ಸಿಂದಗಿ ಬಹು ಸಂಸ್ಕೃತಿಗಳ ತವರೂರು: ಡಾ.ಅರವಿಂದ ಮನಗೂಳಿ

Sindagi is the home of many cultures: Dr. Aravinda Managuli

ಸಿಂದಗಿ ಬಹು ಸಂಸ್ಕೃತಿಗಳ ತವರೂರು: ಡಾ.ಅರವಿಂದ ಮನಗೂಳಿ  

ಸಿಂದಗಿ 06: ಪ್ರಾಚೀನ ಕಾಲದಿಂದಲೂ ಸಿಂದಗಿಗೆ ತನ್ನದೇ ಆದ ಚಾರಿತ್ರಿಕ ಹಿನ್ನಲೆ ಇದೆ. ಸಿಂದಗಿ ಬಹು ಸಂಸ್ಕೃತಿಗಳ ತವರೂರು ಎಂದು ಸಿ.ಎಮ್‌. ಮನಗೂಳಿ ಕಾಲೇಜಿನ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಹೇಳಿದರು. 

ಪಟ್ಟಣದ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸ್ಥಳಿಯ ಅವ್ವಾ ಫೌಂಡೇಶನ್ ಸಿಂದಗಿ ಹಾಗೂ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಇತಿಹಾಸ ಘಟಕದ ಸಹಯೋಗದಲ್ಲಿ ನಡೆದ 1824ರ ಸಿಂದಗಿ ಬಂಡಾಯದ 200ನೇ ವರ್ಷಾಚರಣೆಯ ಸವಿನೆನಪಿಗಾಗಿ ಸಿಂದಗಿ ಚಾರಿತ್ರಿಕ ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಸಿಂದಗಿ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ನಿರ್ಮಾಣಗೊಂಡ ಐತಿಹಾಸಿಕ ದೇವಾಲಯಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಿ ಅದರ ಸಾಧಕ ಬಾಧಕಗಳ ಕುರಿತಾಗಿ ಚರ್ಚಿಸಿ ನಶಿಸಿ ಹೋಗುತ್ತಿರುವ ದೇವಾಲಯಗಳ ಸಂರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಬೇಕು ಎಂದರು. 

ಹುನ್ನುರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ನಿಂಗರಾಜ ಅಸ್ಕಿ ಮಾತನಾಡಿ,  ಸಿಂದಗಿ ಸಮ್ಮಿಶ್ರ ಸಂಸ್ಕೃತಿಯ ತವರು ನೆಲೆ ಮೌರ್ಯರ ಕಾಲದಿಂದ ಯಾದವರ ಕಾಲದವರೆಗೂ ಸಿಂದಗಿಯನ್ನು ವಿವಿಧ ರಾಜಮನೆತನಗಳು ಆಳಿವೆ ಆದರೆ ರಾಷ್ಟ್ರಕೂಟರ ಕಾಲದ ಕ್ರಿ.ಶ. 862ರ ಹೂವಿನ ಹಿಪ್ಪರಗಿ ಶಾಸನ ವಿಜಯಪುರ ಜಿಲ್ಲೆಯ ಪ್ರಥಮ ಐತಿಹಾಸಿಕ ದಾಖಲೆ ಆಧಾರವಾಗಿದೆ.  

ಸಿಂದಗಿ ತಾಲೂಕಿನ ಒಟ್ಟು 108 ಶಾಸನಗಳಲ್ಲಿ 51 ಶೈವ ಧರ್ಮಕ್ಕೆ ಸಂಬಂಧಪಟ್ಟ ಶಾಸನಗಳಿವೆ. ಸಿಂದಗಿ ನಗರದಲ್ಲಿ ಕೇವಲ ಮೂರು ಶಾಸನಗಳು ಸಿಕ್ಕಿದ್ದು ಈ ಭಾಗದ ಇತಿಹಾಸ. ಪ್ರಾಚೀನ ತರ್ದವಾಡಿ ಸಾವಿರ ಹಾಗೂ ಸಗರನಾಡಿನ ಮಧ್ಯೆ ಇರುವ ಈ ಭಾಗ ಸಿಂದಗಿ 12 ಒಂದು ಆಡಳಿತದ ಭಾಗವಾಗಿತ್ತು ಇ ಪ್ರದೇಶವನ್ನು ಪ್ರಾಚೀನ ರಾಜಮನೆತನಗಳು, ಬಹುಮನಿ ಸುಲ್ತಾನರು, ವಿಜಯಪುರದ ಆದಿಲ್‌ಶಾಹಿಗಳು, ಮರಾಠ ಪೇಶ್ವೆಗಳು, ಹೈದರಾಬಾದ್ ನಿಜಾಮರು ಹಾಗೂ ಬ್ರಿಟಿಷರು ಆಳಿರುವುದರಿಂದ ಎಲ್ಲಾ ವರ್ಗದ ಸಂಸ್ಕೃತಿಯ ಪ್ರಭಾವ ಈ ನೆಲದ ಮೇಲಾಗಿದೆ  ಎಂದರು. 

ಎಚ್‌.ಜಿ.ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಆರ್‌. ಹೆಗ್ಗನದೊಡ್ಡಿ ಆಶಯ ನುಡಿಗಳನ್ನಾಡಿ, ಗ್ರಾಮ ಚರಿತ್ರೆಯ ಅವಲೋಕನ ಮಾಡುವುದರ ಮೂಲಕ ವಿದ್ಯಾರ್ಥಿಗಳು ಐತಿಹಾಸಿಕ ಪ್ರಜ್ಞೆ ಮೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಇತಿಹಾಸದ ಅವಲೋಕನ ಮಾಡಿಕೊಡುವಲ್ಲಿ ಅವ್ವಾ ಫೌಂಡೇಶನ್ ಈ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯೆ ಜೆ.ಸಿ. ನಂದಿಕೋಲ, ಶಿಕ್ಷಕ ಸಿದ್ದಲಿಂಗ ಚೌಧರಿ ಮಾತನಾಡಿದರು. 

ಸಾನಿಧ್ಯ ವಹಿಸಿದ ಸ್ಥಳಿಯ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ,  ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮಾಡುವದರಿಂದ ನಮ್ಮ ಸಂಸ್ಕೃತಿ ಉಳಿಯುತ್ತದೆ. ಹಿಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯಬೇಕು ಎಂದರು.  

ಡಾ.ರ.ವಿ. ಗೋಲಾ, ಡಾ.ಶರಣಬಸವ ಜೋಗೂರ, ದಾನಯ್ಯ ಮಠಪತಿ, ಸುಧಾಕರ ಚವ್ಹಾಣ, ಪಿ.ಸಿ. ಕುಲಕರ್ಣಿ, ಚನ್ನು ಕತ್ತಿ, ಕುಮಾರ ಕತ್ತಿ, ನಾಜೀಯಾ ಮುಲ್ಲಾ ಸೇರಿದಂತೆ ಇತರರು ಇದ್ದರು. ಅವ್ವಾ ಫೌಂಡೇಶನ್ ಸಂಚಾಲಕ ಸಿದ್ದಲಿಂಗ ಕಿಣಗಿ ಸ್ವಾಗತಿಸಿದರು.