ಶಶಿಧರ ಬ ಶಿರಸಂಗಿ
ಶಿರಹಟ್ಟಿ 04: ಸುಡು ಬಿಸಿಲಿನಲ್ಲಿ ಸಾರ್ವಜನಿಕರ ಕುಡಿಯುವ ನೀರಿನ ದಾಹ ತೀರಿಸಬೇಕಾಗಿದ್ದ ಶುದ್ಧ ನೀರಿನ ಘಟಕ, ನೀರು ಸರಬರಾಜು ಇಲಾಖೆ ಹಾಗೂ ವಿದ್ಯುತ ಇಲಾಖೆಯ ಜಗಳದಿಂದ ನೀರಿನ ಘಟಕ ಕಾರ್ಯ ನಿರ್ವಹಿಸದೆ ಹಲವಾರು ತಿಂಗಳುಗಳಿಂದ ಸ್ಥಗಿತವಾಗಿರುವದು ಗ್ರಾಮಸ್ಥರಲ್ಲಿ ಆಕ್ರೋಷವನ್ನು ಉಂಟುಮಾಡಿದೆ.
ಹೌದು ಇದು ನಡೆದಿರುವದು ತಾಲೂಕಿನ ಜಲ್ಲಿಗೇರಿ ತಾಂಡಾದಲ್ಲಿ. ಸುಮಾರು 1500 ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಒಂದೇ ಒಂದು ಶುದ್ಧ ಕುಡಿಯುವ ನೀರಿನ ಘಟಕವಿದ್ದು, ಈಗ ಅದು ಕೂಡಾ ಕಾರ್ಯ ನಿರ್ವಹಿಸದೆ ಬಂದಾಗಿದೆ. ಮೊದಲು ಇದೇ ಘಟಕದಿಂದ ಗ್ರಾಮದ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ದೊರೆಯುತ್ತಿತ್ತು. ತಿಂಗಳ ಹಿಂದೆ ಮೋಟಾರ್ ಸುಟ್ಟಿದೆ ಎಂಬ ಕಾರಣದಿಂದ ಸ್ಥಗಿತವಾದ ನೀರಿನ ಘಟಕ ಇನ್ನೂ ಕೂಡಾ ಪ್ರಾರಂಭವಾಗದಿರುವದರಿಂದ ಅನಿವಾರ್ಯವಾಗಿ ಗ್ರಾಮದ ಜನರು ಅಶುಧ್ದ ನೀರನ್ನೇ ಕುಡಿಯುವ ಸ್ಥಿತಿ ಬಂದೊದಗಿದೆ.
ಮೋಟಾರ್ ರಿಪೇರಿ ಮಾಡಿಕೊಡಿ ಎಂದು ನೀರು ಸರಬರಾಜು ಇಲಾಖೆಯವರಿಗೆ ತಿಳಿಸಿದರೆ, ನಾವು ಮೋಟಾರ್ ರಿಪೇರಿ ಮಾಡುವದು ಮತ್ತೆ ಹೈ ವೊಲ್ಟೇಜ್ ವಿದ್ಯುತ್ನಿಂದ ಪುನಹಃ ಮೋಟರ್ ಸುಡುತ್ತದೆ. ಕಾರಣ ನೀವು ಮೊದಲು ವಿದ್ಯುತ್ ಇಲಾಖೆ ಅವರಿಗೆ ಇಲ್ಲಿ ಹೆಚ್ಚಿನ ವೊಲ್ಟೇಜ್ ಬರದಂತೆ ಕ್ರಮ ಕೈಗೊಳ್ಳಲೂ ತಿಳಿಸಿ ನಂತರ ರಿಪೇರಿ ಮಾಡುತ್ತೇವೆ ಎಂಬ ಉತ್ತರ ನೀಡುತ್ತಾರೆ. ಇನ್ನೂ ವಿದ್ಯುತ್ ಇಲಾಖೆ ಅವರ ಬಳಿ ಹೋದರೆ ಹಾಗೆಲ್ಲ ಒಂದೊಂದು ಕಡೆ ಒಂದು ರೀತಿಯ ಕರೆಂಟ್ ನೀಡಲು ಬರುವದಿಲ್ಲ ಇದು ಅವರದೇ ತಪ್ಪು ಸರಿಪಸಿಕೊಳ್ಳಲು ತಿಳಿಸಿ ಎಂದು ಕೆ.ಇ.ಬಿ ಅವರು ದಬಾಯಿಸುತ್ತಾರೆ. ಶುದ್ಧ ನೀರಿಗಾಗಿ ಇನ್ನೂ ಯಾರ ಬಳಿ ಹೋಗ ಬೇಕೆಂಬುವದು ತಿಳಿಯದಂತಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೊಡಿಕೊಳ್ಳುತ್ತಿದ್ದಾರೆ.