ಸಿತಾರ ರತ್ನ ರಹಿಮತ್ ಖಾನರ 70ನೇ ಪುಣ್ಯತಿಥಿ ಸಂಗೀತೋತ್ಸವ ಅಮೃತ ಮಹೋತ್ಸವ ಸಂಭ್ರಮದಲ್ಲಿ ಸಿತಾರ ರತ್ನ ಸಮಿತಿ
ಧಾರವಾಡ 27: ಧಾರವಾಡ ಘರಾಣೆಯ ಸಂಸ್ಥಾಪಕ ಸಿತಾರ್ ರತ್ನ ರಹಿಮತ್ ಖಾನ್‌ರ 70ನೇ ಪುಣ್ಯತಿಥಿ ಅಂಗವಾಗಿ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಸಿತಾರ್ ರತ್ನ ಸಮಿತಿಯು ಧಾರವಾಡದ ‘ಸೃಜನಾ’ ಡಾ. ಅಣ್ಣಾಜಿರಾವ್ ಸಿರೂರ ರಂಗಮಂದಿರದಲ್ಲಿ ಡಿಸೆಂಬರ್ 1 ರಿಂದ 7 ರವರೆಗೆ ಸಪ್ತದಿನಗಳ ಸಂಗೀತೋತ್ಸವವನ್ನು ಹಮ್ಮಿಕೊಂಡಿದೆ.
ಏಳು ದಿನಗಳ ಸಂಗೀತೋತ್ಸವದಲ್ಲಿ ದೇಶದ ಖ್ಯಾತ ಕಲಾವಿದರಿಂದ ಗಾಯನ-ವಾದನಗಳ ಸಂಗೀತದ ರಸ ಮಾಧುರ್ಯ ಹರಿದುಬರಲಿದೆ. ಡಿ. 1 ರಿಂದ 7ರ ವರೆಗೆ ಪ್ರತಿದಿನ ಸಂಜೆ 5.30 ಗಂಟೆಯಿಂದ ಗಾಯನ-ವಾದನಗಳ ಕಲರವ ರಿಂಗಣಿಸಲಿದೆ. ಧಾರವಾಡದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತೀಯ ಸಂಗೀತ ವಿದ್ಯಾಲಯ, ಕಲಾ ಸಂವಹನ ಟ್ರಸ್ಟ್, ದಾಸಾ ಟ್ರಸ್ಟ್, ಪುಣೆಯ ಸುಹಾನಾ ಬಸಂತ ಫೌಂಡೇಶನ್, ಬೆಂಗಳೂರಿನ ಐಸಿಸಿಆರ್ ಹಾಗೂ ಉ. ಬಾಲೇಖಾನ್ ಮೆಮೋರಿಯಲ್ ಟ್ರಸ್ಟ್‌ಗಳು ಈ ಸಂಗೀತೋತ್ಸವಕ್ಕೆ ಕೈಜೋಡಿಸಿವೆ. ಡಿ. 01, ಡಿ. 02ರ ಸಂಗೀತ ಕಾರ್ಯಕ್ರಮಗಳನ್ನು ಸಿತಾರ ನವಾಜಸಿ ಉಸ್ತಾದ ಬಾಲೇಖಾನ್ ಅವರ ಸಂಸ್ಮರಣೆಯಲ್ಲಿ ನಡೆಯಲಿದೆ. ಡಿ. 07 ರಂದು ಸಂಜೆ 05 ಗಂಟೆಗೆ ಇನ್‌ಫೋಸಿಸ್ ಸಿತಾರ ನವಾಜು್ ಉ. ಬಾಲೇಖಾನ್ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಮನೋಹರ ಗ್ರಂಥಮಾಲೆಯ ಡಾ. ರಮಾಕಾಂತ ಜೋಶಿ ಅವರು ಆಗಮಿಸಲಿದ್ದಾರೆ. ಸಂಗೀತೋತ್ಸವದ ಸಂದರ್ಭದಲ್ಲಿ ಉ. ಹಮೀದ ಖಾನರ ಪುತ್ರಿ ಅರ್ಮಾ ಖಾನ್ ಅವರಿಂದ ರಚಿತ ಪೇಂಟಿಂಗ್ಸ್‌ನ ಕಲಾಪ್ರದರ್ಶನವೂ ಇರಲಿದೆ.
ಡಿಸೆಂಬರ್ 01 ರಂದು ಸಂಜೆ 5.30ಕ್ಕೆ ನವದೆಹಲಿಯ ಅಭಯ ಸೊಪೋರಿ ಅವರ ಸಂತೂರ ವಾದನದ ನಿನಾದದೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ದೊರೆಯಲಿದೆ. ನಂತರ ಪದ್ಮಶ್ರೀ ಪುರಸ್ಕೃತ ಗಾನಪಂಡಿತ ಎಂ. ವೆಂಕಟೇಶಕುಮಾರ ಅವರ ಗಾನಮಾಧುರ್ಯವನ್ನು ಸವಿಯುವ ಸದವಕಾಶ ಒದಗಿಬರಲಿದೆ.
ಡಿ. 02 ರಂದು ಸಂಜೆ 5.30ಕ್ಕೆ ಬೆಂಗಳೂರಿನ ಗೋಪಾಲಕೃಷ್ಣ ಬಿ.ಎಂ. ಅವರ ಸಿತಾರವಾದನ ಝೇಂಕಾರ ಮೊಳಗಲಿದೆ. ನಂತರ ಜೈಪುರ-ಅತ್ರೌಲಿ ಘರಾಣೆಯ ವಿದುಷಿ ಮುಂಬೈನ ಅಶ್ವಿನಿ ಭಿಡೆ ಅವರು ತಮ್ಮ ಗಾಯನಗಂಗೆಯನ್ನು ಹರಿಸಲಿದ್ದಾರೆ.
ಡಿ. 03 ರಂದು ಸಂಜೆ 5.30ಕ್ಕೆ ಧಾರವಾಡದ ಶ್ರುತಿ ಅರ್ಚಕ ಹಾಗೂ ನೂರಜಹಾನ್ ನದಾಫ ಅವರ ಸಿತಾರ ವಾದನದ ಜುಗಲಬಂದಿ ಹಾಗೂ ಕಿರಾನಾ ಘರಾಣೆಯ ಪಂ. ಜಯತೀರ್ಥ ಮೇವುಂಡಿ ಅವರ ವಿದ್ವತ್‌ಪೂರ್ಣ ಗಾಯನ ಮೂಡಿಬರಲಿದೆ.
ಡಿ. 04 ರಂದು ಸಂಜೆ 5.30ಕ್ಕೆ ಮುಂಬೈನ ಯುವ ಕಲಾವಿದ ಎಸ್.ಆಕಾಶ ಅವರಿಂದ ಬಾನ್ಸುರಿವಾದನದ ಕಲರವ ಮೊಳಗಲಿದೆ. ಬೆಂಗಳೂರಿನ ಪಂ. ಪರಮೇಶ್ವರ ಹೆಗಡೆ ಅವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.
ಡಿ. 05 ರಂದು ಸಂಜೆ 5.30ಕ್ಕೆ ಪುಣೆಯ ಪಂ. ಅತುಲಕುಮಾರ ಉಪಾಧ್ಯೆ ಅವರು ವಯೋಲಿನ್ ವಾದನವನ್ನು ಹಾಗೂ ಬೆಂಗಳೂರಿನ ಕೌಶಿಕ ಐತಾಳ-ಓಂಕಾರ ಹವಾಲ್ದಾರ ಅವರ ಗಾಯನ ಜುಗಲ್‌ಬಂದಿ ಹರಿದುಬರಲಿದೆ.
ಡಿ. 06 ರಂದು ಸಂಜೆ 5.30ಕ್ಕೆ ಚೆನ್ನೈನ ಕೊಳಲು ವಿದ್ವಾನ್ ಶಶಾಂಕ ಸುಬ್ರಹ್ಮಣ್ಯಂ ಅವರು ಕರ್ನಾಟಕಿ ಸಂಗೀತ ಶೈಲಿಯ ವೇಣುವಾದನವನ್ನು ಪ್ರಸ್ತುತಪಡಿಸಲಿದ್ದಾರೆ. ನಂತರ ಪುಣೆಯ ಅಮೋಲ್ ನಿಶಾಲ್ ಅವರ ಗಾನಸುಧೆ ಮೂಡಿಬರಲಿದೆ.
ಅಮೃತ ಮಹೋತ್ಸವ ಸಂಗೀತ ಸಮ್ಮೇಳನದ ಕೊನೆಯ ದಿನ ಡಿ. 07 ರಂದು ಸಂಜೆ 5.30ಕ್ಕೆ ರಿತೇಶ ಹಾಗೂ ರಜನೀಶ ಮಿಶ್ರಾ ಸಹೋದರರಿಂದ ಗಾಯನದ ಜುಗಲಬಂದಿ ಪ್ರಸ್ತುತಗೊಳ್ಳಲಿದೆ. ಧಾರವಾಡ ಘರಾಣೆಯ ಉ. ಉಸ್ಮಾನ್ ಖಾನ್ ಹಾಗೂ ಉ. ಛೋಟೆ ರೆಹಮತ್ ಖಾನ್ ಅವರ ದ್ವಂದ್ವ ಸಿತಾರವಾದನದ ಝೇಂಕಾರದೊಂದಿಗೆ ಸಂಗೀತೋತ್ಸವಕ್ಕೆ ತೆರೆ ಬೀಳಲಿದೆ.
ಸಹಕಲಾವಿದರಾಗಿ ನರೇಂದ್ರ ನಾಯಕ, ಗುರುಪ್ರಸಾದ ಹೆಗಡೆ, ಭರತ ಹೆಗಡೆ, ಯಲ್ಲಾಪುರದ ಸತೀಶ ಭಟ್ಟ ಹೆಗ್ಗಾರ, ಧಾರವಾಡದ ಬಸು ಹಿರೇಮಠ ಹಾರ್ಮೋನಿಯಂ ಸಾಥ್ ಹಾಗೂ ಪಂ. ರಾಜೇಂದ್ರ ನಾಕೋಡ, ಪಂ. ಶಾಂತಲಿಂಗಪ್ಪ ಹೂಗಾರ, ಕೇಶವ ಜೋಶಿ, ಶ್ರೀಧರ ಮಾಂಡ್ರೆ, ರಘುನಂದನ ಹೂಗಾರ, ತ್ರಿಲೋಚನ ಕಂಪ್ಲಿ, ಉ. ನಿಸ್ಸಾರ ಅಹ್ಮದ, ರೂಪಕ ಕಲ್ಲೂರಕರ, ಪಾಂಡುರಂಗ ಪವಾರ, ಶ್ರೀಹರಿ ದಿಗ್ಗಾವಿ, ಪಂ. ಕಾಲೀನಾಥ ಮಿಶ್ರಾ ತಬಲಾ ಸಾಥ್ ಸಂಗತ ಮಾಡಲಿದ್ದಾರೆ. ಮೃದಂಗಮ್‌ನಲ್ಲಿ ವಿದ್ವಾನ್ ಜಯಚಂದ್ರ ರಾವ್, ಕಂಜೀರಾದಲ್ಲಿ ವಿದ್ವಾನ್ ಗುರು ಪ್ರಸನ್ನ ಸಹಕಾರ ನೀಡಲಿದ್ದಾರೆ. ಇದರಲ್ಲಿ ಭಾಗವಹಿಸುವ ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ಸಿತಾರ ರತ್ನ ಸಮಿತಿಯ ಅಧ್ಯಕ್ಷ ರಾಘವೇಂದ್ರ ಆಯಿ ತಿಳಿಸಿದ್ದಾರೆ.