ವಿಜಯಪುರದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಸ್ಥಳ ಪರೀಶೀಲನೆ
ವಿಜಯಪುರ 14. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ)ವತಿಯಿಂದ ವಿಜಯಪುರದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಸ್ಥಳ
ಪರೀಶೀಲನೆ ಮಾಡಲಾಯಿತು.
ಮಾಜಿ ಕ್ರಿಕೆಟ್ ಆಟಗಾರ, ಕೆ.ಎಸ್.ಸಿ.ಎ ಸದಸ್ಯ ಮತ್ತು ವಿಧಾನಪರಿಷತ್ ಸದಸ್ಯ ಪ್ರಕಾಶ ರಾಠೋಡ ಅವರು ವಿಜಯಪುರದಲ್ಲಿ ಸುಂದರ ಕ್ರಿಕೆಟ್ ಕ್ರೀಡಾಂಗಣ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರೊಂದಿಗೆ ಈ ಹಿಂದೆ ಕೂಡ ಚರ್ಚಿಸಿದ್ದರು.
ನಗರದ ಹೊರವಲಯದ 2-3 ಜಾಗೆಗಳನ್ನು ಕ್ರಿಕೆಟ್ ಕ್ರೀಡಾಂಗಣಕ್ಕಾಗಿ ಗುರುತಿಸುವ ಪ್ರಕ್ರಿಯೆ ನಡೆದಿದ್ದು, ಅದರನ್ವಯ ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಜಿಲ್ಲಾಧಿಕಾರಿ ಭೂಬಾಲನ್ ಹಾಗೂ ಜಿ.ಪಂ ಮುಖ್ಯಕಾರ್ಯನಿರ್ವಾಧಿಕಾರಿ ರಿಷಿ ಆನಂದ, ಉಪವಿಭಾಗಾಧಿಕಾರಿ ಗುರುನಾಥ, ತಹಶೀಲ್ದಾರ ಚನಗೊಂಡ, ಕೈಗಾರಿಕೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಇವರುಗಳು ಇಂದು ಸ್ಥಳ ಪರೀಶೀಲನೆ ನಡೆಸಿದರು.
ವಿಧಾನಪರಿಷತ್ ಸದಸ್ಯ ಪ್ರಕಾಶ ರಾಠೋಡ, ವಿಜಯಪುರದಿಂದ ವಿಮಾನ ಸಂಪರ್ಕ ಆರಂಭಗೊಂಡರೆ, ಅಂತರ್ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳನ್ನು ಕೂಡ ಇಲ್ಲಿ ಆಯೋಜಿಸಬಹುದು. ಆ ನಿಟ್ಟಿನಿಂದಲೇ ನಾವು ದೂರದೃಷ್ಟಿಯಿಂದ ಇಲ್ಲಿ ಅತ್ಯತ್ತಮ ಕ್ರೀಡಾಂಗಣ ನಿರ್ಮಿಸಲು ಉದ್ದೇಶ ಹೊಂದಲಾಗಿದೆ. ಜಿಲ್ಲಾಡಳಿತದ ಸಹಯೋಗದಿಂದ ಕ್ರೀಡಾಂಗಣ ಸ್ಥಳ ನಿಗಧಿಪಡಿಸಿದರೆ, ಮಾನ್ಯ ಸಚಿವ ಎಂ.ಬಿ.ಪಾಟೀಲರು ಆಸಕ್ತಿ ಹೊಂದಿದ್ದು, ರಾಜ್ಯ ಸರ್ಕಾರದಿಂದ ಅನುಮೋದನೆ ದೊರೆತರೆ, ಕೆ.ಎಸ್.ಸಿ.ಎ ವತಿಯಿಂದ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗುವುದು. ಇದಕ್ಕೆ ಬಿಸಿಸಿ ವತಿಯಿಂದ ಹಣಕಾಸು ಒದಗಿಸಲಿದೆ ಎಂದರು.
ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಮೊದಲ ಸ್ಥಳ ನಿರ್ಣಯ ಆಗಬೇಕು. ನಂತರ ವಿವಿಧ ಇಲಾಖೆಗಳ ನೆರವಿನಿಂದ ಆ ಸ್ಥಳ ಸಮತಟ್ಟು ಆಗಬೇಕು. ನಂತರ ದಾನಿಗಳ ನೆರವನ್ನು ಪಡೆಯೋಣ. ಸುಂದರ ಕ್ರೀಡಾಂಗಣ ನಿರ್ಮಾಣಗೊಂಡರೆ, ವಿಜಯಪುರ-ಬಾಗಲಕೋಟ ಅವಳಿ ಜಿಲ್ಲೆಯ ಯುವಪ್ರತಿಭೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದರು.
ಇನ್ನು ಕೆಲವೇ ದಿನಗಳಲ್ಲಿ ಕೆ.ಎಸ್.ಸಿ.ಎ ಕಾರ್ಯದರ್ಶಿ ಶಂಕರ ಅವರು ವಿಜಯಪುರಕ್ಕೆ ಬಂದು, ನಿಗದಿಪಡಿಸಿದ ಸ್ಥಳ ಅಂತಿಮಗೊಳಿಸುವರು ಎಂದು ತಿಳಿದು ಬಂದಿದೆ.