ಪಠ್ಯಗಳ ಜೊತೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು: ವೇದಾ ಕೃಷ್ಣಮೂರ್ತಿ
ವಿಜಯಪುರ, 01: ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು ಸಾಧ್ಯ. ಕ್ರೀಡೆಗಳಲ್ಲಿ ವ್ಯಾಪಕ ಅವಕಾಶಗಳಿದ್ದು ಎಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಭಾರತೀಯ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಹೇಳಿದ್ದಾರೆ. ನಗರದಲ್ಲಿ ಇಂದು ಶನಿವಾರ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ದಿ. ಡಾ. ಸಿ. ಆರ್. ಬಿದರಿ ಅವರ ಸ್ಮರಣಾರ್ಥ 10ನೇ ಅಂತರ ಶಾಲೆ- ಕಾಲೇಜುಗಳ ಅಥ್ಲೇಟಿಕ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡಾಕೂಟಗಳು ನಮ್ಮಲ್ಲಿರುವ ಕ್ರೀಡಾ ಸಾಮರ್ಥ್ಯ ಹೊರಹಾಕಲು ಅವಕಾಶ ಒದಗಿಸುತ್ತವೆ. ಹೀಗಾಗಿ ಪಠ್ಯಗಳ ಜೊತೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ಬಿ.ಎಲ್.ಡಿ.ಇ ಸಂಸ್ಥೆಯಲ್ಲಿ ಈಗ ಆಯೋಜಿಲಾದ ಅಥ್ಲೆಟಿಕ್ ಕ್ರೀಡಾಕೂಟ ಅಚ್ಚುಕಟ್ಟಾಗಿದ್ದು, ಪ್ರತಿಯೊಬ್ಬರಿಗೂ ಒಳ್ಳೆಯಾದಗಲಿ ಎಂದು ಅವರು ಶುಭ ಹಾರೈಸಿದರು. ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ ಮಾತನಾಡಿ, ದಿ. ಸಿ. ಆರ್. ಬಿದರಿ ಅವರು ಶ್ರೇಷ್ಠ ಕ್ರೀಡಾಪಟುವಾಗಿದ್ದರು. ಅಂತಸರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದರು. ವಿದೇಶಗಳಲ್ಲಿ ಸಾಕಷ್ಟು ಅವಕಾಶಗಳಿದ್ದರು ವಿಜಯಪುರ ಜಿಲ್ಲೆಯಲ್ಲಿಯೇ ವೃದ್ಯವೃತ್ತಿ ನಡೆಸಿ ಇಲ್ಲಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಿ ಜನಾನುರಾಗಿಯಾಗಿದ್ದಾರೆ. ಅವರ ಕ್ರೀಡಾಪ್ರೀತಿ ಎಲ್ಲರಿಗೂ ಮಾದರಿಯಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ದಿ. ಡಾ. ಸಿ. ಆರ್. ಬಿದರಿ ಅವರ ಪುತ್ರ ವಿಜಯೇಂದ್ರ ಬಿದರಿ, ಬಿ.ಎಲ್.ಡಿ.ಈ ಡೀಮ್ಡ್ ವಿವಿಯ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ರಜಿಸ್ಟ್ರಾರ ಡಾ. ಆರ್. ವಿ. ಕುಲಕರ್ಣಿ, ಉಪಪ್ರಾಚಾರ್ಯ ಡಾ. ಎಂ. ಬಿ. ಪಾಟೀಲ, ಡಾ. ಶೈಲಜಾ ಬಿದರಿ, ಆಡಳಿತಾಧಿಕಾರಿಗಳಾದ ಎಸ್. ಎಚ್. ಲಗಳಿ, ಐ. ಎಸ್. ಕಾಳಪ್ಪನವರ, ವಿಲಾಸ ಬಗಲಿ, ಬಿ. ಆರ್. ಪಾಟೀಲ, , ಕ್ರೀಡಾ ಸಮಿತಿ ಉಪಾಧ್ಯಕ್ಷ ಡಾ. ಗೀರೀಶ ಕುಲ್ಲೊಳ್ಳಿ, ಬಿ.ಎಲ್.ಡಿ.ಇ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಎಸ್. ಎಸ್. ಕೋರಿ, ಕೈಲಾಸ ಹಿರೇಮಠ, ಡಾ. ಅರುಣಾ ಬಿರಾದಾರ, ಡೀಮ್ಡ್ ವಿವಿಯ ಸಹಾಯಕ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ಮಹಾದೇವಿ ವಾಲಿ ಮುಂತಾದವರು ಉಪಸ್ಥಿತರಿದ್ದರು. ಈ ಕ್ರೀಡಾಕೂಟದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ 66 ನಾನಾ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮಾಧ್ಯಮಿಕ ಶಾಲೆಗಳು, ಪದವಿ ಪೂರ್ವ ಕಾಲೇಜುಗಳ ಒಟ್ಟು 802 ಕ್ರೀಡಾಪಟುಗಳು ಪಾಲ್ಗೋಂಡಿದ್ದರು. ಧಾಮಿನಿ ಭಟ ಪ್ರಾರ್ಥಿಸಿದರು. ಸುದನ ನಿರೂಪಿಸಿದರು. ಡಾ. ಅರುಣಾ ಬಿರಾದಾರ ವಂದಿಸಿದರು.