ಫೆ.15ರಿಂದ 3ದಿನಗಳ ಕಾಲ ರಾಣೆಬೆನ್ನೂರಲ್ಲಿ ಶಿವ ದರ್ಶನ
ರಾಣೇಬೆನ್ನೂರ 12: ಸ್ಥಳೀಯ ಗೌರಿಶಂಕರ ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಫೆ. 15ರಿಂದ 17ರವರೆಗೆ ಪ್ರತಿದಿನ ಸಂಜೆ 5 ಗಂಟೆಗೆ ಸ್ಥಳೀಯ ನಗರಸಭಾ ಕ್ರೀಡಾಂಗಣದಲ್ಲಿ ರಾಜಯೋಗಿನಿ ಬ್ರಹ್ಮಕುಮಾರಿ ವೀಣಾಜಿ ಅವರಿಂದ ಶಿವ ದರ್ಶನ ಪ್ರವಚನ ಮಾಲೆಯು ಜರುಗಲಿದೆ ಎಂದು ವಿಶ್ವವಿದ್ಯಾಲಯದ ಮಾಲತೀಜಿ ಅಕ್ಕನವರು ಹೇಳಿದರು. ಅವರು ಮಂಗಳವಾರ ವಿಶ್ವವಿದ್ಯಾಲಯದಲ್ಲಿ ಏರಿ್ಡಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಈ ಬಾರಿ ಮಹಾರಾಶಿವರಾತ್ರಿ ಮಹೋತ್ಸವವನ್ನು ಬಹಳ ವೈವಿಧ್ಯಮಯವಾಗಿ ಆಚರಿಸಲಾಗುವುದು. 89ನೇ ಈ ಮಹೋತ್ಸವದಲ್ಲಿ ಜಾನಪದ ಹಾಡುಗಳು, ಸಂಗೀತ ವಚನ ಗಾಯನ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಶಿವ ದರ್ಶನ ಕಾರ್ಯಕ್ರಮದ ಆರಂಭದ ದಿನವಾದ ಫೆ. 15ರಂದು ಮಧ್ಯಾಹ್ನ 3ಘಂಟೆಗೆ ವಿಶ್ವವಿದ್ಯಾಲಯದಿಂದ ವಿಶ್ವ ಏಕತಾ ಸದ್ಭಾವನಾ ಶಾಂತಿ ಯಾತ್ರೆಯು ಆರಂಭಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ವಿವಿಧ ವಾದ್ಯಗಳೊಂದಿಗೆ ನಡೆಯುವ ಈ ಶಾಂತಿ ಯಾತ್ರೆಯಲ್ಲಿ ಕಲಾವಿದರು ಹಾಗೂ ಭಜನಾ ಮಂಡಳಿಯವರು ಭಾಗವಹಿಸುವರು. ಕುಂಭಕರ್ಣ ನಿದ್ದೆಯಿಂದ ಏಳುವ ದೃಶ್ಯ ಹಾಗೂ ಗೊಂಬೆಯಾಟವು ಯಾತ್ರೆಯಲ್ಲಿ ಗೋಚರಿಸಲಿದೆ ಎಂದರು. 3 ದಿನಗಳ ಕಾಲ ನಡೆಯುವ ಈ ಶಿವ ದರ್ಶನದಲ್ಲಿ ಮಹಾಶಿವರಾತ್ರಿ ಕುರಿತು ವಿವರವಾದ ಮಾಹಿತಿ ನೀಡಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ ಹನುಮಂತಪ್ಪ ಕಾಕಿ, ಶಿವಕುಮಾರ್ ಜಾದವ್ ಸೇರಿದಂತೆ ಮತ್ತಿತರರು ಇದ್ದರು.