ಉಪವಾಸ ಆಚರಣೆಯಿಂದ ದೀರ್ಘಕಾಲದ ಕಾಯಿಲೆಯಲ್ಲಿ ಗಣನೀಯ ಸುಧಾರಣೆ: ಡಾ.ಕಲಾಲ್
ಕೊಪ್ಪಳ 22 : ಉಪವಾಸ ಆಚರಣೆ ಮಾಡುವುದರಿಂದ ಮನುಷ್ಯನಲ್ಲಿರುವ ದೀರ್ಘಕಾಲದ ಕಾಯಿಲೆಗಳಲ್ಲಿ ಗಣನೀಯ ಸುಧಾರಣೆ ಕಂಡು ಬಂದಿದೆ ಎಂದು ಕೊಪ್ಪಳ ಸದ್ಭಾವನಾ ವೇದಿಕೆಯ ಅಧ್ಯಕ್ಷ ಡಾ.ಸುಶೀಲ್ ಕುಮಾರ್ ಕಲಾಲ್ ಹೇಳಿದರು. ಅವರು ಶುಕ್ರವಾರ ಸಂಜೆ ನಗರದಲ್ಲಿ ಸದ್ಭಾವನಾ ವೇದಿಕೆ ಹಾಗೂ ಲಿಂಗಾಯತ ಧರ್ಮ ಮಹಾಸಭಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಪವಿತ್ರ ರಮಜಾನ್ ಮಾಸಾಚರಣೆ ಪ್ರಯುಕ್ತ ಮುಸಲ್ಮಾನ್ ಬಾಂಧವರಿಗೆ ಏರಿ್ಡಸಿದ ಇಫ್ತಾರ್ ಸೌಹಾರ್ದ ಕೂಟ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮುಂದುವರೆದು ಮಾತನಾಡಿ, ಇಸ್ಲಾಂ ಧರ್ಮದ ಪ್ರಾರಂಭದ ಶತಮಾನದಲ್ಲಿ ದೇವರ ಅನುಗ್ರಹ ಪಡೆಯಲು ಉಪವಾಸ ಕೈಗೊಳ್ಳುತ್ತಿದ್ದರು. ಆದರೆ ಈಗಿನ ಶತಮಾನದಲ್ಲಿ ಉಪವಾಸದ ಬಗ್ಗೆ ಸಂಶೋಧನೆ ಮಾಡಲಾಗುತ್ತಿದೆ. ಅದರಂತೆ ಈ ಉಪವಾಸಗಳನ್ನು ಕೈಗೊಳ್ಳುವುದರಿಂದ ದೀರ್ಘಕಾಲದಿಂದ ಬಳಲುವ ಕಾಯಿಲೆಗಳಲ್ಲಿ ಗಣನೀಯ ಬದಲಾವಣೆ ಮತ್ತು ಸುಧಾರಣೆ ಕಂಡುಬರುತ್ತಿದೆ ಎಂದರು.ಅಲ್ಲದೆ ನಮ್ಮ ಕೊಪ್ಪಳ ನಗರದ ನಾಗರಿಕರು ಮಾದರಿಯಾಗಿದ್ದೇವೆ ಎಂಬುವುದನ್ನು ತೋರಿಸಲು ನಾವೆಲ್ಲರೂ ಒಳಗೊಂಡು ಈ ಇಫ್ತಾರ್ ಕೋಟ ಏರಿ್ಡಸಲಾಗಿದೆ. ಪರಸ್ಪರ ಸೌಹಾರ್ದತೆಯನ್ನೂ ಬೆಳೆಸಿ ಕೊಂಡು ಜೀವನ ಸಾಗಿಸಬೇಕು. ಸೂಫಿ ಸಂತರು ದಾರ್ಶನಿಕರು ಸಜ್ಜನರು ತೋರಿದ ಮಾರ್ಗದಲ್ಲಿ ನಾವೆಲ್ಲರೂ ನಮ್ಮ ನಮ್ಮ ಬದುಕು ಕಟ್ಟಿಕೊಳ್ಳಬೇಕೆಂದ ಅವರು ಬಹುತೇಕ ಹಿಂದೂ ಸಮಾಜ ಬಾಂಧವರು ಸಹ ಈ ರಂಜಾನ್ ಉಪವಾಸವನ್ನು ಆಚರಣೆ ಮಾಡುತ್ತಿದ್ದಾರೆ. ಅದನ್ನು ನಾನು ಗಮನಿಸಿದ್ದೇನೆ, ನೋಡಿದ್ದೇನೆ ಕಂಡಿದ್ದೇನೆ ಎಂದು ಸದ್ಭಾವನ ವೇದಿಕೆಯ ಅಧ್ಯಕ್ಷ ಡಾ. ಸುಶೀಲ್ ಕುಮಾರ್ ಕಲಾಲ್ ಹೇಳಿದರು.ಲಿಂಗಾಯತ ಧರ್ಮದ ಮಹಾಸಭಾ ರಾಜ್ಯ ಅಧ್ಯಕ್ಷ ಈರಣ್ಣ ಕೊರ್ಲಹಳ್ಳಿ ಮಾತನಾಡಿ, ಇಫ್ತಾರ್ ಕೂಟ ಎಂದರೆ ಸೌಹಾರ್ದ ಕೂಟ. ನಮ್ಮೆಲ್ಲರಿಗೆ ಭೂಮಿ ಒಂದೇ, ರಕ್ತ ಒಂದೇ, ನೀರು ಗಾಳಿ ಒಂದೇ, ಅದರಂತೆ ನಾವು ಒಂದಾಗಿ ಬಾಳಬೇಕಾಗಿದೆ. ಮುಸ್ಲಿಮರು ರಂಜಾನ್ ಮಾಸಾಚರಣೆಯಲ್ಲಿ ಉಪವಾಸಗಳನ್ನು ಅತ್ಯಂಥ ಕಟ್ಟು ನಿಟ್ಟಾಗಿ ಆಚರಿಸುತ್ತಾರೆ ಅವರ ಈ ಶಿಸ್ತು ಬಹಳ ಚೆನ್ನಾಗಿದೆ. ಅದೇ ರೀತಿ ನಾವು ಶ್ರಾವಣ ಮಾಸ ಆಚರಣೆ ಆಚರಿಸುತ್ತೇವೆ. ಶ್ರಾವಣ ಎಂದರೆ ಒಳ್ಳೆಯದನ್ನು ಕೇಳಿದರೆ ಒಳ್ಳೆಯದನ್ನು ಮಾಡುತ್ತೇವೆ ಕೆಟ್ಟದ್ದನ್ನು ಕೇಳಿದರೆ ಕೆಟ್ಟದ್ದನ್ನು ಮಾಡುತ್ತೇವೆ. ಅದಕ್ಕಾಗಿ ನಾವು ಒಳ್ಳೆಯದನ್ನು ಕೇಳಿ ಒಳ್ಳೆಯದನ್ನು ಮಾಡಬೇಕಾಗಿದೆ, ಇದರ ಅರಿವು ಜನರಲ್ಲಿ ಮೂಡಿಸಲು ಶ್ರಾವಣ ಮಾಸದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಗೊಳ್ಳುತ್ತದೆ ಎಂದು ಅವರು ವಿವರಿಸಿದರು. ವಿಶೇಷ ಉಪನ್ಯಾಸ ನೀಡಿದ ವಿಜಯನಗರ ಜಿಲ್ಲೆಯ ಕಮಲಾಪುರದ ಶಾಮಿದ ರವರು ಮಾತನಾಡಿ, ಹಿಂದೂ ಮುಸ್ಲಿಂ ಎಂಬ ಭೇದ ಭಾವ ಮರೆತು ನಾವೆಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು ಒಗ್ಗೂಡಿ ಬಾಳಬೇಕು. ರಮಜಾನ್ ಮಾಸ ಆಚರಣೆಯಿಂದ ಮನುಷ್ಯನಲ್ಲಿ ಪರಿವರ್ತನೆ ಬರುತ್ತದೆ. ದೇವ ಭಯ ಬರುತ್ತದೆ. ಕೆಟ್ಟದ್ದನ್ನು ಬಿಟ್ಟು ಒಳ್ಳೆಯದ್ದನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕೆಂಬ ಭಾವನೆ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.ವೇದಿಕೆ ಮೇಲೆ ಜಮಾತೆ ಇಸ್ಲಾಮಿ ಹಿಂದ್ ನ ಕೊಪ್ಪಳ ಘಟಕದ ಅಧ್ಯಕ್ಷಸೈಯದ್ ಹಿದಾಯತ್ ಅಲಿ ಮತ್ತು ಡಾ, ಮಹೇಶ್ ಗೋವನಕೊಪ್ಪ ಉಪಸ್ಥಿತರಿದ್ದು, ಅಪಾರ ಸಂಖ್ಯೆಯಲ್ಲಿ ಹಿಂದೂ ಮುಸ್ಲಿಂ ಸಾರ್ವಜನಿಕರು ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸಾಹಿತಿ ಪತ್ರಕರ್ತ ಜಿಎಸ್ ಗೋನಾಳ ರವರು ಆರಂಭದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಜುದ್ದೀನ್ ರವರು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.