ಬೆಂಗಳೂರು, 13 ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಶಾಸಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.ಮಲ್ಲೇಶ್ವರಂನ ವೆಗ್ಗಾಸ್ ಆಸ್ಪತ್ರೆಗೆ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಭೇಟಿ ನೀಡಿ ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ. ಅವರು ನಾಳೆ ಡಿಸ್ಚಾರ್ಜ್ ಆಗುತ್ತಾರೆ ಎಂದರು.ನಾವು ಯಾವುದೇ ಪಕ್ಷಕ್ಕೂ ಹೋಗಿರಬಹುದು, ಆದರೂ ಸಿದ್ದರಾಮಯ್ಯ ಅವರೇ ಎಂದಿಗೂ ತಮ್ಮ ನಾಯಕರೇ. ಉಪಚುನಾವಣೆಯಲ್ಲಿ ಗೆದ್ದಾಗಲೇ ಸಿದ್ದರಾಮಯ್ಯ ಅವರೇ ನಮ್ಮ ನಾಯಕರು ಎಂದು ಘೋಷಿಸಿದ್ದೆ. ಈಗಲೂ ಅದನ್ನೇ ಹೇಳುತ್ತೇವೆ. ಪಕ್ಷ ಬದಲಾವಣೆ ಮಾಡಿದರೂ ಅವರೇ ನಮ್ಮ ಗುರುಗಳು. ಭೇಟಿಯಲ್ಲಿ ಅವರೊಂದಿಗೆ ಏನೇನು ಚರ್ಚಿಸಿದ್ದೇವೆ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.ಬಿ.ಸಿ.ಪಾಟೀಲ್ ಮಾತನಾಡಿ, ಮನೆ ಬದಲಾಯಿಸಿರಬಹುದು, ಆದರೆ ಮನಸ್ಸು ಬದಲಾಯಿಸುವುದಕ್ಕೆ ಸಾಧ್ಯವಿಲ್ಲ. ಪಕ್ಷ ಬದಲಾಯಿಸಿದ ಮಾತ್ರಕ್ಕೆ ಮಾನವೀಯತೆ ಮನುಷ್ಯತ್ವವನ್ನು ಮರೆಯಲು ಸಾಧ್ಯವಿಲ್ಲ. ರಾಜಕೀಯವೇ ಬೇರೆ, ಸಂಬಂಧಗಳೇ ಬೇರೆ. ಹೀಗಾಗಿ ನಮ್ಮ ಮಾಜಿ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದೇವೆ ಹೊರತು ಯಾವುದೇ ರಾಜಕೀಯದ ಬಗ್ಗೆ ಚರ್ಚಿಸಲು ಅಲ್ಲ ಎಂದು ಸ್ಪಷ್ಟಪಡಿಸಿದರು.