ಷಿಗಳು ಉದ್ಯೋಗವನ್ನು ಪಡೆದುಕೊಂಡಿರುತ್ತಾರೆ. ಅದರಲ್ಲಿ 690 ಉದ್ಯೋಗಾಕಾಂಕ್ಷಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ.
ಜಿಲ್ಲಾ ಕೌಶಲ್ಯ ಮಿಷನ್ ಅಹಮದ್ ಹುಸೇನ್ ಕಾರ್ಯಕ್ರಮ ನಿರೂಪಿದರು. ಜಿ.ಪಂ ಎನ್.ಆರ್.ಎಲ್.ಎಂ. ಶಾಖೆಯ ಅಂಬಣ್ಣ ವಂದಿಸಿದರು.