ಬಿ.ಸಿ.ಪಾಟೀಲ್ ಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

SIDDARAMYYA

ದಾವಣಗೆರೆ, ನ  28- ಅನರ್ಹ ಶಾಸಕ ಬಿ.ಸಿ.ಪಾಟೀಲ್ ಸೋಲುವ ಹತಾಶೆಯಿಂದ ತಮ್ಮ ಬಗ್ಗೆ ಇಲ್ಲಸಲ್ಲದ ಆರೋಪ  ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ‌ ಸಿದ್ದರಾಮಯ್ಯ ತಿರುಗೇಟು  ನೀಡಿದ್ದಾರೆ.

ಇಂದಿಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಪಯ್ಯ ಐಜಿ ಆದಂತಹವರು. ಬಿ.ಸಿ ಪಾಟೀಲ್ ಇನ್ಸ್  ಪೆಕ್ಟರ್ ಆಗಿ ಕೆಲಸ ಮಾಡಿದವರು. ಅವರು ಏಕೆ ಪೊಲೀಸ್ ಇಲಾಖೆ ಬಿಟ್ಟು ಬಂದರು ಎಂದು  ಪ್ರಶ್ನಿಸಿದರು.

ಹತಾಶರಾಗಿ  ಹೇಳಿಕೆಗಳನ್ನು ಕೊಡುತ್ತಿರುವ ಅವರ ಮಾತಿಗೆಲ್ಲ ಬೆಲೆ ಕೊಡುವ ಅಗತ್ಯವಿಲ್ಲ. ಉಪ  ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸುತ್ತಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್  12  ಸ್ಥಾನ ಗೆಲ್ಲಲಿದ್ದು, ಹಿರೇಕೇರೂರು ಜನ ಬಿಸಿ ಪಾಟೀಲರನ್ನು ಮನೆಗೆ ಕಳುಹಿಸಲು  ನಿರ್ಧರಿಸಿದ್ದಾರೆ  ಎಂದರು.

ಹೆಚ್. ಡಿ. ದೇವೇಗೌಡರು ಸೋನಿಯಾಗಾಂಧಿ ಅವರನ್ನು  ಹೊಗಳಿದರ ಹಿಂದಿನ ಮರ್ಮ ಏನು ಎಂಬುದು ತಮಗೆ ಗೊತ್ತಿಲ್ಲ. ದೇಶ ಹಾಗೂ ಪಕ್ಷಕ್ಕಾಗಿ  ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿರುವ ಸೋನಿಯಾ ಗಾಂಧಿ ಪವರ್ ಫುಲ್ ನಾಯಕಿ. ಯಾವ ಅರ್ಥದಲ್ಲಿ ದೇವೇಗೌಡರು ಹೇಳಿದ್ದಾರೋ ಗೊತ್ತಿಲ್ಲ ಎಂದರು‌.

ಉಪಚುನಾವಣಾ  ಫಲಿತಾಂಶ ಬಂದರೆ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುತ್ತಾರೆ . ಉಪಚುನಾವಣಾ  ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಏಕೆ ಬಂದಿಲ್ಲ ? ನೆರೆ ಬಂದಾಗ  ನಿರ್ಲಕ್ಷಿಸಿದ್ದ ಬಿಜೆಪಿಗೆ ತಕ್ಕ ಪಾಠವನ್ನು ಜನತೆ ಚುನಾವಣೆಯಲ್ಲಿ ಕಲಿಸಲಿದ್ದು,  ಬಿಜೆಪಿ. ಅಭ್ಯರ್ಥಿಗಳು ಸೋಲುವುದು ಖಚಿತ ಎಂದು ಭವಿಷ್ಯ ನುಡಿದರು.

ಚುನಾವಣೆಯಲ್ಲಿ  ಬಿಜೆಪಿ ಯಥೇಚ್ಛವಾಗಿ ಹಣ ಖರ್ಚು ಮಾಡುತ್ತಿದೆ .ಈ ಒಪ್ಪಂದ ಮಾಡಿಕೊಂಡೇ ಮೈತ್ರಿ  ಸರ್ಕಾರದ ಶಾಸಕರನ್ನು ಸೆಳೆದದ್ದು. ಯಡಿಯೂರಪ್ಪ ಒಬ್ಬರೇ ಪ್ರಚಾರಕ್ಕೆ ಹೋಗುತ್ತಿದ್ದಾರೆ.  ಈ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್  ನಲ್ಲಿ ಎಲ್ಲಾ ಹಿರಿಯ ಮುಖಂಡರು ಪ್ರಚಾರ ಮಾಡುತ್ತಿದ್ದಾರೆ. ನಮ್ಮಲ್ಲಿ ಯಾವುದೇ  ಅಸಮಾಧಾನದ ಪ್ರಶ್ನೆಯೇ ಇಲ್ಲ. ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು, ಹಿರಿಯ  ಮುಖಂಡರು ಒಂದೊಂದು ಕಡೆ ಪ್ರಚಾರ ಮಾಡುತ್ತಿದ್ದಾರೆ. ಒಂದಿಬ್ಬರು ಪ್ರಚಾರಕ್ಕೆ ಬಂದಿಲ್ಲ  ಎಂದರೆ ಅಸಮಾಧಾನ ಹೇಗಾಗುತ್ತದೆ. ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹಿರಿಯ ಮುಖಂಡರಲ್ಲವೇ  ?ಎಂದು ಪ್ರಶ್ನಿಸಿದ ಅವರು, ಎಲ್ಲರು ತಮಗೆ ಸೂಚಿಸಿದ ಸ್ಥಳಗಳಲ್ಲಿ ಪ್ರಚಾರ  ಮಾಡುತ್ತಿದ್ದಾರೆ ಎಂದರು.

ಹಿರೇಕೇರೂರು ಕಾಂಗ್ರೆಸ್ ಅಭ್ಯರ್ಥಿ ಬನ್ನಿಕೋಡ್ ಪ್ರಾಮಾಣಿಕ ವ್ಯಕ್ತಿಯಾಗಿದ್ದು ಗೆಲುವು ಸಾಧಿಸಲಿದ್ದಾರೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.